ಬೆಂಗಳೂರು: ಆ್ಯಸಿಡ್ ನಾಗ, ಲೌಡ್ ಸ್ಪೀಕರ್ ವಿವಾದದ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದೇನು?
ಬೆಂಗಳೂರಲ್ಲಿ ಲೌಡ್ಸ್ಪೀಕರ್ ಬಳಕೆಗೆ ಆದೇಶ ಪಾಲನೆಯಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ. ಹಾಗೆಯೇ ಆ್ಯಸಿಡ್ ನಾಗನಿಗೆ ಹುಡುಕಾಟ ಮುಂದುವರೆದಿದೆ ಎಂದೂ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಂಗಳೂರಲ್ಲಿ ಲೌಡ್ಸ್ಪೀಕರ್ ಬಳಕೆಗೆ ಆದೇಶ ಪಾಲನೆಯಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ (Kamal Panth) ಹೇಳಿಕೆ ನೀಡಿದ್ದಾರೆ. ಲೌಡ್ಸ್ಪೀಕರ್ ಬಳಕೆಗೆ ಯಾವುದೇ ಗೊಂದಲ, ತಕರಾರು ಇಲ್ಲ ಎಂದಿರುವ ಕಮಲ್ ಪಂತ್, ಬೆಂಗಳೂರಿನಲ್ಲಿ 2002ರ ಸರ್ಕಾರದ ಆದೇಶ ಪಾಲನೆಯಾಗುತ್ತಿದೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಲೌಡ್ಸ್ಪೀಕರ್ಗೆ ಅವಕಾಶ ಇಲ್ಲ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕೆಲವೊಮ್ಮೆ ಅವಕಾಶ ಇದೆ. ಧ್ವನಿವರ್ಧಕ ಬಳಸುವವರು ಡೆಸಿಬಲ್ ನಿಯಮ ಪಾಲಿಸಬೇಕು. ಲೌಡ್ಸ್ಪೀಕರ್ಗೆ 15 ದಿನದೊಳಗೆ ಅನುಮತಿ ಪಡೆಯಬೇಕು. ಸಮಿತಿಯವರು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನುಡಿದಿದ್ದಾರೆ.
ಆ್ಯಸಿಡ್ ನಾಗ ಯಾವುದೇ ಸುಳಿವು ಬಿಟ್ಟಿಲ್ಲ: ಕಮಲ್ ಪಂತ್
ಬೆಂಗಳೂರಿನ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಮಲ್ ಪಂತ್, ‘‘ಆರೋಪಿ ನಾಗೇಶ್ಗಾಗಿ ಹುಡುಕಾಟ ಮುಂದುವರೆದಿದೆ. ಆ್ಯಸಿಡ್ ದಾಳಿಕೋರ ಸಂಚು ರೂಪಿಸಿ ಕೃತ್ಯವೆಸಗಿದ್ದಾನೆ. ಆ್ಯಸಿಡ್ ನಾಗ ಯಾವುದೇ ಸುಳಿವು ಬಿಟ್ಟಿಲ್ಲ. ಆತ ಬಹಳ ದಿನಗಳ ಕಾಲ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಆರೋಪಿ ನಾಗೇಶ್ ಪತ್ತೆಗೆ ಬಹಳ ಪ್ರಯತ್ನ ನಡೆಯುತ್ತಿದೆ. ಆತನನ್ನು ಆದಷ್ಟು ಬೇಗ ಬಂಧಿಸುತ್ತೇವೆ’’ ಎಂದಿದ್ದಾರೆ.
ಪಿಡಬ್ಲ್ಯುಡಿ ಜೆಇ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸದಂತೆ ಕಮಲ್ ಪಂತ್ ಪ್ರತಿಕ್ರಿಯೆ:
ಪಿಡಬ್ಲ್ಯುಡಿ ಜೆಇ ಪರೀಕ್ಷೆಯಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ, ‘‘ರುದ್ರಗೌಡ ಪಾಟೀಲ್ನನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಅಕ್ರಮದ ಬಗ್ಗೆ ಅನ್ನಪೂರ್ಣೇಶ್ವರಿನಗರ ಪೊಲೀಸರಿಂದ ತನಿಖೆ ನಡೆಯುತ್ತಿದ್ದು, ರುದ್ರಗೌಡನ ಪಾತ್ರದ ಬಗ್ಗೆ ಒಂದಷ್ಟು ಬೇರೆ ಬೇರೆ ಮಾಹಿತಿ ಸಿಕ್ಕಿದೆ. ಹಾಗಾಗಿ ತನಿಖೆ ಮಾಡಲು ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತನಿಖೆ ಪೂರ್ಣವಾದ ಬಳಿಕ ಆರೋಪಿ ಪಾತ್ರದ ಬಗ್ಗೆ ಮಾಹಿತಿ ಸಿಗಲಿದೆ’’ ಎಂದು ಮಾಹಿತಿ ನೀಡಿದ್ದಾರೆ.
ಆರೋಪ ಸಾಬೀತಾದರೆ ಪಿಎಸ್ಐ ಅಕ್ರಮದಲ್ಲಿ ಭಾಗಿಯಾದ ಸಿಬ್ಬಂದಿಗಳನ್ನು ಕೆಲಸದಿಂದ ವಜಾ: ಪಿಎಸ್ಐ ಅಕ್ರಮದಲ್ಲಿ ಭಾಗಿಯಾಗಿರುವ ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿರುವ ಕಮಲ್ ಪಂತ್, ಆರೋಪ ಸಾಬಿತಾದರೆ ಅವರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Wed, 11 May 22