‘ಬಂಟಿ ಔರ್ ಬಬ್ಲಿ’ ಶೈಲಿಯಲ್ಲಿ ಐಷಾರಾಮಿ ಕಾರುಗಳ ಕಳವು: ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ರಾಜಸ್ಥಾನದ ಹೈಟೆಕ್ ಪ್ರೇಮಿಗಳು

ಬೆಂಗಳೂರು ಪೊಲೀಸರು 'ಬಂಟಿ ಔರ್ ಬಬ್ಲಿ' ಎಂದೇ ಖ್ಯಾತರಾಗಿದ್ದ ಐಷಾರಾಮಿ ಕಾರು ಕಳ್ಳರ ಜೋಡಿಯನ್ನು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಸತ್ಯೇಂದ್ರ ಸಿಂಗ್ ಮತ್ತು ಪ್ರಮೀಳಾ ಠಾಕೂರ್ ನಕಲಿ ಕೀಗಳನ್ನು ಬಳಸಿ, ಅತ್ಯಾಧುನಿಕ ಉಪಕರಣಗಳ ಸಹಾಯದಿಂದ ದುಬಾರಿ ಕಾರುಗಳನ್ನು ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇವರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಯಶಸ್ವಿಯಾಗಿ ಸೆರೆಹಿಡಿದು, ಕದ್ದ ಫಾರ್ಚೂನರ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಿಂದ ಅಂತರರಾಜ್ಯ ಕಳ್ಳರ ಜಾಲ ಭೇದಿಸಿದಂತಾಗಿದೆ.

ಬಂಟಿ ಔರ್ ಬಬ್ಲಿ ಶೈಲಿಯಲ್ಲಿ ಐಷಾರಾಮಿ ಕಾರುಗಳ ಕಳವು: ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ರಾಜಸ್ಥಾನದ ಹೈಟೆಕ್ ಪ್ರೇಮಿಗಳು
ಸಾಂದರ್ಭಿಕ ಚಿತ್ರ
Edited By:

Updated on: Aug 19, 2026 | 9:10 AM

ಬೆಂಗಳೂರು, ಆ.19: ಬಂಟಿ ಔರ್ ಬಬ್ಲಿ ಎಂಬ ಹಿಂದಿ ಸಿನಿಮಾದಲ್ಲಿ ಇಬ್ಬರು ಪ್ರೇಮಿಗಳು ಮಾಡುವ ಕಳ್ಳತನ ಹಾಗೂ ಜೀವನದಂತೆ  ರಿಯಲ್ ಲೈಫ್‌ನ ‘ಬಂಟಿ ಔರ್ ಬಬ್ಲಿ’ ಜೋಡಿಯೂ ಪ್ರಿಂಟೆಡ್ ಹಾಗೂ ಡುಪ್ಲಿಕೇಟ್ ಕೀಗಳನ್ನು ಬಳಸಿ ಉನ್ನತ ಶ್ರೇಣಿಯ ಐಷಾರಾಮಿ ಕಾರುಗಳನ್ನು ಕದ್ದು, ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮತ್ತು ದೆಹಲಿ ಮೂಲದ ಜೋಡಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರಾಜಸ್ಥಾನ ಮೂಲದ ಸತ್ಯೇಂದ್ರ ಸಿಂಗ್ ಹಾಗೂ ಆತನ ಪ್ರೇಯಸಿ, ದೆಹಲಿ ಮೂಲದ ಪ್ರಮೀಳಾ ಠಾಕೂರ್ ಎಂದು ಗುರುತಿಸಲಾಗಿದೆ.

ಚೆನ್ನೈ ಮೂಲದ ವ್ಯಕ್ತಿಯೊಬ್ಬರು ತಮ್ಮ ಟೊಯೋಟಾ ಫಾರ್ಚೂನರ್ (Toyota Fortuner) ಕಾರಿನಲ್ಲಿ ಜೂನ್ 26 ರಂದು ವಾರಾಂತ್ಯದ ರಜೆ ಕಳೆಯಲು ಬೆಂಗಳೂರಿಗೆ ಬಂದಿದ್ದರು. ಹೊಸೂರು ರಸ್ತೆಯ ಸಿಂಗಸಂದ್ರದಲ್ಲಿರುವ ಹೋಟೆಲ್‌ನಲ್ಲಿ ತಂಗಿದ್ದ ಅವರು, ಜೂನ್ 27ರಂದು ಮುಂಜಾನೆ 1:30 ರ ಸುಮಾರಿಗೆ ಸಿನಿಮಾ ನೋಡಿ ಬಂದು ಕಾರನ್ನು ಹೋಟೆಲ್ ಪಾರ್ಕಿಂಗ್‌ನಲ್ಲಿ ಲಾಕ್ ಮಾಡಿ ನಿಲ್ಲಿಸಿದ್ದರು. ಆದರೆ ಮರುದಿನ ಬೆಳಿಗ್ಗೆ ನೋಡಿದಾಗ 35 ಲಕ್ಷ ರೂ. ಮೌಲ್ಯದ ಫಾರ್ಚೂನರ್ ಕಾರು ಕಳುವಾಗಿತ್ತು. ಸಂತ್ರಸ್ತರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ತಕ್ಷಣ ಪೊಲೀಸರು ತನಿಖೆ ಆರಂಭಿಸಿದರು.

ಜುಲೈ 4 ರಂದು ಬೆಳಗಾವಿ-ಪುಣೆ ಹೆದ್ದಾರಿಯ ಕರಾದ್ ಬಳಿ ಪೊಲೀಸರು ಆರೋಪಿಗಳನ್ನು ತಡೆಯಲು ಯತ್ನಿಸಿದರು. ಈ ವೇಳೆ ಪ್ರಮುಖ ಆರೋಪಿ ಸತ್ಯೇಂದ್ರ ಸಿಂಗ್ ಕಳ್ಳತನವಾಗಿರುವ ಫಾರ್ಚೂನರ್ ಕಾರಿನೊಂದಿಗೆ ಪರಾರಿಯಾಗಲು ಯಶಸ್ವಿಯಾದರೆ, ಆತನ ಜೊತೆಯಲ್ಲಿದ್ದ ಪ್ರೇಯಸಿ ಪ್ರಮೀಳಾ ಪೊಲೀಸರ ಕೈಗೆ ಸಿಕ್ಕಿಬಿದ್ದಳು. ವಿಚಾರಣೆ ವೇಳೆ, ಸುಲಭವಾಗಿ ಕೋಟಿಗಟ್ಟಲೆ ಹಣ ಸಂಪಾದಿಸಲು ಐಷಾರಾಮಿ ಕಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದುದಾಗಿ ಪ್ರಮೀಳಾ ಒಪ್ಪಿಕೊಂಡಿದ್ದಾಳೆ. ಬಳಿಕ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಬಂಧಿಸಲು ವಿಶೇಷ ತಂಡ ರಚಿಸಿದ ಪೊಲೀಸರು, ಜುಲೈ 17 ರಂದು ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಸತ್ಯೇಂದ್ರ ಸಿಂಗ್‌ನನ್ನು ಸೆರೆಹಿಡಿದರು. ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಐಷಾರಾಮಿ ಕಾರುಗಳಿಗೆ ನಕಲಿ ಕೀಗಳನ್ನು ಸಿದ್ಧಪಡಿಸಿ, ಕ್ಷಣಮಾತ್ರದಲ್ಲಿ ಕಾರುಗಳನ್ನು ಅನ್‌ಲಾಕ್ ಮಾಡಿ ಎಸ್ಕೇಪ್ ಆಗುತ್ತಿದ್ದರು. ಕಳವು ಮಾಡಿದ ಐಷಾರಾಮಿ ಕಾರುಗಳನ್ನು ರಾಜಸ್ಥಾನದ ಬಾರ್ಮರ್, ಬಾಲೋತ್ರಾ ಹಾಗೂ ಇತರೆ ಮರುಭೂಮಿ ಭಾಗಗಳಲ್ಲಿದ್ದ ತಮ್ಮ ಖಾಸಗಿ ನೆಟ್‌ವರ್ಕ್ ಏಜೆಂಟರಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಇದನ್ನೂ ಓದಿ: ಸಂತೆಯಲ್ಲಿ ಬೈಕ್ ಎಗರಿಸಿ ಜಮೀನಿನಲ್ಲಿ ಬಚಿಟ್ಟು ಕಮ್ಮಿ ಬೆಲೆಗೆ ಮಾರುತ್ತಿದ್ದ ಖದೀಮ: 43 ಬೈಕ್ ಕದ್ದ ಕಳ್ಳ ಸಿಕ್ಕಿಬಿದ್ದಿದ್ದು ಹೇಗೆ?

ಆರೋಪಿ ಸತ್ಯೇಂದ್ರ ಸಿಂಗ್ ವಿರುದ್ಧ ಬೆಂಗಳೂರು, ಹೈದರಾಬಾದ್, ತಮಿಳುನಾಡು ಹಾಗೂ ರಾಜಸ್ಥಾನದಾದ್ಯಂತ ಭಾರಿ ಪ್ರಮಾಣದ 21 ಕಾರು ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಜುಲೈ 24 ರಂದು ರಾಜಸ್ಥಾನದ ಧೋರಿಮನ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಅಲೇಟಿ ಎಂಬ ಮರುಭೂಮಿ ಪ್ರದೇಶದಿಂದ 35 ಲಕ್ಷ ರೂ. ಮೌಲ್ಯದ ಫಾರ್ಚೂನರ್ ಕಾರನ್ನು ಜಪ್ತಿ ಮಾಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ನಕಲಿ ಕಾರು ಮಾರಾಟ ಜಾಲದ ಸಂಪೂರ್ಣ ನೆಟ್‌ವರ್ಕ್ ಕುರಿತು ಪೊಲೀಸರು ಸುದೀರ್ಘ ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:09 am, Wed, 19 August 26

Loading...
Unable to load recommendations.
Follow Us