AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲಾ ಮಕ್ಕಳಿಗೆ ಫ್ಲೇವರ್ಡ್ ನಂದಿನಿ ಹಾಲು ವಿತರಣೆಗೆ ಬಮೂಲ್ ಪ್ರಸ್ತಾಪ

ಬಮೂಲ್ ನಿರ್ದೇಶಕ ಡಿಕೆ ಸುರೇಶ್ ಅವರು ಶಾಲಾ ಮಕ್ಕಳಿಗೆ ಫ್ಲೇವರ್ಡ್ ನಂದಿನಿ ಹಾಲು ಪೂರೈಸುವ ಪ್ರಸ್ತಾವನೆಯನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದಾರೆ. ಪೌಡರ್ ಹಾಲಿನ ದುರ್ಬಳಕೆ ತಡೆಯಲು ಮತ್ತು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಲು ಒದಗಿಸಲು ಈ ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ. ಚಾಕೊಲೇಟ್, ಬಾದಾಮಿ, ಸ್ಟ್ರಾಬೆರಿ ಮುಂತಾದ ರುಚಿಕರವಾದ ಫ್ಲೇವರ್‌ಗಳಲ್ಲಿ ಹಾಲು ವಿತರಿಸಲು ಚಿಂತನೆ ನಡೆಸಲಾಗಿದೆ.

ಶಾಲಾ ಮಕ್ಕಳಿಗೆ ಫ್ಲೇವರ್ಡ್ ನಂದಿನಿ ಹಾಲು ವಿತರಣೆಗೆ ಬಮೂಲ್ ಪ್ರಸ್ತಾಪ
ಸಾಂದರ್ಭಿಕ ಚಿತ್ರ
ಹರೀಶ್ ಜಿ.ಆರ್​.
| Edited By: |

Updated on: Jul 24, 2025 | 6:59 AM

Share

ಬೆಂಗಳೂರು, ಜುಲೈ 24: ಶಾಲಾ ಮಕ್ಕಳಿಗೆ ಫ್ಲೇವರ್ಡ್ ಹಾಲು ನೀಡುವ ಬಗ್ಗೆ ಬಮೂಲ್ (BAMUL) ನೂತನ ನಿರ್ದೇಶಕ ಡಿಕೆ ಸುರೇಶ್ (DK  Suresh) ಶಾಲಾ ಶಿಕ್ಷಣ ಇಲಾಖೆಗೆ ಪ್ರಸ್ತಾಪಿಸಿದ್ದಾರೆ. ಇದರೊಂದಿಗೆ, ಬಮೂಲ್ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಹೊಸ ಹೊಸ ಪ್ರಯೋಗಗಳಿಗೆ ಡಿಕೆ ಸುರೇಶ್ ಮುಂದಾಗುತ್ತಿರುವುದು ಸ್ಪಷ್ಟವಾಗಿದೆ. ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಅವರು, ನಂದಿನಿ ಹಾಲಿನ ಪ್ಯಾಕೆಟ್​​ಗೆ ಹೊಸ ಪರಿಸರಸ್ನೇಹಿ ರೂಪ ನೀಡುವ ಬಗ್ಗೆ ಪ್ರಸ್ತಾಪಿಸಿದ್ದರು.

ಶಾಲಾ ಮಕ್ಕಳಿಗೆ ಚಾಕೊಲೇಟ್, ಬಾದಾಮಿ, ಸ್ಟ್ರಾಬೆರಿ ಸೇರಿ ವಿವಿಧ ಫ್ಲೇವರ್​​ಗಳ ಹಾಲು ನೀಡಲು ಶಿಕ್ಷಣ ಇಲಾಖೆಯೊಂದಿಗೆ ಪ್ರಾಯೋಗಿಕ ಯೋಜನೆಯ ಪ್ರಸ್ತಾಪವನ್ನು ಡಿಕೆ ಸುರೇಶ್ ಮುಂದಿಟ್ಟಿದ್ದಾರೆ.

ಶಾಲಾ ಮಕ್ಕಳಿಗೆ ಫ್ಲೇವರ್ಡ್ ಹಾಲು ಪ್ರಸ್ತಾವಕ್ಕೆ ಕಾರಣವೇನು?

ಮಕ್ಕಳಿಗೆ ಕೊಡುತ್ತಿರುವ ಪೌಡರ್ ರೂಪದ ಹಾಲು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇದರಿಂದಾಗಿ ಮಕ್ಕಳಿಗೆ ಸರಿಯಾಗಿ ಹಾಲು ಸಿಗುತ್ತಿಲ್ಲ. ಇದನ್ನು ತಪ್ಪಿಸಲು ನೇರ ಹಾಲು ಪೂರೈಕೆ ಮಾಡುವುದು ಬಮೂಲ್ ನಿರ್ದೇಶಕರ ಯೋಜನೆಯಾಗಿದೆ. ಸಾಮಾನ್ಯ ಹಾಲಿನ ದರ ಕೊಟ್ಟರೆ, ಟೆಟ್ರಾ ಪ್ಯಾಕೆಟ್‌ನಲ್ಲಿ ಮಕ್ಕಳಿಗೆ ಪೂರೈಕೆ ಮಾಡುತ್ತೇವೆ. ಟೆಟ್ರಾ ಪ್ಯಾಕೆಟ್‌ನಲ್ಲಿ ಶಾಲಾ ಮಕ್ಕಳಿಗೆ ವಿವಿಧ ಫ್ಲೇವರ್ಡ್ ಹಾಲು ಪೂರೈಕೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಶಾಲಾ ಮಕ್ಕಳಿಗೆ ಫ್ಲೇವರ್ಡ್ ಹಾಲು ಪೂರೈಸುವ ಬಗ್ಗೆ ಡಿಕೆ ಸುರೇಶ್ ಅವರು ಈಗಾಗಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ವಿಚಾರವಾಗಿ ಮುಂದಿನ ವಾರ ಸಿಎಂ ಸಿದ್ದರಾಮಯ್ಯ ಜತೆ ಚರ್ಚಿಸಲಿದ್ದಾರೆ. ಒಂದು ವೇಳೆ ಸಿಎಂ ಗ್ರೀನ್‌ಸಿಗ್ನಲ್ ನೀಡಿದರೆ, ಶಾಲಾ ಮಕ್ಕಳಿಗೆ ಫ್ಲೇವರ್ಡ್ ನಂದಿನಿ ಹಾಲು ಪೂರೈಕೆಯಾಗಲಿದೆ.

ಬಮೂಲ್ ನಿರ್ದೇಶಕರಾಗಿ ಆಯ್ಕೆಯಾದ ಬೆನ್ನಲ್ಲೇ ಡಿಕೆ ಸುರೇಶ್, ನಂದಿನಿ ಹಾಲಿನ ಪ್ಯಾಕೆಟ್​​ಗೆ ಹೊಸರೂಪ ಕೊಡಲು ಚಿಂತನೆ ನಡೆಸಿದ್ದರು. ಸದ್ಯ ಪಾಲಿಥಿನ್ ಪ್ಯಾಕೆಟ್​​ಗಳಲ್ಲಿ ನಂದಿನಿ ಹಾಲು ಮಾರಾಟವಾಗುತ್ತಿದ್ದು, ವಿದೇಶದಲ್ಲಿ ಬಳಕೆಯಲ್ಲಿರುವ ಬಯೋಡಿಗ್ರೇಡೇಬಲ್ ಪ್ಯಾಕೇಜಿಂಗ್ ಕವರ್ ತಯಾರಿಕೆಗೆ ಚಿಂತನೆ ನಡೆಸಿದೆ ಎಂದು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿಕೆ ಸುರೇಶ್ ಹೇಳಿದ್ದರು.

ಇದನ್ನೂ ಓದಿ: ನಂದಿನಿ ಹಾಲಿಗೆ ಪರಿಸರಸ್ನೇಹಿ ಪ್ಯಾಕಿಂಗ್: ಇನ್ನು ಮೆಕ್ಕೆಜೋಳದಲ್ಲಿ ತಯಾರಾಗಲಿದೆ ಹಾಲಿನ ಪ್ಯಾಕೆಟ್!

ನೂತನ ತಂತ್ರಜ್ಞಾನದಡಿ ತಯಾರಿಸಲಾಗುವ ಬಯೋಡಿಗ್ರೇಡೇಬಲ್ ಪ್ಯಾಕೇಟ್​​​ಗಳು ಕೇವಲ 6 ತಿಂಗಳಲ್ಲಿ ಮಣ್ಣಿನಲ್ಲಿ ಕರಗುವ ಸಾಮರ್ಥ್ಯ ಹೊಂದಿವೆ ಎನ್ನಲಾಗಿದ್ದು, ನಕಪುರದ ಶಿವನಹಳ್ಳಿಯಲ್ಲಿ ಬಯೋಡಿಗ್ರೇಡೇಬಲ್ ಪ್ಯಾಕೇಜಿಂಗ್ ಕವರ್ ತಯಾರಿಕೆ ಪ್ರಯೋಗ ಈ ತಿಂಗಳಿನಿಂದಲೇ ಆರಂಭವಾಗಲಿದೆ ಎನ್ನಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ