ಅಸನಿ ಚಂಡಮಾರುತ ಕುರಿತು ಇನ್ನಷ್ಟು ಮಾಹಿತಿಗೆ ಲಿಂಕ್ ಕ್ಲಿಕ್ ಮಾಡಿ
ಸಮುದ್ರದಲ್ಲಿ ರಥವು ತೇಲುತ್ತಿರುವ ದೃಶ್ಯವಿರುವ ವಿಡಿಯೊ ವೈರಲ್ ಆಗಿದೆ. ಸ್ಥಳೀಯ ಮೀನುಗಾರರು ಹಗ್ಗ ಕಟ್ಟಿ ರಥವನ್ನು ಸಮುದ್ರದಿಂದ ದಡಕ್ಕೆ ಎಳೆದು ತಂದರು. ಸಮುದ್ರದಲ್ಲಿ ತೇಲಿ ಬಂದ ತೇರು ನೋಡಲು ಅಕ್ಕಪಕ್ಕದ ಹಳ್ಳಿಗಳ ನೂರು ಮಂದಿ ನೆರೆದಿದ್ದರು. ಅಂಡಮಾನ್ ಸಮೀಪ ಇರುವ ಯಾವುದಾದರೂ ಬೌದ್ಧ ಚೈತ್ಯಾಲಯಕ್ಕೆ ಈ ತೇರು ಸೇರಿರಬಹುದು. ಬಹುಶಃ ಮ್ಯಾನ್ಮಾರ್, ಥಾಯ್ಲೆಂಡ್, ಮಲೇಷಿಯಾ ಅಥವಾ ಇಂಡೋನೇಷಿಯಾದಿಂದ ಈ ರಥ ಕೊಚ್ಚಿಕೊಂಡು ಬಂದಿರಬಹುದು ಎಂದು ಹೇಳಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಥವನ್ನು ಪರಿಶೀಲಿಸಲಾಗುತ್ತಿದೆ.
ಇದು ಬೇರೆ ದೇಶದಿಂದ ಬಂದಿರುವ ಸಾಧ್ಯತೆ ಕಡಿಮೆ ಎಂಬ ವಾದವೂ ಚಾಲ್ತಿಯಲ್ಲಿದೆ. ‘ಇದು ಸ್ಥಳೀಯ ನಿರ್ಮಾಣವಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲು ಆಗುವುದಿಲ್ಲ. ಯಾವುದಾದರೂ ಸಿನಿಮಾ ನಿರ್ಮಾಣ ಸಂಸ್ಥೆಯು ರಥವನ್ನು ನಿರ್ಮಿಸಿ ಶೂಟಿಂಗ್ಗೆಂದು ಬಳಸುತ್ತಿರುವಾಗ ಇದ್ದಕ್ಕಿದ್ದಂತೆ ಸಮುದ್ರದಲ್ಲಿ ಅಲೆಗಳು ತೇಲಿ ಬಂದು ತೇರು ಕೊಚ್ಚಿ ಹೋಗಿರಬಹುದು’ ಎಂದು ತಹಶೀಲ್ದಾರ್ ಜೆ.ಚಲಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಅಸನಿ ಚಂಡಮಾರುತ ಪ್ರಭಾವದಿಂದ ಆಂಧ್ರದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಆಂಧ್ರ ಕರಾವಳಿಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಕೃಷ್ಣ, ಗುಂಟೂರು, ಕಾಕಿನಾಡ, ಕೋನಸೀಮಾ, ಪಶ್ಚಿಮ ಗೋದಾವರಿ, ಪೂರ್ವ ಗೋದಾವರಿ ಮತ್ತು ವಿಶಾಖಪಟ್ಟಣ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗಂಟೆಗೆ 75ರಿಂದ 95 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಬಾಧಿತ ಜಿಲ್ಲೆಗಳಲ್ಲಿ ಅಧಿಕಾರಿಗಳು ಕಂಟ್ರೋಲ್ ರೂಮ್ಗಳನ್ನು ಸ್ಥಾಪಿಸಿದ್ದಾರೆ. ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ತೆಲುಗು ಭಾಷೆಯಲ್ಲಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೇಲೂರು ಚನ್ನಕೇಶವ ಸ್ವಾಮಿ ತೇರು: ಸಂಪ್ರದಾಯದಂತೆ ಕುರಾನ್ ಪಠಣಕ್ಕೆ ಅವಕಾಶ ಕೊಟ್ಟ ಸರ್ಕಾರ