
ಬೆಂಗಳೂರು, ಸೆಪ್ಟೆಂಬರ್ 27: ನಗರದ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ನಿಲಯಗಳನ್ನು ಗುರಿಯಾಗಿಸಿಕೊಂಡು ಸಸ್ಯಾಹಾರ ಹಾಗೂ ತಂತ್ರಜ್ಞಾನ ಪ್ರಿಯ ಖದೀಮನೊಬ್ಬ ಭಾರಿ ಕಳವು ಎಸಗಿರುವ ಘಟನೆ ಮಂಡೂರು ಮತ್ತು ಚಿಕ್ಕಗುಬ್ಬಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಪಿಜಿಯೊಳಗೆ ರಹಸ್ಯವಾಗಿ ನುಗ್ಗಿದ ಕಳ್ಳ, ಅಲ್ಲಿ ವಾಸವಿದ್ದ ಉದ್ಯೋಗಿಗಳ ಬರೋಬ್ಬರಿ 12 ಕಾಸ್ಟ್ಲಿ ಮೊಬೈಲ್ ಫೋನ್‌ಗಳು ಹಾಗೂ 7 ಲ್ಯಾಪ್‌ಟಾಪ್‌ಗಳನ್ನು ಎಗರಿಸಿ ಪರಾರಿಯಾಗಿದ್ದಾನೆ.
ಬಂಧಿತ ಆರೋಪಿಯನ್ನು ಆಂಧ್ರಪ್ರದೇಶ ಮೂಲದ ಬಿ. ಶಿವಾಜಿ (24) ಎಂದು ಗುರುತಿಸಲಾಗಿದೆ. ಆವಲಹಳ್ಳಿ ಮತ್ತು ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪಿಜಿಗಳಲ್ಲಿ ಸರಣಿ ಕಳವು ಮಾಡುತ್ತಿದ್ದ ಈತನನ್ನು ಆವಲಹಳ್ಳಿ ಪೊಲೀಸರು ತನಿಖೆ ನಡೆಸಿ ಸೆರೆಹಿಡಿದಿದ್ದಾರೆ. ಬಂದಿತನಿಂದ ಸುಮಾರು 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಲ್ಯಾಪ್‌ಟಾಪ್ ಹಾಗೂ ಐಫೋನ್ ಸೇರಿದಂತೆ ವಿವಿಧ ಅತ್ಯಾಧುನಿಕ ಮೊಬೈಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಶಿವಾಜಿ ತಡರಾತ್ರಿ ಅಥವಾ ಮುಂಜಾನೆ ವೇಳೆ ಪಿಜಿಗಳ ಆವರಣಕ್ಕೆ ನುಗ್ಗುತ್ತಿದ್ದ. ಬಾಗಿಲು ಪೂರ್ತಿ ಲಾಕ್ ಮಾಡದೆ ವಿಶ್ರಾಂತಿ ಪಡೆಯುತ್ತಿದ್ದ ಐಟಿ/ಬಿಟಿ ಉದ್ಯೋಗಿ ಹಾಗೂ ವಿದ್ಯಾರ್ಥಿಗಳ ಕೊಠಡಿಗಳನ್ನು ಗುರಿಯಾಗಿಸಿಕೊಂಡು ಕ್ಷಣಮಾತ್ರದಲ್ಲಿ ಟೇಬಲ್ ಮತ್ತು ಚಾರ್ಜಿಂಗ್‌ಗೆ ಹಾಕಿದ್ದ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಎಗರಿಸಿ ಪರಾರಿಯಾಗುತ್ತಿದ್ದ.
ಸಂತ್ರಸ್ತರು ನೀಡಿದ ಸರಣಿ ದೂರುಗಳ ಆಧಾರದ ಮೇಲೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಆವಲಹಳ್ಳಿ ಪೊಲೀಸರು ಆರೋಪಿಯ ಸುಳಿವು ಪಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಪಿಜಿ ನಿವಾಸಿಗಳು ಕೊಠಡಿಯ ಬಾಗಿಲುಗಳನ್ನು ಸರಿಯಾಗಿ ಲಾಕ್ ಮಾಡುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ