ಸಂತ್ರಸ್ತೆ ಅಪಹರಣ ಪ್ರಕರಣ: ಭವಾನಿ ರೇವಣ್ಣರಿಗೂ ಕಾನೂನು ಸಂಕಷ್ಟ?
Kidnap Case: ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ಕಾಣೆಯಾಗಿರುವ ಬಗ್ಗೆ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರ ಬಂಧನವಾಗಿದೆ. ಇದೇ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೂ ಕಾನೂನು ಕಂಟಕ ಎದುರಾಗುವ ಸಾಧ್ಯತೆ ಇದೆ.
ಬೆಂಗಳೂರು, ಮೇ 06: ಮಾಜಿ ಸಚಿವ ಹೆಚ್ಡಿ ರೇವಣ್ಣ (HD Revanna) ಮತ್ತು ಹಾಸನ ಲೋಕಸಭಾ ಕ್ಷೇತ್ರ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಅಲ್ಲದೆ ಹೆಚ್ಡಿ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಸೇರಿದಂತೆ ಅಪಹರಣ ಪ್ರಕರಣವೂ ದಾಖಲಾಗಿದೆ. ಪತಿ ಮತ್ತು ಪುತ್ರನ ಪ್ರಕರಣದಲ್ಲಿ ಭವಾನಿ ರೇವಣ್ಣ (Bhavni Revanna) ಅವರ ಹೆಸರೂ ಉಲ್ಲೇಖವಾಗಿದ್ದು ಅವರಿಗೂ ಕಾನೂನು ಕಂಟಕ ಎದುರಾಗುವ ಸಾಧ್ಯತೆ ಇದೆ. ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣದಲ್ಲೂ ಭವಾನಿ ರೇವಣ್ಣ ಅವರ ಹೆಸರು ಕೇಳಿಬಂದಿದೆ.
ಈ ಎರಡು ಪ್ರಕರಣದಲ್ಲಿ ಕಿಡ್ನಾಪ್ ಕೇಸ್ ಭವಾನಿ ರೇವಣ್ಣ ಅವರಿಗೆ ಹೆಚ್ಚು ಮುಳುವಾಗುವ ಸಾಧ್ಯತೆ ಇದೆ. ಏಕೆಂದರೆ ಕಿಡ್ನಾಪ್ ಕೇಸ್ನಲ್ಲಿ “ಭವಾನಿ ರೇವಣ್ಣ ಅವರು ನಿಮ್ಮನ್ನು ಕರೆದುಕೊಂಡು ಬಾ ಅಂತ ಹೇಳಿದ್ದಾರೆ” ಎಂದು ಹೇಳಿ ಸಂತ್ರಸ್ತೆಯನ್ನು ಅಪಹರಿಸಲಾಗಿದೆ. ಹೀಗಾಗಿ ಕಿಡ್ನಾಪ್ ಕೇಸ್ನಲ್ಲಿ ಭವಾನಿ ರೇವಣ್ಣಗೆ ಕಾನೂನು ಕಂಟಕ ಎದುರಾಗು ಸಾಧ್ಯತೆ ಇದೆ.
ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ಭವಾನಿ ರೇವಣ್ಣಗೆ ನೊಟೀಸ್ ನೀಡಿ ಮಾಹಿತಿ ಪಡೆದಿದೆ. ತನಿಖೆ ವೇಳೆ ಏನಾದರೂ ಭವಾನಿ ವಿರುದ್ಧ ಸಾಕ್ಷಾಧಾರಗಳು ಸಿಕ್ಕರೇ ಆಗ ಅವರು ಕೂಡ ಬಂಧನವಾಗುವ ಸಾಧ್ಯತೆ ಇದೆ.
ಭವಾನಿ ರೇವಣ್ಣ ಸಂಬಂಧಿಯ ಬಂಧನ
ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು ಎನ್ನಲಾದ ಕೆಆರ್ ನಗರದ ಸಂತ್ರಸ್ತೆ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಅವರ ಸಂಬಂಧಿಯೊಬ್ಬರನ್ನು ಎಸ್ಐಟಿ ಅಧಿಕಾರಿಗಳು ಗುರುವಾರ (ಮೇ 02) ರಂದು ಬಂಧಿಸಿದ್ದರು. ಇದು ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಂಧನವಾಗಿತ್ತು.
ಇದನ್ನೂ ಓದಿ: ತಲೆಮರೆಸಿಕೊಂಡದ್ದು ಸಾಕು, ವಿಚಾರಣೆಗೆ ಹಾಜರಾಗು: ಪ್ರಜ್ವಲ್ಗೆ ಕುಟುಂಬಸ್ಥರು, ಆಪ್ತರಿಂದಲೇ ಹೆಚ್ಚಾದ ಒತ್ತಡ
ಏನಿದು ಕಿಡ್ನಾಪ್ ಕೇಸ್?
ವ್ಯಕ್ತಿಯೊಬ್ಬರು ತನ್ನ ತಾಯಿ ನಾಪತ್ತೆಯಾಗಿದ್ದಾರೆ. ಬಿಡುಗಡೆಯಾದ ಅಶ್ಲೀಲ ವಿಡಿಯೊದಲ್ಲಿ ಅವರ ಚಿತ್ರವೂ ಇತ್ತು, ಬಳಿಕ ಅವರು ಕಣ್ಮರೆಯಾಗಿದ್ದಾರೆ ಎಂದು ಮೇ 2ರ ತಡರಾತ್ರಿ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ರೇವಣ್ಣ ಪತ್ನಿ ಭವಾನಿಯವರ ಸಂಬಂಧಿಯೂ ಆಗಿರುವ ಸತೀಶ್ ಬಾಬು ಎಂಬವರನ್ನು ಈಗಾಗಲೇ ಎಸ್ಐಟಿ ಬಂಧಿಸಿದೆ. ಇವರನ್ನು ಆರೋಪಿ ಸಂಖ್ಯೆ 2 ಎಂದು ಎಸ್ಐಟಿ ಗುರುತಿಸಿದೆ. ರೇವಣ್ಣ ಮೊದಲ ಆರೋಪಿಯಾಗಿದ್ದಾರೆ. ಸಂತ್ರಸ್ತೆಯ 20 ವರ್ಷದ ಪುತ್ರ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು.
ಮಹಿಳೆಯ ಪತ್ತೆಗಾಗಿ ನಂತರ ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳು ಮತ್ತು ಬೆಂಗಳೂರು ನಗರ ಸೇರಿದಂತೆ ವಿವಿಧಡೆ ಪರಿಶೀಲನೆ ನಡೆಸಲಾಗಿತ್ತು. ಬಳಿಕ ಇಂದು ಸಂಜೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ರೇವಣ್ಣಗೆ ಎಸ್ಐಟಿ ಮೂರನೇ ನೋಟಿಸ್ ನೀಡಿತ್ತು. ಇದೀಗ ಅವರನ್ನು ಬಂಧಿಸಲಾಗಿತ್ತು.
ಇನ್ನು ಕಿಡ್ನ್ಯಾಪ್ ಆದ ಮಹಿಳೆ ರೇವಣ್ಣ ಅವರ ಆಪ್ತನ ತೋಟದ ಮನೆಯಲ್ಲಿ ಪತ್ತೆಯಾಗಿದ್ದು. ಬಳಿಕ ಎಸ್ಐಟಿ ಅಧಿಕಾರಿಗಳು ಮಹಿಳೆಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದ್ದಾರೆ. ಆದ್ರೆ, ಮಹಿಳೆ ಎಸ್ಐಟಿ ಅಧಿಕಾರಿಗಳ ಮುಂದೆ ಗೊಂದಲದ ಹೇಳಿಕೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:35 am, Mon, 6 May 24