ಬೆಂಗಳೂರು: ಚಿತ್ರದುರ್ಗ ಬಸ್ ದುರಂತದ ಕಹಿ ನೆನಪು ಮಾಸುವ ಮುನ್ನವೇ ಡ್ರಂಕ್ ಆ್ಯಂಡ್ ಡ್ರೈವ್ ಮಾಡಿ ಸಿಕ್ಕಿಬಿದ್ದ ಖಾಸಗಿ ಬಸ್ ಚಾಲಕ
ಸೀ ಬರ್ಡ್ ಬಸ್‌ನ ಚಾಲಕನೊಬ್ಬ ಬೆಂಗಳೂರಿನಲ್ಲಿ ಮದ್ಯಪಾನ ಮಾಡಿ ಬಸ್ ಚಲಾಯಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಚಾಲಕ ಕುಡಿದಿರುವುದು ಗೊತ್ತಾಗಿದೆ. ಇತ್ತೀಚೆಗೆ ಇದೇ ಕಂಪನಿಯ ಬಸ್ ಚಿತ್ರದುರ್ಗದ ಗೊರ್ಲತ್ತು ಕ್ರಾಸ್ ಬಳಿ ಅಪಘಾತಕ್ಕೀಡಾಗಿ 7 ಮಂದಿ ಸಾವಿಗೀಡಾಗಿದ್ದರು.

ಬೆಂಗಳೂರು, ಡಿಸೆಂಬರ್ 27: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ನಡೆದ ಸೀ ಬರ್ಡ್ ಬಸ್ ದುರಂತದ ಬೆನ್ನಲ್ಲೇ, ಅದೇ ಕಂಪನಿಯ ಮತ್ತೊಬ್ಬ ಚಾಲಕನ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಆತಂಕ ಮೂಡಿಸುವಂತಹ ಈ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಬೆಂಗಳೂರಿನಿಂದ ಗೋವಾಕ್ಕೆ ಹೊರಟಿದ್ದ ಖಾಸಗಿ ಸೀ ಬರ್ಡ್ ಬಸ್ ಅನ್ನು ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದ ಚಾಲಕ, ಉಪ್ಪಾರಪೇಟೆ ಸಂಚಾರಿ ಪೊಲೀಸರ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ತೀವ್ರ ತಪಾಸಣೆ ನಡೆಯುತ್ತಿದ್ದ ವೇಳೆ, ಅನುಮಾನಾಸ್ಪದವಾಗಿ ಬಸ್ ತಡೆಯಲಾಯಿತು. ತಪಾಸಣೆಯಲ್ಲಿ ಚಾಲಕ ಮದ್ಯಪಾನ ಮಾಡಿರುವುದು ದೃಢಪಟ್ಟ ಕೂಡಲೇ, ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡರು.
ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ ಪೊಲೀಸರು, ತಕ್ಷಣವೇ ಬೇರೆ ಚಾಲಕನ ವ್ಯವಸ್ಥೆ ಮಾಡಿ ಬಸ್ ಅನ್ನು ಗೋವಾಕ್ಕೆ ಕಳುಹಿಸಿದರು. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಖಾಸಗಿ ಬಸ್ಗಳ ಮೇಲಿನ ನಿಗಾವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಡಿಸೆಂಬರ್ 25ರ ನಸುಕಿನಲ್ಲಿ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಸೀ ಬರ್ಡ್ ಬಸ್ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಎದುರುಬದಿಯಿಂದ ಬರುತ್ತಿದ್ದ ಕಂಟೇನರ್ ಲಾರಿ ಡಿವೈಡರ್ ಹಾರಿ ಬಸ್‌ಗೆ ಗುದ್ದಿದ ಪರಿಣಾಮ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿತ್ತು. ಈ ಭೀಕರ ದುರಂತದ ಕಹಿ ನೆನಪು ಇನ್ನೂ ಮಾಸುವ ಮುನ್ನವೇ ಅದೇ ಕಂಪನಿಯ ಬಸ್ ಚಾಲಕ ನಿರ್ಲಕ್ಷ್ಯದ ಚಾಲನೆ ಮಾಡಿದ್ದು ಬೆಳಕಿಗೆ ಬಂದಿರುವುದು ಆತಂಕ ಹೆಚ್ಚಿಸಿದೆ.
ಬೆಂಗಳೂರಿನಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ಕಾರ್ಯಾಚರಣೆ ತೀವ್ರ
ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರು ನಗರದಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆಯನ್ನು ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ. ನಗರದ 140ಕ್ಕೂ ಹೆಚ್ಚು ಪಾಯಿಂಟ್‌ಗಳಲ್ಲಿ ಶುಕ್ರವಾರ ರಾತ್ರಿ ನಡೆಸಿದ ತಪಾಸಣೆಯಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ಒಟ್ಟು 1500ಕ್ಕೂ ಹೆಚ್ಚು ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು: ಮೃತರ ಸಂಖ್ಯೆ 7ಕ್ಕೆ ಏರಿಕೆ
ಡ್ರಂಕ್ ಆ್ಯಂಡ್ ಡ್ರೈವ್ ಮಾಡಿ ಪ್ರಯಾಣಿಕರ ಜೀವಗಳೊಂದಿಗೆ ಚೆಲ್ಲಾಟವಾಡುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 am, Sat, 27 December 25



