
ಬೆಂಗಳೂರು, ಮಾರ್ಚ್ 18: ಮದುವೆ ಮನೆಗಳಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಆರೋಪಿಯೋರ್ವನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಬಾಬು ಅಲಿಯಾಸ್ ಪಲ್ಸರ್ ಬಾಬು ಬಂಧಿತ ಆರೋಪಿಯಾಗಿದ್ದು, ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಕಳ್ಳತನಕ್ಕೆ ಬಂದಾಗಲೇ ಪೊಲೀಸರು ಆತನನ್ನು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ. ಮದುವೆ ಮನೆಗಳಲ್ಲಿ ಚಿಕ್ಕ ಮಕ್ಕಳನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ, ಮೊಬೈಲ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಈ ಖತರ್ನಾಕ್ ಕಳ್ಳನ ಬಂಧನದಿಂದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.
ಈ ಪಲ್ಸರ್ ಬಾಬು ದೊಡ್ಡ ದೊಡ್ಡ ಮದುವೆ ಛತ್ರಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ. ಮದುವೆಗೆ ಬರುವವರ ಗಮನ ಬೇರೆಡೆ ಇರುವಾಗ, ಅದರಲ್ಲೂ ವಿಶೇಷವಾಗಿ ಚಿಕ್ಕ ಮಕ್ಕಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಮಕ್ಕಳ ಬಳಿ ಇರುವ ಚಿನ್ನಾಭರಣ, ಮೊಬೈಲ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದ. ಇದಲ್ಲದೆ, ಮದುವೆ ಮನೆಯಲ್ಲಿರುವ ಕ್ಯಾಮೆರಾ, ಲ್ಯಾಪ್‌ಟಾಪ್ ಮತ್ತು ಬೈಕ್‌ಗಳನ್ನೂ ಕಳ್ಳತನ ಮಾಡುತ್ತಿದ್ದ. ಇದೇ ರೀತಿ ಆರೋಪಿ ಪಲ್ಸರ್ ಬಾಬು ಬರೋಬ್ಬರಿ 19 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರೋದು ತನಿಖೆಯಲ್ಲಿ ಗೊತ್ತಾಗಿದೆ.
ಇದನ್ನೂ ಓದಿ: ಹಬ್ಬಕ್ಕೆ ಊರಿಗೆ ಹೋಗುವ ಧಾವಂತ; ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ
ಐಷಾರಾಮಿ ಜೀವನ ಮತ್ತು ಮೋಜು ಮಸ್ತಿಗಾಗಿಯೇ ಕಳ್ಳತನ ಮಾಡುತ್ತಿದ್ದ ಈತ, ಪದೇ ಪದೇ ಜೈಲಿಗೆ ಹೋಗಿ ಬರ್ತಿದ್ದ. ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸಣ್ಣಪುಟ್ಟ ಪ್ರಕರಣಗಳಲ್ಲಿದ್ದ ಸುಮಾರು 2,000 ಜನರನ್ನು ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಜೈಲಿನಿಂದ ಹೊರಬಂದಿದ್ದ ಪಲ್ಸರ್ ಬಾಬು, ತನ್ನ ಕಳ್ಳತನದ ಚಾಳಿ ಮುಂದುವರಿಸಿದ್ದ. ಕದ್ದ ಚಿನ್ನಾಭರಣಗಳನ್ನು ಕರಗಿಸಿ ತನಗೆ ಬೇಕಾದಂತೆ ತಿರುಪತಿ ಲಾಕೆಟ್, ಉಂಗುರಗಳನ್ನು ಮಾಡಿಸಿಕೊಂಡು ಶೋಕಿ ಮಾಡುತ್ತಿದ್ದ. ಕಳ್ಳತನದಿಂದ ಬಂದ ಹಣದಲ್ಲಿ ಕಾರುಗಳನ್ನು ಖರೀದಿಸಿ ಸುತ್ತಾಡುತ್ತಾ ಮೋಜು ಮಸ್ತಿ ಮಾಡುತ್ತಿದ್ದ ಎನ್ನಲಾಗಿದೆ.
ಸದ್ಯ ಆರೋಪಿಯನ್ನು ಬಂಧಿಸಿರುವ ಸದಾಶಿವನಗರ ಪೊಲೀಸರು ಆತನಿಂದ ಒಟ್ಟು 42.38 ಲಕ್ಷ ರೂಪಾಯಿ ಮೌಲ್ಯದ 2 ಕಾರುಗಳು, 132 ಗ್ರಾಂ ಚಿನ್ನಾಭರಣ, 7 ಮೊಬೈಲ್‌ಗಳು, 1 ಕ್ಯಾಮೆರಾ, 2 ಲೆನ್ಸ್‌ಗಳು, 2 ಲ್ಯಾಪ್‌ಟಾಪ್‌ಗಳು, 1.20 ಲಕ್ಷ ನಗದು ಮತ್ತು 4 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪಲ್ಸರ್ ಬಾಬು ಬಂಧನದಿಂದ ಸದಾಶಿವನಗರ, ವರ್ತೂರು, ಜಾಲಹಳ್ಳಿ, ಹೆಣ್ಣೂರು ಮತ್ತು ಬಗಲಗುಂಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಒಟ್ಟು 8 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:40 pm, Wed, 18 March 26