ರಜೆ ನಗದು ಸೌಲಭ್ಯ ಉದ್ಯೋಗಿಯ ಸಾಂವಿಧಾನಿಕ ಹಕ್ಕು: ಹೈಕೋರ್ಟ್ ಮಹತ್ವದ ತೀರ್ಪು
ಕಾನೂನು ಪ್ರಕಾರ ಹೆರಿಗೆ ರಜೆ, ಮಾತೃತ್ವದ ರಜೆಯ ಹಕ್ಕಿಗೆ ಹೊರಗುತ್ತಿಗೆ ನೌಕರರೂ ಅರ್ಹರಾಗಿದ್ದಾರೆ. ಹೀಗಾಗಿ ಅರ್ಜಿದಾರರು ಹೆರಿಗೆ ರಜೆಗೆ ತೆರಳುವ ಮುನ್ನ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗೆ ಕಾನೂನು ಬದ್ಧ ನೇಮಕಾತಿ ಆಗುವವರೆಗೂ ಅರ್ಜಿದಾರರಿಗೆ ಕೆಲಸಕ್ಕೆ ಅನುಮತಿ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪುವೊಂದನ್ನು ನೀಡಿತ್ತು. ಇದೀಗ ರಜೆ ನಗದು ಸೌಲಭ್ಯ ಉದ್ಯೋಗಿಯ ಸಾಂವಿಧಾನಿಕ ಹಕ್ಕು ಎಂದಿದೆ.

ಬೆಂಗಳೂರು, (ಮಾರ್ಚ್ 19): ರಜೆ ನಗದು ಸೌಲಭ್ಯ (leave encashment) ಉದ್ಯೋಗಿಯ ಸಾಂವಿಧಾನಿಕ ಹಕ್ಕು. ರಜೆ ನಗದು ಸೌಲಭ್ಯವನ್ನು ನಿರಾಕರಿಸುವಂತಿಲ್ಲವೆಂದು ಕರ್ನಾಟಕ ಹೈಕೋರ್ಟ್ (Karnataka high Court) ಮಹತ್ವದ ತೀರ್ಪುವೊಂದನ್ನು ನೀಡಿದೆ. ಗ್ರಾಮೀಣ ಬ್ಯಾಂಕ್ವೊಂಡು ತನ್ನ ಉದ್ಯೋಗಿಯನ್ನು ವಜಾಗೊಳಿಸಿತ್ತು. ಹೀಗಾಗಿ ರಜೆ ನಗದು ಸೌಲಭ್ಯ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಉದ್ಯೋಗಿಗೆ ಆತ ಗಳಿಸಿದ ರಜೆ ನಗದು ಸೌಲಭ್ಯ ನೀಡುವಂತೆ ಮಹತ್ವದ ಆದೇಶ ಹೊರಡಿಸಿದೆ.
ನಿವೃತ್ತಿ ವೇತನ, ರಜೆ ನಗದು ಉದ್ಯೋಗಿ ಗಳಿಸಿದ ಆಸ್ತಿಯಾಗಿವೆ. ಹೀಗಾಗಿ ಸಂವಿಧಾನದ ಆರ್ಟಿಕಲ್ 300A ಅಡಿ ಇದು ಉದ್ಯೋಗಿಯ ಹಕ್ಕು. ಕಾನೂನಿನ ಬೆಂಬಲವಿಲ್ಲದೇ ಇಂತಹ ಲೀವ್ ಎನ್‌ಕ್ಯಾಶ್‌ಮೆಂಟ್ ಸೌಲಭ್ಯ ನಿರಾಕರಿಸಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಲಿಂಗನಗೌಡ ಎಂಬ ಉದ್ಯೋಗಿಯನ್ನು ಗ್ರಾಮೀಣ ಬ್ಯಾಂಕ್ ವಜಾಗೊಳಿಸಿತ್ತು. ಈ ಕಾರಣದಿಂದ ಲಿಂಗನಗೌಡ ಅವರ ರಜೆ ನಗದು ಸೌಲಭ್ಯ ನೀಡಲು ಗ್ರಾಮೀಣ ಬ್ಯಾಂಕ್ ನಿರಾಕರಿಸಿತ್ತು. ಹೀಗಾಗಿ ಲಿಂಗನಗೌಡ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ರಜೆ ನಗದು ಕೊಡಿಸುವಂತೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸಂವಿಧಾನದ ಆರ್ಟಿಕಲ್ 300 A ಅಡಿ ಇದು ಉದ್ಯೋಗಿಯ ಹಕ್ಕು. ಕಾನೂನಿನ ಬೆಂಬಲವಿಲ್ಲದೇ ಇಂತಹ ಸೌಲಭ್ಯ ನಿರಾಕರಿಸಬಾರದು ಎಂದು ಹೇಳಿ ಅರ್ಜಿದಾರರಿಗೆ ರಜೆ ನಗದು ಸೌಲಭ್ಯವನ್ನು ನೀಡುವಂತೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ
ದುರ್ನಡತೆ ಆರೋಪದ ಮೇಲೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕು ಕಂಪ್ಲಿಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಉದ್ಯೋಗಿ ಲಿಂಗನಗೌಡ ಅವರನ್ನು ಕೆಲಸದಿಂದ ವಜಾ ಮಾಡಿತ್ತು. ವಿಚಾರಣೆಯ ನಂತರ 2014ರ ಡಿಸೆಂಬರ್ 19ರಿಂದ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಬಳಿಕ ಲೀಮಗನಗೌಡ ಅವರು ರಜೆ ನಗದು ನೀಡುವಂತೆ ಕೋರಿ ಬ್ಯಾಂಕ್ಗೆ ಮನವಿ ಸಲ್ಲಿಸಿದ್ದರು. ಆದ್ರೆ, ಬ್ಯಾಂಕ್ ನೀಡಲು ನಿರಾಕರಿಸಿತ್ತು. ಇದರಿಂದ ಲಿಂಗನಗೌಡ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:04 pm, Wed, 19 March 25