ಬೆಂಗಳೂರು: ಪಿಂಕ್ ಲೈನ್ ಮೆಟ್ರೋಗೆ ಬಂತು ನಾಲ್ಕನೇ ರೈಲು, ಮೇನಲ್ಲಿ ಸಂಚಾರ ನಿರೀಕ್ಷೆ

Bengaluru Pink Line Metro: ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋ ಸಂಚಾರಕ್ಕೆ ಸಿದ್ಧತೆ ಚುರುಕು ಪಡೆದುಕೊಂಡಿದೆ. ನಾಲ್ಕನೇ ಹೊಸ ರೈಲು ಸೆಟ್ ಕೊತ್ತನೂರು ಡಿಪೋ ತಲುಪಿದ್ದು, ಮೇ ತಿಂಗಳಲ್ಲಿ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ. ಈ 7.5 ಕಿ.ಮೀ ಮಾರ್ಗ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಸಂಪರ್ಕ ಕಲ್ಪಿಸಲಿದೆ.

ಬೆಂಗಳೂರು: ಪಿಂಕ್ ಲೈನ್ ಮೆಟ್ರೋಗೆ ಬಂತು ನಾಲ್ಕನೇ ರೈಲು, ಮೇನಲ್ಲಿ ಸಂಚಾರ ನಿರೀಕ್ಷೆ
ಪಿಂಕ್ ಲೈನ್ ಮೆಟ್ರೋಗೆ ಬಂತು ನಾಲ್ಕನೇ ರೈಲು
Image Credit source: Deccan Herald

Updated on: Mar 16, 2026 | 8:09 AM

ಬೆಂಗಳೂರು, ಮಾರ್ಚ್ 16: ನಮ್ಮ ಮೆಟ್ರೋ (Namma Metro) ವಿಸ್ತರಣೆಗೆ ಮತ್ತೊಂದು ಹೆಜ್ಜೆ ಇಟ್ಟಿರುವ ಬಿಎಂಆರ್​ಸಿಎಲ್ (BMRCL) ಮೇ ತಿಂಗಳಲ್ಲಿ ಪಿಂಕ್ ಲೈನ್‌ನಲ್ಲಿ ಕಾರ್ಯಾಚರಣೆ ಶುರು ಮಾಡಲು ಸಿದ್ಧತೆ ಶುರುಮಾಡಿದೆ. ಪಿಂಕ್ ಲೈನ್‌ ಮೆಟ್ರೋಗಾಗಿ ನಾಲ್ಕನೇ ರೈಲು ಭಾನುವಾರ ಬಂದಿಳಿದಿದೆ. ಆರು ಕೋಚ್‌ಗಳಿರುವ ಈ ಹೊಸ ರೈಲು ಸೆಟ್‌ ಅನ್ನು ಮಾರ್ಚ್‌ 13ರಂದು ಬಿಇಎಂಎಲ್ ಸಂಸ್ಥೆಯ ನ್ಯೂ ತಿಪ್ಪಸಂದ್ರ ಘಟಕದಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕೊತ್ತನೂರು ಡಿಪೋಗೆ ತರಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಈ ರೈಲನ್ನು ಪ್ರಸ್ತುತ ಕೊತ್ತನೂರು ಡಿಪೋದಲ್ಲಿನ ಇನ್ಸ್‌ಪೆಕ್ಷನ್ ಬೇ ಲೈನ್ (IBL) ಗೆ ಸ್ಥಳಾಂತರಿಸಿ ಅಗತ್ಯ ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಪರೀಕ್ಷೆಗಳು ಮತ್ತು ನಿಯಮಾನುಸಾರ ಅನುಮತಿ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ರೈಲು ಸೇವೆಗೆ ಸಿದ್ಧವಾಗಲಿದೆ.

ಪಿಂಕ್ ಲೈನ್‌ನ ಮೊದಲ ರೈಲನ್ನು ಬಿಇಎಂಎಲ್ ಸಂಸ್ಥೆ 2025ರ ಡಿಸೆಂಬರ್‌ 11ರಂದು ಬಿಡುಗಡೆ ಮಾಡಿತ್ತು. ಬಳಿಕ ಫೆಬ್ರವರಿಯಲ್ಲಿ ಇನ್ನೂ ಎರಡು ರೈಲುಗಳನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಿತ್ತು. ಈಗ ನಾಲ್ಕನೇ ರೈಲು ಕೂಡ ಬಂದಿರುವುದರಿಂದ ಪಿಂಕ್ ಲೈನ್ ಸೇವೆ ಆರಂಭದ ಸಿದ್ಧತೆಗಳು ವೇಗ ಪಡೆದುಕೊಂಡಿವೆ.

ಸುಮಾರು 7.5 ಕಿಲೋಮೀಟರ್ ಉದ್ದದ ಕಾಳೇನ ಅಗ್ರಹಾರ – ತಾವರೆಕೆರೆಯ ಪಿಂಕ್ ಲೈನ್ ಮಾರ್ಗದಲ್ಲಿ ಮೇ ತಿಂಗಳಲ್ಲಿ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ.

ನೇರಳೆ ಮತ್ತು ಹಸಿರು ಮಾರ್ಗಗಳ ಪ್ರಯಾಣಿಕರಿಗೂ ಗುಡ್ ನ್ಯೂಸ್

ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿನ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಕೂಡ ಕ್ರಮ ಕೈಗೊಳ್ಳಲಾಗಿದೆ. ಕೋಲ್ಕತ್ತಾ ಮೂಲದ ಟಿಟಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಂಸ್ಥೆ ಪರ್ಪಲ್ ಹಾಗೂ ಗ್ರೀನ್ ಲೈನ್‌ಗಳಿಗಾಗಿ ಎರಡನೇ ಡಿಟಿಜಿ ರೈಲು ಸೆಟ್‌ ಅನ್ನು ಕಳುಹಿಸಿದೆ. ಈ ರೈಲಿನ ಮೂರು ಕೋಚ್‌ಗಳನ್ನು ಮಾರ್ಚ್‌ 13ರಂದು ಕಳುಹಿಸಲಾಗಿದ್ದು, ಉಳಿದ ಮೂರು ಕೋಚ್‌ಗಳು ಮರುದಿನ ರಾತ್ರಿ ರವಾನೆಯಾಗಿವೆ. ಈ ರೈಲು ಈ ತಿಂಗಳ ಅಂತ್ಯದೊಳಗೆ ಪೀಣ್ಯಾ ಡಿಪೋ ತಲುಪುವ ಸಾಧ್ಯತೆ ಇದೆ.

ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಮದ್ಯಪ್ರಿಯರಿಗೆ ಶೀಘ್ರವೇ ಗುಡ್​​ನ್ಯೂಸ್​? ಸೀಲ್ಡ್ ಲಿಕ್ಕರ್​​ ಬಾಟಲ್​​ ಸಾಗಾಟಕ್ಕೆ ಅನುಮತಿ?

ಈ ಎರಡು ಹೊಸ ರೈಲುಗಳು ಮೇ–ಜೂನ್ ವೇಳೆಗೆ ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಲ್ಲಿ ಸಂಚಾರ ಶುರು ಮಾಡುವ ನಿರೀಕ್ಷೆ ಇದೆ. ಇದರಿಂದ ಪೀಕ್ ಅವಧಿಯಲ್ಲಿ ಮೆಟ್ರೋದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಲ್ಲಿ ಒಟ್ಟು 57 ರೈಲುಗಳು ಸಂಚಾರ ಮಾಡುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us