ಬೆಂಗಳೂರು, ಮಾರ್ಚ್ 20: ಗುಪ್ತಚರ ಇಲಾಖೆ (Intelligence Department) ಹಾಗೂ ಸೇನಾ ಇಂಟಲಿಜೆನ್ಸ್ (Military Intelligence) ವಿಭಾಗ ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಪಾಕಿಸ್ತಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಗೂಢಚಾರನೊಬ್ಬನನ್ನು (Pakistan Spy) ಬೆಂಗಳೂರಿನಲ್ಲಿ (Bengaluru) ಬಂಧಿಸಲಾಗಿದೆ. ಉತ್ತರಪ್ರದೇಶದ ಗಾಜಿಯಾಬಾದ್ ಮೂಲದ ನಿವಾಸಿ, ಬಿಇಎಲ್ನಲ್ಲಿ ಕೆಲಸ ಮಾಡುತ್ತಿದ್ದ ದೀಪ್ ರಾಜ್ ಚಂದ್ರ ಎಂಬಾತನೇ ಬಂಧನಕ್ಕೊಳಗಾದ ವ್ಯಕ್ತಿ. ಈತ ಬಿಇಎಲ್ನ ಪ್ರಾಡಕ್ಟ್ ಡೆವಲಪ್ಮೆಂಟ್ ಆ್ಯಂಡ್ ಇನ್ನೋವೇಶನ್ ಸೆಂಟರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನ ಮತ್ತಿಕೆರೆ ಬಳಿ ನೆಲೆಸಿದ್ದ. ಈತ ಬಿಇಎಲ್ನಿಂದ ರಕ್ಷಣಾ ವಿಚಾರಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಎಂಬ ಆರೋಪವಿದೆ.
ಕೇಂದ್ರ ಮತ್ತು ರಾಜ್ಯ ಗುಪ್ತಚರ ಅಧಿಕಾರಿಗಳು, ಮಿಲಿಟರಿ ಇಂಟಲಿಜೆನ್ಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿವೆ.
ದೀಪ್ ರಾಜ್ ಚಂದ್ರ ಪಾಕಿಸ್ತಾನದಲ್ಲಿರುವ ಏಜೆಂಟ್‌ಗಳೊಂದಿಗೆ ಸಂಪರ್ಕ ಸಾಧಿಸಲು ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಂ ಸೇರಿದಂತೆ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಸಂವಹನ ಮಾರ್ಗಗಳನ್ನು ಬಳಸಿರಬಹುದು ಎಂದು ಗುಪ್ತಚರ ಸಂಸ್ಥೆಗಳು ಶಂಕಿಸಿವೆ. ಆರೋಪಿಯು ರಹಸ್ಯ ಇ-ಮೇಲ್ ಖಾತೆ ತೆರೆದು ಮಾಹಿತಿ ವಿನಿಮಯ ಮಾಡಿದ ಬಗ್ಗೆಯೂ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆಘಾತಕಾರಿ ವಿವರಗಳನ್ನು ಹಂಚಿಕೊಂಡಿದ್ದಾರೆ.
ಆರೋಪಿಯು ದೀರ್ಘಕಾಲದವರೆಗೆ ರಕ್ಷಣಾ ಸಂಬಂಧಿತ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ರಾಷ್ಟ್ರೀಯ ಭದ್ರತೆಯ ಬಗ್ಗೆ ಗಂಭೀರ ಕಳವಳಕ್ಕೆ ಕಾರಣವಾಗಿದೆ.
ಗುಪ್ತಚರ ಸಂಸ್ಥೆಗಳು ಪ್ರಸ್ತುತ ಡಿಜಿಟಲ್ ವಹಿವಾಟುಗಳು ಮತ್ತು ಸಂವಹನ ದಾಖಲೆಗಳನ್ನು ವಿಶ್ಲೇಷಿಸುತ್ತಿದ್ದಾರೆ. ಆರೋಪಿಯು ಬಿಇಎಲ್ ಹಿರಿಯ ಎಂಜಿನಿಯರ್ ಆಗಿದ್ದು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಇದನ್ನೂ ಓದಿ: ಸ್ಮಗ್ಲಿಂಗ್ ಅಡ್ಡೆಯಾದ ಕೆಂಪೇಗೌಡ ವಿಮಾನ ನಿಲ್ದಾಣ: 3 ಪ್ರಕರಣಗಳಲ್ಲಿ 130 ಕೋಟಿ ರೂ. ಮೌಲ್ಯದ ಕಳ್ಳಸಾಗಾಣಿಕೆ
ಪಾಕಿಸ್ತಾನದ ಗುಪ್ತಚರ ಏಜೆಂಟ್‌ಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಕುಮಾರ್ ವಿಕಾಸ್ ಎಂಬ ವ್ಯಕ್ತಿಯನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಬುಧವಾರ ಬಂಧಿಸಲಾಗಿತ್ತು. ಕುಮಾರ್ ವಿಕಾಸ್ ಕಾನ್ಪುರ್ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಜೂನಿಯರ್ ವರ್ಕ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಆತನ ವಿಚಾರಣೆ ವೇಳೆ ಬೆಂಗಳೂರಿನಿಂದಲೂ ರಕ್ಷಣಾ ಮಾಹಿತಿ ಸೋರಿಕೆಯಾಗುತ್ತಿರುವ ಬಗ್ಗೆ ಸುಳಿವು ದೊರೆತಿತ್ತು. ಈ ಮಾಹಿತಿಯ ಆಧಾರದಲ್ಲಿ ಗುಪ್ತಚರ ಸಂಸ್ಥೆಗಳು ಬೆಂಗಳೂರಿನಲ್ಲಿ ದಾಳಿ ನಡೆಸಿದಾಗ ದೀಪ್ ರಾಜ್ ಚಂದ್ರ ಬಲೆಗೆ ಬಿದ್ದಿದ್ದಾನೆ.
Published On - 9:04 am, Thu, 20 March 25