ಬೆಂಗಳೂರು, ಮೇ 6: ನೀರಿನ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಬೆಂಗಳೂರು ನಗರದಲ್ಲಿ ಶೀಘ್ರದ್ಲಲೇ ಬಿಯರ್ (Beer) ಬಿಕ್ಕಟ್ಟು ಕೂಡ ಸೃಷ್ಟಿಯಾಗಬಹುದು ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸಿದೆ. ಹೆಚ್ಚುತ್ತಿರುವ ಬೇಡಿಕೆ, ಕುಸಿದ ಪೂರೈಕೆಯೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ನಗರದ ಪಬ್‌ಗಳು ಮತ್ತು ಬ್ರೂವರೀಸ್ಗಳಲ್ಲಿ (Pubs and Breweries) ಬೇಡಿಕೆ ಗಣನೀಯವಾಗಿ ಹೆಚ್ಚಳವಾಗಿದೆ. ಆದರೆ, ಅದಕ್ಕೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಚಿಲ್ಲರೆ ಮಾರಾಟದ ಅಂಗಡಿಗಳಲ್ಲಿ ದಾಸ್ತಾನು ಮರುಸ್ಥಾಪಿಸುವಲ್ಲಿ ಕೂಡ ವಿಳಂಬವಾಗುತ್ತಿದೆ.
ಪೂರೈಕೆ ಸಮಸ್ಯೆಯ ಕಾರಣ ಅನೇಕ ಪಬ್‌ಗಳು ಮತ್ತು ಬ್ರೂವರೀಸ್‌ಗಳು ವಾರಾಂತ್ಯದ ಕೊಡುಗೆಗಳನ್ನು ನಿಲ್ಲಿಸಲು ಮುಂದಾಗಿವೆ. ಶೀಘ್ರದಲ್ಲೇ ಇದು ಜಾರಿಯಾಗಬಹುದು. 2 ಖರೀದಿಸಿದರೆ ಒಂದು ಉಚಿತ ಅಥವಾ ಒಂದು ಖರೀದಿಸಿದರೆ ಮತ್ತೊಂದು ಉಚಿತ ಇತ್ಯಾದಿ ಆಫರ್ಗಳನ್ನು ನಿಲ್ಲಿಸಲು ಪಬ್‌ಗಳು ಮುಂದಾಗಿವೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಕೇವಲ ಬೇಸಿಗೆಯ ಕಾರಣದಿಂದಾಗಿ ಬೇಡಿಕೆಯ ಹೆಚ್ಚಳವಾಗಿರುವುದಲ್ಲ. ದೀರ್ಘ ವಾರಾಂತ್ಯಗಳು, ಸಾಲು ರಜೆಗಳೂ ಸಹ ಕಾರಣವಾಗಿವೆ ಎಂದು ವರದಿ ಉಲ್ಲೇಖಿಸಿದೆ.
ಈ ವರ್ಷ ಬಳಕೆ, ಬೇಡಿಕೆ ನಿರೀಕ್ಷೆಯನ್ನು ಮೀರಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಉದ್ಯಮ ಸಿದ್ಧವಾಗಿಲ್ಲ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ, ನಾವು ಹಣ್ಣಿನ ಫ್ಲೇವರ್ಗಳ ಬಿಯರ್ ಅನ್ನು ಪರಿಚಯಿಸುತ್ತೇವೆ. ಮಾವಿನಹಣ್ಣು ಮತ್ತು ಅನಾನಸ್‌ಗಳಂತಹ ಹಣ್ಣುಗಳ ಲಭ್ಯತೆಯ ಮೇಲೆ ಮಾರಾಟ ಹೆಚ್ಚು ಅವಲಂಬಿತವಾಗಿದೆ. ಈ ವರ್ಷ, ಮಾವಿನಹಣ್ಣಿನ ಸಮಸ್ಯೆಯಿಂದಾಗಿ ಹಣ್ಣಿನ ಬಿಯರ್‌ನ ಮಾರಾಟವು ಕಡಿಮೆಯಾಗಿದೆ. ಪರಿಣಾಮವಾಗಿ ಜನರು ಸಾಮಾನ್ಯ ಬಿಯರ್ ಅನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಮಾರತ್ತಹಳ್ಳಿಯ ಪ್ರಮುಖ ಮದ್ಯದ ಅಂಗಡಿಯ ಪ್ರತಿನಿಧಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಬಿಸಿಲು, ಐಪಿಎಲ್ ಸೀಸನ್ ಮತ್ತು ದೀರ್ಘ ವಾರಾಂತ್ಯದಲ್ಲಿ ಜನರು ಹೆಚ್ಚೆಚ್ಚು ಬರುವುದರಿಂದ ಮಾರಾಟವೂ ಹೆಚ್ಚುತ್ತಲೇ ಇತ್ತು. ಈ ವರ್ಷ ಸರಿಸುಮಾರು 30,000 ಲೀಟರ್‌ಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ. ಹಿಂದಿನ ವರ್ಷ ಈ ಅವಧಿಯಲ್ಲಿ ಸುಮಾರು 9,000 ಲೀಟರ್ ಮಾರಾಟವಾಗಿತ್ತಷ್ಟೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬೇಸಿಗೆ ಬೇಗೆ: ರಾಜ್ಯದಲ್ಲಿ 11 ದಿನಗಳಲ್ಲಿ 17 ಲಕ್ಷ ಲೀ ಕೋಲ್ಡ್ ಬಿಯರ್ ಮಾರಾಟ!
ಗ್ರಾಹಕರು ಇತರ ಪಾನೀಯಗಳಿಗಿಂತ ಬಿಯರ್ ಅನ್ನೇ ಹೆಚ್ಚಾಗಿ ಆರ್ಡರ್ ಮಾಡುತ್ತಿದ್ದಾರೆ. ಹೀಗಾಗಿ ಮಾರಾಟವು ಶೇ 40 ರಷ್ಟು ಹೆಚ್ಚಾಗಿದೆ. ಪೂರೈಕೆ ವಿಳಂಬದಿಂದಾಗಿ ಮಾರಾಟ ನಿರ್ವಹಿಸುವುದು ಸವಾಲಿನ ಸಂಗತಿಯಾಗಿದೆ ಎಂದು ಗಿಲ್ಲಿಸ್ ರೆಸ್ಟೊಬಾರ್‌ನ ಕಾರ್ಯಾಚರಣಾ ಮುಖ್ಯಸ್ಥರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ