ಬೆಂಗಳೂರು: ಹೊರ ರಾಜ್ಯದ 250ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸೀಜ್, 5 ಕೋಟಿ ರೂ. ದಂಡ ವಸೂಲಿ
ಸಾರಿಗೆ ಇಲಾಖೆಯ ನಿಯಮಗಳ ಪ್ರಕಾರ ಬೇರೆ ರಾಜ್ಯಗಳಲ್ಲಿ ಕಾರು ಖರೀದಿ ಮಾಡಿ ಇಲ್ಲಿ ಅದನ್ನು ಬಳಕೆ ಮಾಡುವಂತಿಲ್ಲ. ಆದರೆ, ಕೆಲ ಕಿಲಾಡಿ ಕಾರು ಮಾಲೀಕರು ತೆರಿಗೆ ಉಳಿಸಲು ಬೇರೆ ರಾಜ್ಯದಲ್ಲಿ ಕಾರು ಖರೀದಿ ಮಾಡಿ, ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳಲ್ಲಿ ಪೋಸ್ ಕೊಡುತ್ತಿದ್ದರು. ಅಂತಹವರಿಗೆ ಸಾರಿಗೆ ಇಲಾಖೆ ಸರಿಯಾಗಿ ಬಿಸಿ ಮುಟ್ಟಿಸಿದೆ.

ಬೆಂಗಳೂರು, ಮಾರ್ಚ್ 20: ಬೇರೆಬೇರೆ ರಾಜ್ಯಗಳಲ್ಲಿ ತೆರಿಗೆ ಕಡಿಮೆ ಎಂದು ಬೆಂಗಳೂರಿನ (Bengaluru) ಶ್ರೀಮಂತರು, ಕೋಟಿ ಕುಳಗಳು ಪಾಂಡಿಚೇರಿ, ಮಹಾರಾಷ್ಟ್ರ, ಬಿಹಾರ, ದೆಹಲಿ ಸೇರಿದಂತೆ ಸಾಕಷ್ಟು ರಾಜ್ಯಗಳಲ್ಲಿ ಕೋಟಿ ಕೋಟಿ ರೂ. ಬೆಲೆಬಾಳುವ ಐಷಾರಾಮಿ ಕಾರುಗಳನ್ನು ಖರೀದಿ ಮಾಡಿ ಇಲ್ಲಿ ತರುತ್ತಿದ್ದರು. ಬೇರೆ ರಾಜ್ಯಗಳಲ್ಲಿ ಐಷಾರಾಮಿ ಕಾರುಗಳನ್ನು (Luxury cars) ಖರೀದಿಸಿ ಇಲ್ಲಿ ತಂದು ಬೆಂಗಳೂರಿನಲ್ಲಿ ಸಂಚಾರ ಮಾಡುತ್ತಿದ್ದ ಕೋಟಿ ಕುಳಗಳಿಗೆ ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳು ಬುಧವಾರ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಹತ್ತು ತಂಡಗಳಲ್ಲಿ ಕಾರ್ಯಾಚರಣೆ ಮಾಡಿದ ಸಾರಿಗೆ ಇಲಾಖೆಯ ಅಧಿಕಾರಿಗಳು 250 ಕ್ಕೂ ಹೆಚ್ಚು ಕಾರುಗಳನ್ನು ಸೀಜ್ ಮಾಡಿ 400 ಕೇಸ್ ದಾಖಲಿಸಿದ್ದಾರೆ. ಸುಮಾರು 5 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯಗಳ ಕಾರುಗಳ ಸಂಖ್ಯೆ ಹೆಚ್ಚಾಗಿದೆ ಎಂದು ‘ಟಿವಿ9’ ಸುದ್ದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆ ಸಾರಿಗೆ ಇಲಾಖೆಯ ಆಯುಕ್ತರು ತೆರಿಗೆ ಕಟ್ಟದೆ ಬೇರೆ ರಾಜ್ಯಗಳಿಂದ ತಂದ ಕಾರುಗಳನ್ನು ಸೀಜ್ ಮಾಡಲು ಸೂಚನೆ ನೀಡಿದ್ದರು. ಹೀಗಾಗಿ ಬೆಂಗಳೂರಿನ ಹತ್ತು ಕಡೆಗಳಲ್ಲಿ ಆರ್ಟಿಒ ಅಧಿಕಾರಿಗಳು ತಪಾಸಣೆ ನಡೆಸಿ, ಕಾರುಗಳನ್ನು ಸೀಜ್ ಮಾಡಿದ್ದಾರೆ.
ಈ ಕಾರ್ಯಾಚರಣೆಗಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಹೊರ ರಾಜ್ಯಗಳಿಂದ ತಂದು ಇಲ್ಲಿ ಕಾರ್ಯಾಚರಿಸುವುದರಿಂದ ನಮ್ಮ ರಾಜ್ಯದ ಕಾರು ಮಾಲೀಕರಿಗೆ ತುಂಬಾ ಸಮಸ್ಯೆ ಆಗುತ್ತಿತ್ತು. ನಿರಂತರವಾಗಿ ಕಾರ್ಯಾಚರಣೆ ಮಾಡಿದರೆ ತೆರಿಗೆ ಪಾವತಿಸದ ಎಲ್ಲಾ ವಾಹನಗಳನ್ನು ಪತ್ತೆ ಹಚ್ಚಬಹುದು ಎಂದು ಈ ವೇಳೆ ಮಾತನಾಡಿದ ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಸದಾನಂದಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬಿಇಎಲ್ನಿಂದ ಪಾಕಿಸ್ತಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಗೂಢಚಾರ ಬಂಧನ
ಒಟ್ಟಿನಲ್ಲಿ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ವಂಚಿಸುತ್ತಿದ್ದ ಕಿಲಾಡಿ ಕಾರು ಮಾಲೀಕರಿಗೆ ಕೋಟಿ ಕೋಟಿ ರೂ. ದಂಡ ವಿಧಿಸುವ ಮೂಲಕ ಆರ್ಟಿಒ ಅಧಿಕಾರಿಗಳು ಸರಿಯಾಗಿ ಬಿಸಿ ಮುಟ್ಟಿಸಿರುವುದಂತತೂ ಸುಳ್ಳಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:57 am, Thu, 20 March 25