ನೆಲಮಹಡಿ ಮಳಿಗೆದಾರರಿಗೆ ಶಾಕ್ ಕೊಟ್ಟ ಬಿಬಿಎಂಪಿ: ಭದ್ರತೆ ದೃಷ್ಟಿಯಿಂದ ತೆರವು ಮಾಡಿಸಲು ಸೂಚನೆ
ಬೆಂಗಳೂರು ನಗರದಲ್ಲಿ ಅವ್ಯಸ್ಥಿತವಾಗಿ, ಕಾನೂನು ಬಾಹಿರವಾಗಿ ಬಹು ಅಂತಸ್ತಿನ ಕಟ್ಟಡಗಳು ತಲೆ ಎತ್ತಿವೆ. ಅಲ್ಲದೆ ಪಾರ್ಕಿಂಗ್ ಜಾಗಗಳಲ್ಲಿ ಕೂಡ ನೆಲಮಹಡಿ ವಾಣಿಜ್ಯ ಮಳಿಗೆಗಳು ಎಗ್ಗಿಲ್ಲದೆ ಸಕ್ರಿಯವಾಗಿದ್ದು, ಸಾರ್ವಜನಿಕರ ಭದ್ರತೆಯ ದೃಷ್ಟಿಯಿಂದ ಕಳವಳಕ್ಕೆ ಕಾರಣವಾಗಿದೆ. ಹೀಗಾಗಿ ಬಿಬಿಎಂಪಿ ಈಗ ನೆಲಮಹಡಿ ಮಳಿಗೆದಾರರಿಗೆ ಶಾಕ್ ನೀಡಲು ಮುಂದಾಗಿದೆ.

ಬೆಂಗಳೂರು, ಜುಲೈ 24: ಬೆಂಗಳೂರಿನಲ್ಲಿ (Bengaluru) ಅವೈಜ್ಞಾನಿಕವಾಗಿ, ಅವ್ಯವಸ್ತಿವಾಗಿ ಬಹು ಅಂತಸ್ತಿನ ಕಟ್ಟಡಗಳು ತಲೆ ಎತ್ತುತ್ತಿವೆ. ಇದರಿಂದಾಗಿ ಅವಘಡಗಳು, ಪ್ರಮಾದಗಳು ಉಂಟಾಗಿರುವ ಉದಾಹರಣೆಗಳೂ ಇವೆ. ಹೀಗಾಗಿಯೇ ಮಹತ್ವದ ಸಭೆ ನಡೆಸಿರುವ ಬಿಬಿಎಂಪಿ (BBMP) ಮುಖ್ಯ ಆಯುಕ್ತರು, ನೆಲಮಹಡಿಯಲ್ಲಿ ಪಾರ್ಕಿಂಗ್ ಉದ್ದೇಶಕ್ಕೆ ಹೊರತುಪಡಿಸಿ ವಾಣಿಜ್ಯ ಉದ್ದೇಶಕ್ಕೆ ನಡೆಸಲಾಗುತ್ತಿರುವ ಮಳಿಗೆಗಳ ತೆರವಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಬಿಬಿಎಂಪಿ ನಡೆ ವಿರುದ್ಧ ವರ್ತಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಹಲವು ಪ್ರದೇಶಗಳ ಶಾಪಿಂಗ್ ಮಾಲ್ಗಳಲ್ಲಿ ನೆಲಮಾಡಿಯಲ್ಲಿ ಕೂಡ ವಾಣಿಜ್ಯ ಮಳಿಗೆಗಳು ಸಕ್ರಿಯವಾಗಿವೆ. ಮೆಜೆಸ್ಟಿಕ್ನ ನ್ಯಾಷನಲ್ ಬಜಾರ್, ಸಿಟಿ ಸೆಂಟರ್ ಸುತ್ತಮುತ್ತ ಈ ರೀತಿಯ ಮಳಿಗೆಗಳು ಹಲವು ವರ್ಷಗಳಿಂದಲೂ ಇವೆ. ಇವುಗಳನ್ನು ತೆರವು ಮಾಡಿಸಲು ಬಿಬಿಎಂಪಿ ಮುಂದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ವ್ಯಾಪಾರಿಗಳು, ಹೊಸದಾಗಿ ನಿರ್ಮಾಣ ಮಾಡಲಾಗುತ್ತಿರುವ ವಾಣಿಜ್ಯ ಸಂಕೀರ್ಣಗಳಿಗೆ ಈ ನಿಯಮ ಅಳವಡಿಕೆ ಮಾಡಿ. ಸುಮಾರು ವರ್ಷಗಳಿಂದ ನಾವು ಇಲ್ಲಿ ವ್ಯಾಪಾರ ಮಾಡಿಕೊಂಡಿದ್ದೇವೆ. ಈಗ ತೆರವು ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಹಳೆ ಜಿಎಸ್‌ಟಿ ಬಾಕಿ ಮನ್ನಾ ಮಾಡಿದ ಸರ್ಕಾರ: ಸಣ್ಣ ವ್ಯಾಪಾರಿಗಳ ಮುಷ್ಕರ ವಾಪಸ್
ಒಟ್ಟಾರೆಯಾಗಿ ಬಿಬಿಎಂಪಿ ಸಾರ್ವಜನಿಕರ ಅಥವಾ ಗ್ರಾಹಕರ ಹಿತದೃಷ್ಟಿಯಿಂದ ಅನಧಿಕೃತ ನೆಲ ಮಹಡಿಗಳ ತೆರವಿಗೆ ನೋಟಿಸ್ ಕೊಡಲು ಮುಂದಾಗಿದೆ. ಪಾಲಿಕೆಯ ಎಲ್ಲ ವಲಯಗಳಲ್ಲೂ ನೋಟಿಸ್ ನೀಡಲು ತಯಾರಿ ನಡೆಸಿದೆ. ಹೀಗಾಗಿ ನೆಲಮಹಡಿಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳ ಆಕ್ಷೇಪಕ್ಕೆ ಬಿಬಿಎಂಪಿ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9, ಬೆಂಗಳೂರು







