ಬೆಂಗಳೂರು, ಜೂನ್ 07: ವಾಟರ್ ಟ್ಯಾಂಕರ್ (Water Tanker) ಡಿಕ್ಕಿ ಹೊಡೆದ ಪರಿಣಾಮ ಅಕ್ಕ ಮತ್ತು ತಮ್ಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಎಲೆಕ್ಟ್ರಾನಿಕ್ ಸಿಟಿ (Electronic City) ಸಮೀಪದ ದೊಡ್ಡ ನಾಗಮಂಗಲದಲ್ಲಿ ನಡೆದಿದೆ. ದೊಡ್ಡ ನಾಗಮಂಗಲದ ಕೆಂಪೇಗೌಡ ಬಡಾವಣೆ ನಿವಾಸಿ ಮಧುಮಿತಾ (20) ರಂಜನ್ (18) ಮೃತ ದುರ್ದೈವಿಗಳು.
ಮದುಮಿತಾ ಬೆಂಗಳೂರಿನ ಎಸ್ಎಸ್ಎಂಆರ್ವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇಂದು (ಜೂ.7) ಕಾಲೇಜಿನ ಮೊದಲ ದಿನ ಹಿನ್ನೆಲೆಯಲ್ಲಿ ಅಕ್ಕ ಮದುಮಿತಾರನ್ನು ಕಾಲೇಜಿಗೆ ಬಿಟ್ಟು ಬರಲು ತಮ್ಮ ರಂಜನ್ ಹೋಗುತ್ತಿದ್ದನು. ಈ ವೇಳೆ ವೇಗವಾಗಿ ಬಂದ ವಾಟರ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ಅಕ್ಕ ಮತ್ತು ತಮ್ಮ ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ.
ಬಳಿಕ ವಾಟರ್ ಟ್ಯಾಂಕರ್ನ ಹಿಂಬದಿ ಚಕ್ರ ಇಬ್ಬರ ತಲೆ ಮೇಲೆ ಹರಿದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಟರ್ ಟ್ಯಾಂಕರ್ ಬೈಕ್ಗೆ ಡಿಕ್ಕಿ ಹೊಡೆಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಾಟರ್ ಟ್ಯಾಂಕರ್ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆ ಚಾಲನೆಯೇ ಅಪಘಾತಕ್ಕೆ ಕಾರಣ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ KPTCLನ ಇಬ್ಬರು ಸಿಬ್ಬಂದಿ, ಓರ್ವ ಲೈನ್ ಮ್ಯಾನ್ ಸಾವು
ವಿಜಯನಗರ: ಖಾಸಗಿ ಬಸ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದ್ದು, ಓರ್ವ ಮೃತಪಟ್ಟಿದ್ದಾನೆ. ಹಲವರಿಗೆ ಗಾಯಗಳಾಗಿವೆ. ಹೊಸಪೇಟೆ ತಾಲೂಕಿನ ಜಂಬಯ್ಯನ ಕೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಘಟನೆ ನಡೆದಿದೆ. ಖಾಸಗಿ ಬಸ್ ಬೆಂಗಳೂರಿನಿಂದ ಹೊಸಪೇಟೆ ಕಡೆಗೆ ಬರುತ್ತಿತ್ತು. ಲಾರಿ ಹೊಸಪೇಟೆ ಕಡೆಯಿಂದ ಕೂಡ್ಲಿಗಿ ಕಡೆ ಹೊರಟಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿದ್ಯುತ್ ತಂತಿ ತುಳಿದು ಬಾಲಕಿ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾತ್ರಿಕಾಯನಹಟ್ಟಿಯಲ್ಲಿ ನಡೆದಿದೆ. ಎರಡನೇ ತರಗತಿ ಓದುತ್ತಿದ್ದ 8 ವರ್ಷದ ಬಾಲಕಿ ತುಳಸಿ ಮೃತ ದುರ್ದೈವಿ. ಕಾನಾಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.