ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಾಳೆ ವೀಲ್‌ಚೇರ್ ಸ್ನೇಹಿ ಶೌಚಾಲಯ ಉದ್ಘಾಟನೆ
ಬೆಂಗಳೂರಿನ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ವೀಲ್‌ಚೇರ್ ಸ್ನೇಹಿ ಶೌಚಾಲಯವನ್ನು ಜುಲೈ 26ರಂದು ಉದ್ಘಾಟಿಸಲಾಗುತ್ತಿದೆ. ಭಾರತದ ಆಸ್ಟ್ರೇಲಿಯಾ ಹೈಕಮಿಷನ್ ಮತ್ತು ಕರ್ನಾಟಕ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ರ‍್ಯಾಂಪ್ ಮೈ ಸಿಟಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಸಂಸದ ತೇಜಸ್ವಿ ಸೂರ್ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು, ಜುಲೈ 25 ಸಿಲಿಕಾನ್ ಸಿಟಿ ಜನರ ನೆಚ್ಚಿನ ತಾಣಗಳಲ್ಲಿ ಲಾಲ್‌ಬಾಗ್ (Lalbagh) ಕೂಡ ಒಂದು. ನಿತ್ಯ ಸಾಕಷ್ಟು ಜನರು ಭೇಟಿ ನೀಡುತ್ತಾರೆ. ಸದ್ಯ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಲ್ಲಿ ನಿರ್ಮಿಸಲಾಗಿರುವ ವೀಲ್‌ಚೇರ್ ಸ್ನೇಹಿ ಶೌಚಾಲಯವನ್ನು ಶನಿವಾರ (ಜುಲೈ 26)ದಂದು ಉದ್ಘಾಟನೆಗೊಳ್ಳಲಿದೆ. ಸಂಸದ ತೇಜಸ್ವಿ ಸೂರ್ಯ (Tejasvi Surya) ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ವೀಲ್‌ಚೇರ್ ಸ್ನೇಹಿ ಶೌಚಾಲಯವನ್ನು ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ವೆಸ್ಟ್ ಗೇಟ್ ಬಳಿಯ ಪ್ರಮುಖ ಸ್ಥಳದಲ್ಲಿ ನಿರ್ಮಿಸಲಾಗಿದೆ. ಭಾರತದಲ್ಲಿರುವ ಆಸ್ಟ್ರೇಲಿಯಾ ಹೈಕಮಿಷರ್ ಮತ್ತು ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ರ‍್ಯಾಂಪ್ ಮೈ ಸಿಟಿ ಎಂಬ ಸರ್ಕಾರೇತರ ಸಂಸ್ಥೆಯು ನಿರ್ಮಿಸಿದೆ. ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ಗೆ ಭೇಟಿ ನೀಡುವ ದಿವ್ಯಾಂಗರಿಗೆ ಈ ವೀಲ್‌ಚೇರ್ ಸ್ನೇಹಿ ಶೌಚಾಲಯವು ಅನುಕೂಲವಾಗಲಿದೆ.
ಇದನ್ನೂ ಓದಿ: ಲಾಲ್ ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ: ಈ ಬಾರಿ ಚೆನ್ನಮ್ಮ, ರಾಯಣ್ಣ ದರ್ಶನ
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಲಿದ್ದು, ಭಾರತದಲ್ಲಿರುವ ಆಸ್ಟ್ರೇಲಿಯಾ ಹೈಕಮಿಷರ್ ಫಿಲಿಪ್ ಗ್ರೀನ್, ಬೆಂಗಳೂರಿನಲ್ಲಿರುವ ಆಸ್ಟ್ರೇಲಿಯನ್ ರಾಯಭಾರಿಯ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗ್ರೀಚಿ ಮತ್ತು ರ‍್ಯಾಂಪ್ ಮೈ ಸಿಟಿ ಸಂಸ್ಥಾಪಕ ಪ್ರತೀಕ್ ಖಂಡೇಲ್ವಾಲ್ ಅವರು ಉಪಸ್ಥಿತರಿರಲಿದ್ದಾರೆ.
ಆಗಸ್ಟ್ 7ರಿಂದ ಆಗಸ್ಟ್ 18ರ ವರೆಗೆ ಫಲಪುಷ್ಪ ಪ್ರದರ್ಶನ
ಇನ್ನು ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ತೋಟಗಾರಿಕೆ ಇಲಾಖೆ ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದೆ. ಇದೇ ಆಗಸ್ಟ್ 7ರಿಂದ ಆಗಸ್ಟ್ 18ರ ವರೆಗೆ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ. ಈ ಬಾರಿ 218ನೇ ಫ್ಲವರ್ ಶೋನಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಪ್ರದರ್ಶನ ಇರಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:25 pm, Fri, 25 July 25








