ಜನರ ಕೈಗೇ ಇನ್ಮುಂದೆ ರ‍್ಯಾಪಿಡ್ ಫುಡ್ ಟೆಸ್ಟಿಂಗ್ ಕಿಟ್; ಸಾರ್ವಜನಿಕರೇ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಬಹುದು!

| Updated By: ಗಣಪತಿ ಶರ್ಮ

Updated on: Aug 08, 2024 | 6:58 AM

ಕಾಟನ್ ಕ್ಯಾಂಡಿ ನಿಷೇಧ ಮಾಡಿ ಆಯ್ತು. ಕಬಾಬ್​ಗೆ ಕೃತಕ ರಾಸಾಯನಿಕಯುಕ್ತ ಬಣ್ಣ ಬೆರೆಸಲಾಗುತ್ತಿದೆ ಎಂದು ಅದನ್ನೂ ನಿರ್ಬಂಧಿಸಲಾಯಿತು. ಸಾಸ್ ಸುರಕ್ಷಿತ ಅಲ್ಲ ಅಂತ ದೃಢಪಟ್ಟಿತು. ಇನ್ನು ಮುಂದೆ ಏನು ತಿನ್ನಬೇಕು ಏನು ತಿನ್ನಬಾರದು ಎಂಬ ಗೊಂದಲದಲ್ಲಿರುವ ಬೆಂಗಳೂರಿನ ಜನರಿಗೆ ಆರೋಗ್ಯ ಇಲಾಖೆ ಫುಡ್ ಟೆಸ್ಟಿಂಗ್ ಕಿಟ್ ಕೊಡಲಿದೆ!

ಜನರ ಕೈಗೇ ಇನ್ಮುಂದೆ ರ‍್ಯಾಪಿಡ್ ಫುಡ್ ಟೆಸ್ಟಿಂಗ್ ಕಿಟ್; ಸಾರ್ವಜನಿಕರೇ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಬಹುದು!
ಸಾಂದರ್ಭಿಕ ಚಿತ್ರ
Image Credit source: Getty Images
Follow us on

ಬೆಂಗಳೂರು, ಆಗಸ್ಟ್ 8: ಕಳೆದ ಒಂದೆರೆಡು ತಿಂಗಳಿನಿಂದ ಆಹಾರ ಇಲಾಖೆ ಹಾಗೂ ಆರೋಗ್ಯ ಇಲಾಖೆ ವ್ಯಸ್ತವಾಗಿವೆ. ಅಸುರಕ್ಷಿತರ ಆಹಾರಗಳ ಮೇಲೆ ಸಮರ ಸಾರಿರುವ ಆಹಾರ ಮತ್ತು ಗುಣಮಟ್ಟ ಸುರಕ್ಷತಾ ಇಲಾಖೆ ಮೇಲಿಂದ ಮೇಲೆ ಬೆಂಗಳೂರಿನ ಹೋಟೆಲ್, ರೆಸ್ಟೋರೆಂಟ್​​ಗಳ ಮೇಲೆ ದಾಳಿ ನಡೆಸ್ತಿದೆ. ಕಾಟನ್ ಕ್ಯಾಂಡಿ ನಿಷೇಧದಿಂದ ಶುರುವಾದ ನಿಷೇಧದ ಪಟ್ಟಿ ಟೊಮೆಟೊ ಸಾಸ್ ತನಕ ಬಂದು ನಿಂತಿದೆ. ಇಲ್ಲಿದೆ ಮುಗಿದಿಲ್ಲ, ಇನ್ಮುಂದೆ ಜನರನ್ನು ಒಳಗೊಂಡು ಮಹತ್ವದ ಹೋರಾಟ ಮಾಡಲು ಆಹಾರ ಇಲಾಖೆ ಮುಂದಾಗಿದೆ.

ಜನರೇ ಇನ್ಮುಂದೆ ತಾವು ತಿನ್ನುವ ಆಹಾರವನ್ನು ಪರೀಕ್ಷಿಸಿ ನೋಡಬಹುದು. ಆಹಾರದ ಗುಣಮಟ್ಟ, ಆಹಾರ ಕಲುಷಿತಗೊಂಡಿರುವ ಪ್ರಮಾಣ ಪರೀಕ್ಷೆ ಪತ್ತೆ ಮಾಡುವ ಕಿಟ್ ಅನ್ನು ಜನರ ಕೈಗೆ ಕೊಡಲು ಆಹಾರ ಮತ್ತು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಇತ್ತೀಚಿನ ದಿನಗಳಲ್ಲಿ ಕಲುಷಿತ ಆಹಾರ, ಫುಡ್ ಸ್ಟ್ಯಾಂಡರ್ಡ್ ಬಗ್ಗೆ ಸಾಲು ಸಾಲು ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಈ ಮಾಸ್ಟರ್ ಪ್ಲಾನ್​ಗೆ ಮುಂದಾಗಿದೆ.

ಜನರಿಂದಲೇ ಆಹಾರ ಪರೀಕ್ಷೆ ಇದೇ ಮೊದಲು

ಇದೇ ಮೊದಲ ಬಾರಿಗೆ ಜನರಿಂದಲೇ ಆಹಾರ ಪರೀಕ್ಷೆ ಮಾಡಿಸುವ ವ್ಯವಸ್ಥೆಗೆ ಚಿಂತನೆ ಮಾಡಿರುವ ಇಲಾಖೆ, ಕೇಂದ್ರದ ಫುಡ್ ರೇಟಿಂಗ್ ಏಜೆನ್ಸಿಯನ್ನು ಜನರಿಗೆ ಪರಿಚಯಿಸಲು ನಿರ್ಧರಿಸಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ 4 ಟೆಸ್ಟಿಂಗ್ ಲ್ಯಾಬ್

ಇನ್ನು ಹೋಟೆಲ್ ಸಂಘಟನೆಯೂ ಸೇರಿದಂತೆ ಹಲವು ಸಂಘಟನೆಗಳು ಇದನ್ನು ಒಳ್ಳೆಯ ಬೆಳವಣಿಗೆ ಎಂದಿವೆ. ಇದರಿಂದ ಜನರು ಕಲುಷಿತ ಆಹಾರ ಸೇವನೆ ಮಾಡುವುದನ್ನು ತಡೆಯಬಹುದು ಎಂದು ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ನಗರದಲ್ಲಿ ನಾಲ್ಕು ಟೆಸ್ಟಿಂಗ್ ಲ್ಯಾಬ್ ಸ್ಥಾಪನೆಗೂ ಆರೋಗ್ಯ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಫ್ಯಾನ್ಸಿ ನಂಬರ್ ಹರಾಜು: ಯಾವ ನಂಬರ್​ಗೆ ಎಷ್ಟು ಹಣ? ಇಲ್ಲಿದೆ ಪಟ್ಟಿ

ಸಾರ್ವಜನಿಕರಿಗೆ ಹೇಗೆ ನೆರವಾಗಲಿದೆ?

ಆಹಾರಕ್ಕೆ ಬಳಕೆ ಮಾಡಿದ ಪದಾರ್ಥಗಳ ಗುಣಮಟ್ಟ ಸರಿ ಇದೆಯಾ? ಆಹಾರ ಪದಾರ್ಥಗಳ ಗುಣಮಟ್ಟ ಸ್ಟ್ಯಾಂಡರ್ಡ್ ಪ್ರೋಟೋಕಾಲ್ ಪ್ರಕಾರ ಇದೆಯಾ ಎಂದು ಸಾರ್ವಜನಿಕರು ಸ್ಥಳಕ್ಕೆ ರೇಟಿಂಗ್ ಏಜೆನ್ಸಿ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಬಹುದಾಗಿದೆ. ಈ ಮೂಲಕ ಸ್ಪಾಟ್ ಫುಡ್ ಟೆಸ್ಟಿಂಗ್ ಮಾಡಿಸಲು ಜನರಿಗೆ ಅವಕಾಶ ಸಿಗಲಿದೆ. ರ‍್ಯಾಪಿಡ್ ಫುಡ್ ಟೆಸ್ಟಿಂಗ್ ಕಿಟ್ ಬಳಸಿ ಸ್ಥಳದಲ್ಲೇ ಆಹಾರದ ಗುಣಮಟ್ಟ ತಿಳಿಯಲು ಸಾಧ್ಯವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ