ಸ್ಮಗ್ಲಿಂಗ್ ಅಡ್ಡೆಯಾದ ಕೆಂಪೇಗೌಡ ವಿಮಾನ ನಿಲ್ದಾಣ: 3 ಪ್ರಕರಣಗಳಲ್ಲಿ 130 ಕೋಟಿ ರೂ. ಮೌಲ್ಯದ ಕಳ್ಳಸಾಗಾಣಿಕೆ
ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಬಳಿಕ ಸುದ್ದಿಯಲ್ಲಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಸ್ಮಗ್ಲಿಂಗ್ ಅಡ್ಡೆಯಾಗುತ್ತಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ಮಾರ್ಚ್ ತಿಂಗಳಲ್ಲಿ ಈವರೆಗೆ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಸುಮಾರು 130 ಕೋಟಿ ರೂ. ಮೌಲ್ಯದ ಕಳ್ಳಸಾಗಾಣಿಕೆ ಬೆಳಕಿಗೆ ಬಂದಿದೆ.

ಬೆಂಗಳೂರು, ಮಾರ್ಚ್ 20: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಅತ್ಯಾಧುನಿಕವಾಗಿದೆ. ಇಲ್ಲಿ ಪ್ರಪಂಚದ ಅತ್ಯಂತ ಉತ್ತಮವಾದ ಭದ್ರತಾ ವ್ಯವಸ್ಥೆ ಇದೆ. ಅದರಲ್ಲೂ ಟರ್ಮಿನಲ್ 2 (KIA Terminal 2) ಕಾರ್ಯಾಚರಣೆ ಆರಂಭಿಸಿದ ಬಳಿಕ ವಿಮಾನ ನಿಲ್ದಾಣದ ಗುಣಮಟ್ಟ ಮತ್ತೊಂದು ಹಂತಕ್ಕೆ ತಲುಪಿದೆ ಎನ್ನಲಾಗಿತ್ತು. ಆದರೆ, ಇದೇ ಏರ್ಪೋರ್ಟ್ ಸ್ಮಗ್ಲಿಂಗ್ (Smuggling) ವಿಚಾರದಲ್ಲಿಯೂ ಮತ್ತೊಂದು ಹಂತ ತಲುಪಿದೆ! ಯಾಕೆಂದರೆ, ಕೇವಲ 19 ದಿನಗಳ ಅವಧಿಯಲ್ಲಿ ವಿಮಾನ ನಿಲ್ದಾಣದ ಮೂಲಕ ಬರೋಬ್ಬರಿ 130 ಕೋಟಿ ರೂ. ಮೌಲ್ಯದ ಕಳ್ಳಸಾಗಣೆ ಪತ್ತೆಯಾಗಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಮಗ್ಲಿಂಗ್ ಅಡ್ಡೆಯಾಗುತ್ತಾ ಇದೆಯೇ ಎಂಬ ಪ್ರಶ್ನೆ ಮೂಡಲು ಇತ್ತೀಚಿನ ಮೂರು ಘಟನೆಗಳು ಕಾರಣ. ಈ ಮೂರು ಕೇಸ್ಗಳಿಂದ ಏರ್ಪೋರ್ಟ್ ಮೇಲೆ ಅನುಮಾನ ಹೆಚ್ಚಾಗಿದೆ.
ಮಂಗಳೂರು ಪೊಲೀಸ್ ಬೃಹತ್ ಡ್ರಗ್ಸ್ ಕಾರ್ಯಚರಣೆ
ಮಂಗಳೂರು ಪೊಲೀಸರು ಕರ್ನಾಟಕದ ಇತಿಹಾಸದಲ್ಲಿಯೇ ಅತಿದೊಡ್ಡ ಡ್ರಗ್ಸ್ ದಂಧೆಯನ್ನು ಬಯಲು ಮಾಡಿದ್ದಾರೆ. ಅದರಲ್ಲಿ ಸಿಕ್ಕಿಬಿದ್ದ ಇಬ್ಬರ ಬಳಿಯಿಂದ ಸುಮಾರು 75 ಕೋಟಿ ರೂ. ಮೌಲ್ಯದ ಎಂಡಿಎಂಎ ಜಪ್ತಿ ಮಾಡಿಕೊಂಡಿದ್ದಾರೆ. ಈ ಕೇಸ್ನಲ್ಲಿ ಬೆಂಗಳೂರಿಗೆ ಬಂದ ಮಂಗಳೂರು ಪೊಲೀಸರು ಎರಡು ಟ್ರಾಲಿ ಬ್ಯಾಗ್ನಲ್ಲಿ ಏರ್ಪೋರ್ಟ್ ಮೂಲಕ ಹೊರ ಬಂದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ರನ್ಯಾ ರಾವ್ ಚಿನ್ನ ಸ್ಮಗ್ಲಿಂಗ್ ಪ್ರಕರಣ
ಕರ್ನಾಟಕ ಪೊಲೀಸ್ ಪ್ರೋಟೋಕಾಲ್ ಬಳಕೆ ಮಾಡಿಕೊಂಡು ಸುಮಾರು ಹನ್ನೆರಡು ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ 14.2 ಕೆಜಿ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದ ನಟಿ ಹಾಗೂ ಐಪಿಎಸ್ ಅಧಿಕಾರಿ ಪುತ್ರಿ ರನ್ಯಾ ರಾವ್ ಅವರನ್ನು ಡಿಆರ್ಐ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ರನ್ಯಾ ರಾವ್, ಒಂದು ವರ್ಷದಲ್ಲಿ 26 ಬಾರಿ ದುಬೈ ಹಾಗೂ ಬೆಂಗಳೂರು ಮಧ್ಯೆ ಓಡಾಡಿದ್ದಾರೆ ಮತ್ತುಇವರು ಈ ಮೊದಲು ಕೂಡ ಗೋಲ್ಡ್ ಸ್ಮಗ್ಲಿಂಗ್ ಮಾಡಿದ್ದಾರೆ ಎಂದು ಡಿಆರ್ಐ ಅಧಿಕಾರಿಗಳು ಕೋರ್ಟ್ನಲ್ಲಿ ಹೇಳಿದ್ದಾರೆ.
38 ಕೋಟಿ ರೂ. ಮೌಲ್ಯದ ಕೊಕೇನ್ ಜಪ್ತಿ
ಬೆಂಗಳೂರಿನಿಂದ ದೆಹಲಿಗೆ ಹೋಗಬೇಕಿದ್ದ ದೋಹಾ ಮೂಲದ ಜೆನಿಫರ್ ಎಂಬ ಮಹಿಳೆ ಬಳಿಯಿಂದ ಡಿಆರ್ಐ ಅಧಿಕಾರಿಗಳು ಬರೋಬ್ಬರಿ 38 ಕೋಟಿ ರೂ. ಮೌಲ್ಯದ ಕೋಕೆನ್ ಜಪ್ತಿ ಮಾಡಿದ್ದಾರೆ. ವಿಚಾರಣೆ ವೇಳೆ, ಇದೇ ಏರ್ಪೋರ್ಟ್ ಮೂಲಕ ಇನ್ನೂ ಹೆಚ್ಚಿನ ಕೊಕೆನ್ ಅನ್ನು ಬೆಂಗಳೂರಿಗೆ ತಂದಿದ್ದು ಅದನ್ನು ಸಂಗ್ರಹ ಮಾಡಿಟ್ಟು ದೆಹಲಿಯಲ್ಲಿ ವ್ಯವಹಾರ ಕುದುರಿದ ನಂತರ ತೆಗೆದುಕೊಂಡು ಹೋಗುತ್ತಿರುವುದಾಗಿ ಆಕೆ ತಿಳಿಸಿದ್ದಾಳೆ.
ಇದನ್ನೂ ಓದಿ: ಚಿನ್ನ ಕಳ್ಳಸಾಗಾಣಿಕೆ ಕೇಸ್: ದುಬೈನಲ್ಲಿ ಕಂಪನಿ ತೆರದಿದ್ರು ನಟಿ ರನ್ಯಾ ರಾವ್
ಈ ಎಲ್ಲ ಪ್ರರಣಗಳಿಂದಾಗಿ, ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಚಿನ್ನ, ಡ್ರಗ್ಸ್ ಕಳ್ಳಸಾಗಣೆ ಮಾಡುವುದು ಅಷ್ಟೊಂದು ಸುಲಭವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಇದಲ್ಲದೆ, ಬೆಂಗಳೂರಿನಲ್ಲಿ ಪೊಲೀಸ್ ಬಲೆಗೆ ಬೀಳುವ ಡ್ರಗ್ಸ್ ದಂಧೆಕೋರರ ಬಳಿ ದೊರೆಯುವ ಮಾದಕ ವಸ್ತುಗಳು ಸಹ ಏರ್ಪೋರ್ಟ್ ಮೂಲಕ ಕಳ್ಳಸಾಗಣೆ ಆಗಿರುವವು ಎಂಬುದು ಅನೇಕ ಪ್ರಕರಣಗಳಲ್ಲಿ ದೃಢಪಟ್ಟಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:45 am, Thu, 20 March 25