ಬೆಂಗಳೂರು, ಏಪ್ರಿಲ್ 19: ಬೆಂಗಳೂರಿನ ಜಲಕ್ಷಾಮ ತಣಿಸಲು ಹರಸಾಹಸ ಪಡುತ್ತಿರುವ ಜಲಮಂಡಳಿ (BWSSB), ಇದೀಗ ಮತ್ತೊಂದು ಹೊಸ ಯೋಜನೆಗೆ ಮುಂದಾಗಿದೆ. ಅಪಾರ್ಟ್ಮೆಂಟ್ಗಳಲ್ಲಿ ಬಳಕೆಯಾದ ನೀರನ್ನು ಖರೀದಿಸಿ, ಸಂಸ್ಕರಿಸಿ (Treated Water) ಮಾರಾಟ ಮಾಡಲು ಒಡಂಬಡಿಕೆ ಮಾಡಿಕೊಂಡಿದೆ. ಆ ಮೂಲಕ ನೀರಿನ ಸಮಸ್ಯೆಗೆ ತುಸು ಮಟ್ಟಿನ ಪರಿಹಾರ ಕಂಡುಕೊಳ್ಳಲು ತಯಾರಿ ನಡೆಸುತ್ತಿದೆ. ನೀರು ಪೂರೈಕೆಗೆ ಹೆಚ್ಚುವರಿ ಮೂಲಗಳ ಹುಡುಕಾಟದಲ್ಲಿದ್ದ ಜಲಮಂಡಳಿ ಇದೀಗ ಕುಡಿಯುವ ಉದ್ದೇಶ ಹೊರತುಪಡಿಸಿದ ಇತರೆ ಚಟುವಟಿಕೆಗಳ ಬಳಕೆಗಳ ನೀರಿಗಾಗಿ ಹೊಸದೊಂದು ದಾರಿ ಹುಡುಕಲು ಮುಂದಾಗಿದೆ. ನಗರದ 10 ಸಾವಿರಕ್ಕೂ ಅಧಿಕ ಅಪಾರ್ಟ್ಮೆಂಟ್ಗಳಿಂದ ಬಳಕೆಯಾದ ನೀರನ್ನು ಪಡೆದು ಸಂಸ್ಕರಿಸಿ ಮಾರಾಟ ಮಾಡಲು ಸಜ್ಜಾಗಿದ್ದು, ಇದಕ್ಕಾಗಿ ಅಪಾರ್ಟ್ಮೆಂಟ್ ಅಸೋಷಿಯೇಷನ್ಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಜಲ ಮಂಡಳಿ ಅಧ್ಯಕ್ಷ ರಾಮ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಮೂಲಕ ಆದಾಯ ಪಡೆಯುವುದಕ್ಕೂ ಪ್ಲಾನ್ ಮಾಡಿರುವ ಜಲಮಂಡಳಿ, ಹೆಚ್ಚುವರಿಯಾಗಿ 800 ಎಂಎಲ್ಡಿಯಷ್ಟು ನೀರು ಪಡೆದುಕೊಳ್ಳಲಿದೆ. ಕೆಲ ಅಪಾರ್ಟ್ಮೆಂಟ್ಗಳು ಈಗಾಗಲೇ ಬಳಿಸಿದ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಿಕೊಳ್ಳುತ್ತಿವೆ. ಈ ಪೈಕಿ ಶೇ 50 ರಷ್ಟು ಸಂಸ್ಕರಿಸಿದ ನೀರು ಮಾತ್ರ ಅಪಾರ್ಟ್ಮೆಂಟ್ಗಳಲ್ಲಿ ಬಳಕೆಯಾಗುತ್ತಿದೆ. ಉಳಿದ ನೀರು ನಾಲೆಗಳಿಗೆ, ರಾಜಕಾಲುವೆಗಳಿಗೆ, ಡ್ರೈನೇಜ್ಗಳಿಗೆ ಬಿಟ್ಟು ಪೋಲು ಮಾಡಲಾಗುತ್ತಿದೆ. ಹೀಗೆ ಪೋಲಾಗ್ತಿರುವ ನೀರನ್ನು ಇತರೆ ಅಗತ್ಯತೆಗಳಿಗೆ ಬಳಸಲು ಜಲ ಮಂಡಳಿ ಈಗ ಹೊಸ ಯೋಜನೆ ಹಾಕಿಕೊಂಡಿದೆ.
ಸದ್ಯ ಸಂಸ್ಕರಿತ ನೀರಿಗೂ ಡಿಮ್ಯಾಂಡ್ ಹೆಚ್ಚಾಗ್ತಿದ್ದು, ಈಗ 62 ಲಕ್ಷ ಲೀಟರ್ ಸಂಸ್ಕರಿತ ನೀರಿಗೆ ಬೇಡಿಕೆ ಸೃಷ್ಟಿಯಾಗಿದೆ. ಕುಡಿಯುವ ನೀರನ್ನು ಹೊರತುಪಡಿಸಿ ಇತರೆ ಕೆಲಸಗಳಿಗೆ ಬೇಕಾದ ನೀರಿಗಾಗಿ ಈ ಸಂಸ್ಕರಿತ ನೀರು ಬಳಸಲು ತಯಾರಿ ನಡೆದಿದ್ದು, ಬಂದ ಲಾಭದಲ್ಲಿ ಅಪಾರ್ಟ್ಮೆಂಟ್ಗಳಿಗೂ ಪಾಲು ನೀಡಲಾಗುತ್ತದೆ.
ಇದನ್ನೂ ಓದಿ: ಲಾಲ್ ಬಾಗ್ನಲ್ಲಿ ನೀರಿಲ್ಲದೆ ಒಣಗುತ್ತಿವೆ ಗಿಡಗಳು: ತೋಟಗಾರಿಕೆ ಇಲಾಖೆಗೂ ತಟ್ಟಿದ ನೀರಿನ ಬಿಕ್ಕಟ್ಟಿನ ಬಿಸಿ
ಹನಿ ನೀರಿಗೂ ಪರದಾಡುತ್ತಿರುವ ಬೆಂಗಳೂರಿಗೆ ಇದೀಗ ಹೆಚ್ಚುವರಿಯಾಗಿ ನೀರು ಪೂರೈಕೆ ಮಾಡಲು ಜಲಮಂಡಳಿ ಮುಂದಾಗಿದೆ. ಅನಗತ್ಯವಾಗಿ ಪೋಲಾಗುತ್ತಿರುವ ನೀರನ್ನು ತಡೆದು ಅಗತ್ಯವಿರುವ ಜನರಿಗೆ ರಿಯಾಯತಿ ಬೆಲೆಯಲ್ಲಿ ನೀಡಲು ತಯಾರಿ ನಡೆದಿದೆ.
ವರದಿ – ಶಾಂತಮೂರ್ತಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ