ದೀಪಾವಳಿ ರಜೆ ಮುಗಿಸಿ ಬೆಂಗಳೂರಿನತ್ತ ಜನ: ನೆಲಮಂಗಲ, ಪೀಣ್ಯ, ಕುಣಿಗಲ್ ಬೈಪಾಸ್ ಬಳಿ ಟ್ರಾಫಿಕ್ ಜಾಮ್
ದೀಪಾವಳಿ ರಜಾ ಮುಗಿಸಿಕೊಂಡು ಜನರು ಊರುಗಳಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ. ಇದರಿಂದ ತುಮಕೂರು-ಸಿರಾ, ನೆಲಮಂಗಲ, ಪೀಣ್ಯ, ಕುಣಿಗಲ್ ಬೈಪಾಸ್ ಹತ್ತಿರ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ರವಿವಾರ ರಾತ್ರಿಯಿಂದ ಸೋಮವಾರದವರೆಗೆ ಈ ದಟ್ಟಣೆ ಮುಂದುವರಿದಿದ್ದು, ವಾಹನ ಸವಾರರು ಗಂಟೆಗಟ್ಟಲೇ ಟ್ರಾಫಿಕ್ನಲ್ಲಿ ಸಿಲುಕಿಕೊಂಡರು.
ಬೆಂಗಳೂರು, ನವೆಂಬರ್ 04: ದೀಪವಾಳಿ (Deepavali) ರಜೆ ಮುಗಿಸಿ ಜನರು ಊರುಗಳಿಂದ ಬೆಂಗಳೂರಿಗೆ (Bengaluru) ಬರುತ್ತಿದ್ದಾರೆ. ಊರುಗಳಿಗೆ ತೆರಳಿದ ಜನರು ಒಮ್ಮೆಲೆ ಬಂದಿದ್ದರಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ತುಮಕೂರು-ಶಿರಾ, ನೆಲಮಂಗಲ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ. ರವಿವಾರ (ಅ.03) ರಾತ್ರಿಯಿಂದ ಸೋಮವಾರ (ನ.04) ಈವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ವಾಹನ ಸವಾರರು ಗಂಟೆಗಟ್ಟಲೇ ಟ್ರಾಫಿಕ್ನಲ್ಲಿ ಸಿಲುಕಿಕೊಂಡರು.
ರವಿವಾರ ರಾತ್ರಿ ಬೆಂಗಳೂರು-ಶಿರಾ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಾವಿರಾರು ಪ್ರಯಾಣಿಕರು ಪರದಾಡಿದರು. ಇಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿದ್ದು, ವಾಹನ ವೇಗ ಗಂಟೆಗೆ 10 ಕಿಮೀ ಇತ್ತು. ರಸ್ತೆಯಲ್ಲಿ ವಾಹನಗಳು 3-5 ಕಿಲೋಮೀಟರ್‌ವರೆಗೆ ಸಾಲುಗಟ್ಟಿ ನಿಂತಿದ್ದವು.
ಟ್ವಿಟರ್ ಪೋಸ್ಟ್
A massive traffic jam has developed on the stretch between Sira (Tumkur) and Bengaluru, causing significant disruption for commuters and travelers. All major choke points along this route are experiencing severe congestion, with vehicles barely able to move at speeds exceeding 10… pic.twitter.com/kE7N13GIfA
— Karnataka Portfolio (@karnatakaportf) November 3, 2024
ಹಾಸನ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ನೆಲಮಂಗಲದ ಕುಣಿಗಲ್ ಬೈಪಾಸ್ ಹತ್ತಿರ ರವಿವಾರ (ನ.03)ರ ಸಂಜೆಯಿಂದ ಸೋಮವಾರ (ನ.04)ರ ನಸುಕಿನ ಜಾವದವರೆಗೆ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಮಳೆ ಸಹ ಬರುತ್ತಿತ್ತು. ಇದರಿಂದ ವಾಹನ ಸವಾರರು ಪರದಾಡಿದರು. ಆದರೆ, ನೆಲಮಂಗಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಜಾಗೃತರಾಗಿ ಸಂಚಾರ ವ್ಯವಸ್ಥೆ ಸುಗಮ ಗೊಳಿಸಿದರು.
ಟ್ವಿಟರ್ ಪೋಸ್ಟ್
ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಹೋಗಿದ್ದು ದಿನಾಂಕ 3.10.24ರಂದು ಹಾಸನ್ -ಬೆಂಗಳೂರು ಕಡೆಯಿಂದ ಮತ್ತು ತುಮಕೂರ್- ಬೆಂಗಳೂರಿಗೆ ವಾಪಸ್ ಬರುವದರಿಂದ ನೆಲಮಂಗಲದ ಕುಣಿಗಲ್ ಬೈಪಾಸ್ ಹತ್ತಿರ ಸಂಚಾರ ದಟ್ಟಣೆ ಹೆಚ್ಚಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಸಂಚಾರವ್ಯವಸ್ಥೆಯನ್ನು ಸುಗಮ ಗೊಳಿಸುತಿದ್ದಾರೆ. pic.twitter.com/6tGwR288hz
— nelamangalatrafficps (@nmltrafficbng) November 3, 2024
ಇನ್ನು, ಗೊರಗುಂಟೆಪಾಳ್ಯ, ಪೀಣ್ಯ ಫ್ಲೈ ಓವರ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿ ಕಿಲೋ ಮೀಟರ್ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿವೆ. ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಆಂಬುಲೆನ್ಸ್ ಚಾಲಕ ಕೆಲಕಾಲ ಪರದಾಡಿದರು. ಬಳಿಕ ಪೊಲೀಸರು ಆಂಬುಲೆನ್ಸ್ ತೆರಳಲು ಅನುವು ಮಾಡಿಕೊಟ್ಟರು. ಸದ್ಯ ಈ ರಸ್ತೆಯಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿದೆ. ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಮೆಟ್ರೋದತ್ತ ಮುಖ ಮಾಡಿದ ಜನ
ಬೆಂಗಳೂರು ನಗರದೊಳಗೆ ಬರಲು ಟ್ರಾಫಿಕ್ ಜಾಮ್ ಅಡ್ಡಿಯಾದ ಹಿನ್ನೆಲಯಲ್ಲಿ ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಜನರು ನಾಗಸಂದ್ರದಿಂದ ನಮ್ಮ ಮೆಟ್ರೋ ಪ್ರಯಾಣಿಸಿದರು. ಸರ್ಕಾರಿ ಬಸ್ಗಳಿಗೂ ಕೂಡ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಗಂಟೆಗಟ್ಟಲೆ ಬಸ್ಗಳು ಟ್ರಾಫಿಕ್ನಲ್ಲಿ ನಿಂತಿದ್ದವು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಕೆಲ ಪ್ರಯಾಣಿಕರು ನಾಗಸಂದ್ರದಲ್ಲೇ ಬಸ್ನಿಂದ ಇಳಿದು ಮೆಟ್ರೋ ಮೂಲಕ ಬೆಂಗಳೂರು ನಗರದೊಳಗೆ ಆಗಮಿಸಿದರು.
ಇದನ್ನೂ ಓದಿ: ರಜೆ ಮುಗಿಸಿ ಬೆಂಗಳೂರಿಗೆ ಬಂದ ಜನ: ನಮ್ಮ ಮೆಟ್ರೋದಲ್ಲಿ ಜನಜಂಗುಳಿ
ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೆಟ್ರೋದತ್ತ ಮುಖ ಮಾಡಿದ್ದರಿಂದ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ ಉಂಟಾಗಿತ್ತು. ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತು ನಿಲ್ದಾಣದ ಒಳಗೆ ಪ್ರವೇಶಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Mon, 4 November 24