
ಬೆಂಗಳೂರು, ಜುಲೈ 26: ಯುವಕನನ್ನು ಅಪಹರಿಸಿ (Kidnap) 2.5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಬೆಂಗಳೂರಿನ (Bengaluru) ಅಶೋಕ್‌ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಶಕೀಬ್, ಸುರೇಶ್, ಆಸೀಫ್, ಅಲ್ತಾಫ್, ಸುಹೇಲ್ ಬಂಧಿತರು. ಲಾರೆನ್ಸ್ ಮೆಲ್ವಾನಿ ಅಪಹರಣಕ್ಕೆ ಒಳಗಾಗಿದ್ದ ಯುವಕ.
ಲಾರೆನ್ಸ್ ಮೆಲ್ವಾನಿ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚಿಗೆ ಬೆಂಗಳೂರಿಗೆ ಬಂದಿದ್ದರು. ಐಷಾರಾಮಿ ಜೀವನ ನಡೆಸುತ್ತಿದ್ದ ಲಾರೆನ್ಸ್ ಮೆಲ್ವಾನಿ ಮನೆ ಬಿಟ್ಟು ಹೆಚ್ಚು ಹೋಟೆಲ್ಗಳಲ್ಲೇ ಹೆಚ್ಚು ವಾಸವಿರುತ್ತಿದ್ದರು. ಐಷಾರಾಮಿ ಜೀವನ ನಡೆಸುತ್ತಿದ್ದ ಲಾರೆನ್ಸ್ ಮೆಲ್ವಾನಿ ಪೋಕರ್ ಗೇಮ್ ಆಡಲು ಇಂದಿರಾನಗರದಲ್ಲಿರುವ ಪಬ್ಗೆ ಹೋಗುತ್ತಿದ್ದರು. ಈ ವೇಳೆ ಲಾರೆನ್ಸ್ ಮೆಲ್ವಾನಿಗೆ ಯುವತಿ ಮಾಹಿಮಾಳ ಪರಿಚಯವಾಗಿದೆ.
ಲಾರೆನ್ಸ್ ಮೆಲ್ವಾನಿ ಜುಲೈ 15 ರಂದು ನಗರದ ಪ್ರತಿಷ್ಠಿತ ಹೋಟೆಲ್ನಲ್ಲಿ ಉಳಿದುಕೊಂಡ ಸಮಯದಲ್ಲಿ ಸ್ನೇಹಿತೆ ಮಹಿಮಾ, ಲಾರೆನ್ಸ್ ಮೆಲ್ವಾನಿಗೆ ಮಧ್ಯರಾತ್ರಿ ಕರೆ ಮಾಡಿ ಭೇಟಿಯಾಗಬೇಕು, ಹೊರಗೆ ಬಾ ಎಂದು ಕರೆಸಿಕೊಂಡಿದ್ದಾಳೆ. ಸ್ನೇಹಿತೆ ಮಹಿಮಾ ಮಾತು ನಂಬಿ ಹೊರಬಂದ ಲಾರೆನ್ಸ್ ಮೇಲ್ವಾನಿ ಹೋಟೆಲ್ ಮುಂದೆ ನಿಂತಿದ್ದ ಕ್ಯಾಬ್ ಹತ್ತಿದ್ದಾರೆ. ಕೂಡಲೇ ಇದೇ ಕ್ಯಾಬ್ ಹತ್ತಿದ ಮೂವರು ಆರೋಪಿಗಳು ಲಾರೆನ್ಸ್ ಮೇಲ್ವಾನಿಯನ್ನು ಅಪಹರಿಸಿದ್ದಾರೆ.
ಬಳಿಕ, ಲಾರೆನ್ಸ್ ಮೆಲ್ವಾನಿಯನ್ನು ಇಂದಿರಾನಗರದಲ್ಲಿರವ ಅಪಾರ್ಟ್‌ಮೆಂಟ್‌ವೊಂದರ ಮನೆಯಲ್ಲಿ ಕೂಡಿ ಹಾಕಿ, 2.5 ಕೋಟಿ ರೂ. ನೀಡುವಂತೆ ಹಲ್ಲೆ ಮಾಡಿದ್ದಾರೆ. ಮಗ ಲಾರೆನ್ಸ್ ಮೆಲ್ವಾನಿಯನ್ನು ಅಪಹರಿಸಿರುವ ವಿಚಾರ ತಿಳಿದ ತಾಯಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾಗ, ಲಾರೆನ್ಸ್ ಮೇಲ್ವಾನಿ ಪಕ್ಕದ ಮನೆಯವರ ಸಹಾಯದಿಂದ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಇದನ್ನೂ ಓದಿ: ಪಿಎಸ್ಐನ ಹೊಡೆತಕ್ಕೆ ಶಾಶ್ವತ ಕಿವುಡನಾದ ಮನೆ ಬಾಡಿಗೆದಾರ
ಪೊಲೀಸರು ಕಾಲ್ ಲೊಕೆಷನ್ ಆಧರಿಸಿ ಆರೋಪಿಗಳ ಇದ್ದ ಮನೆ ಬಳಿ ಹೋದರು. ಆದರೆ, ಪೊಲೀಸರ ಭಯದಿಂದ ಆರೋಪಿಗಳು ಲಾರೆನ್ಸ್ನನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಸಿನೀಮಿಯ ರೀತಿಯಲ್ಲಿ ಆರೋಪಿಗಳ ಚೇಸ್ ಮಾಡಿ ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳು ಬಳಸಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ. ಲಾರೆನ್ಸ್ನ ಸ್ನೇಹಿತೆ ಮಹಿಮಾ ಪರಾರಿಯಾಗಿದ್ದಾಳೆ. ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಂಧಿತ ಆರೋಪಿಗಳನ್ನು ವಿಚಾರಣೆ ಒಳಪಡಿಸಿದಾಗ, ಲಾರೆನ್ಸ್ ಬಳಿ ಇದ್ದ 1 ಲಕ್ಷ ಹಣ, 2 ಐಫೋನ್ ಕಸಿದುಕೊಂಡಿದ್ದಾಗಿ ಬಾಯಿಬಿಟ್ಟಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ ಟಿವಿ9
Published On - 4:54 pm, Sat, 26 July 25