ಭಾರಿ ಮಳೆಗೆ ಬೆಂಗಳೂರು ತತ್ತರ: ಬಿದ್ದ ಮರಗಳು, ಹಲವೆಡೆ ರಸ್ತೆಗಳೇ ಮಾಯ, ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ

| Updated By: Ganapathi Sharma

Updated on: Oct 16, 2024 | 6:59 AM

Bangalore rains: ಕಚೇರಿಗೆ ಹೊರಟವರು ರಸ್ತೆಯಲ್ಲೇ ಬಾಕಿಯಾಗಿದರು. ಶಾಲೆಗೆ ಹೋಗಿದ್ದವರು ಗಂಡಾಂತರಕ್ಕೆ ಸಿಲುಕಿದರು. ಕೆಲಸಕ್ಕೆ ಹೋಗಿದ್ದವರು ಇಡೀ ದಿನ ರಸ್ತೆ ಮಧ್ಯೆ ಪರದಾಡಿದರು. ಬೆಂಗಳೂರಿನಲ್ಲಿ ಅಬ್ಬರಿಸಿ ಬೊಬ್ಬಿರಿದ ಮಳೆ ಸೋಮವಾರ ಎಲ್ಲರನ್ನೂ ಸಂಕಷ್ಟಕ್ಕೆ ತಳ್ಳಿತು. ಸೋಮವಾರ ತಡರಾತ್ರಿ, ಮಂಗಳವಾರ ಬೆಳಗ್ಗೆಯೂ ಮಳೆ ಸುರಿಯುತ್ತಿದೆ.

ಭಾರಿ ಮಳೆಗೆ ಬೆಂಗಳೂರು ತತ್ತರ: ಬಿದ್ದ ಮರಗಳು, ಹಲವೆಡೆ ರಸ್ತೆಗಳೇ ಮಾಯ, ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ
ಬೆಳ್ಳಂದೂರಿನಲ್ಲಿ ರಸ್ತೆಯಲ್ಲಿ ನೀರು ತುಂಬಿರುವುದು
Follow us on

ಬೆಂಗಳೂರು, ಅಕ್ಟೋಬರ್ 16: ಸೈಕ್ಲೋನ್‌ ಪರಿಣಾಮ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಇಡೀ ನಗರವೇ ಕಂಗಾಲಾಗಿತ್ತು. ಭಾನುವಾರದಿಂದಲೂ ರಚ್ಚೆ ಹಿಡಿದಿದ್ದ ಮಳೆ, ಸೋಮವಾರ ರೌದ್ರರೂಪ ತಾಳಿತು. ಮುಂಜಾನೆಯಿಂದ ಸಂಜೆವರೆಗೂ ಒಂದೇ ಸಮನೆ ಸುರಿಯಿತು. ವರುಣಾರ್ಭಟಕ್ಕೆ ಮಹಾನಗರದ ಗಲ್ಲಿ ಗಲ್ಲಿಯಲ್ಲಿಯೂ ನೀರು ತುಂಬುವಂತಾಯಿತು.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಬೆಂಗಳೂರಿಗೆ ದೊಡ್ಡ ಮಳೆಯನ್ನೇ ಹೊತ್ತುತಂದಿದೆ. ಭಾನುವಾರ ಸಂಜೆಯಿಂದಲೂ ಶುರುವಾಗಿದ್ದ ಮಳೆ ಸೋಮವಾರ ಸಂಜೆವರೆಗೂ ಒಂದೇ ಸಮನೇ ಧಾರಾಕಾರವಾಗಿ ಸುರಿದಿದೆ. ಆಗೋಮ್ಮೆ ಈಗೊಮ್ಮೆ ಬಿಡುವು ಕೊಟ್ಟರೂ ಬರೋಬ್ಬರಿ 59.8 ಮಿ.ಮೀ ಮಳೆಯಾಗಿದೆ. ಅದರಲ್ಲೂ ಎಚ್​ಎಎಲ್ ವಿಮಾನ ನಿಲ್ದಾಣದಲ್ಲಿ 80.01 ಮಿ.ಮೀ ಮಳೆ ದಾಖಲಾಗಿದೆ. ಈ ವರುಣಾರ್ಭಟ ಬೆಂಗಳೂರಿನಲ್ಲಿ ಸೃಷ್ಟಿಸಿರೋ ಅವಾಂತರಗಳು ಒಂದೆರಡಲ್ಲ.

ರಾಜ್‌ಕುಮಾರ್ ಸಮಾಧಿ ರಸ್ತೆಯಲ್ಲಿ ಉರುಳಿಬಿದ್ದ ಬೃಹತ್‌ ಮರ

ಬೆಂಗಳೂರು ನಗರದ ಗೊರಗುಂಟೆಪಾಳ್ಯ ಬಳಿಯ ರಾಜಕುಮಾರ್ ರಸ್ತೆಯಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು, ಟೆಂಪೊ, ಕಾರು ಜಖಂ ಆಗಿದ್ದವು. ಮರ ಬಿದ್ದಿದ್ದರಿಂದ ಟ್ರಾಫಿಕ್‌ಜಾಮ್‌ ಉಂಟಾಗಿ ಸವಾರರು ಪರದಾಡಿದರು.

ವಿದ್ಯಾರಣ್ಯಪುರದಲ್ಲಿಯೂ ನೆಲಕ್ಕುರುಳಿದ ಮರಗಳು

ಬೆಂಗಳೂರು ನಗರದ ಹೆಚ್​ಎಂಟಿ ಲೇಔಟ್, ವಿದ್ಯಾರಣ್ಯಪುರದಲ್ಲಿ ಮರಗಳು ನೆಲಕ್ಕುರುಳಿದವು. ಇದರಿಂದ ಕೆಲಕಾಲ ಸವಾರರು ಪರದಾಡುವಂತಾಯಿತು. ಬಳಿಕ ಬಿಬಿಎಂಪಿ ಸಿಬ್ಬಂದಿ ನೆಲಕ್ಕುರುಳಿದ್ದ ಮರ ತೆರವು ಮಾಡಿದರು.

ಮಾನ್ಯತಾ ಟೆಕ್‌ಪಾರ್ಕ್‌ ಬಳಿ ರಸ್ತೆ ಬದಿಯೇ ಬೃಹತ್‌ ಕಟ್ಟಡ ಕಾಮಗಾರಿ ನಡೆಯುತ್ತಿದೆ. 30 ಅಡಿಯಷ್ಟು ನೆಲ ಅಗೆಯಲಾಗಿದ್ದು, ರಸ್ತೆ ಪಕ್ಕದಲ್ಲೇ ಕ್ಷಣಕ್ಷಣ ಭೂಮಿ ಕುಸಿಯುತ್ತಿದೆ. ನೋಡ ನೋಡುತ್ತಿದ್ದಂತೆಯೇ ಕಾಂಪೌಂಡ್‌ ಕೂಡಾ ಕುಸಿದು ಬಿದ್ದಿದ್ದು, ಸವಾರರು ಜೀವಭಯದಲ್ಲೇ ಸಂಚರಿಸುತ್ತಿದ್ದರು.

ಬೆಳ್ಳಂದೂರು ಕೆರೆ ರಸ್ತೆ ಕೂಡಾ ಈಗ ಕೆರೆಯಂತೆಯೇ ಆಗಿದೆ. ರಸ್ತೆ ಮೇಲೆ 2 ಅಡಿಯಷ್ಟು ನೀರು ನಿಂತಿದ್ದು ಸವಾರರು ಅದರಲ್ಲೇ ಸರ್ಕಸ್‌ ಮಾಡುತ್ತಾ ಸಾಗಿದರು.

ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ರಸ್ತೆಯೇ ಮಾಯ!

ವಿಶ್ವದ ದೈತ್ಯ ಐಟಿ ಕಂಪನಿಗಳು ವಾಸ್ತವ್ಯ ಹೂಡಿರುವ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ರಸ್ತೆಯೇ ಕಾಣದಾಯಿತು. ಮಂಡಿ ಮಟ್ಟಕ್ಕೆ ತುಂಬಿದ್ದ ನೀರಿನಲ್ಲೇ ಬೈಕ್‌ ಸವಾರರು ಸಂಚಾರ ಮಾಡಿದರು.

ಹೆಣ್ಣೂರು ಬಾಗಲೂರು ಮುಖ್ಯ ರಸ್ತೆ ಹಾಗೂ ವಡ್ಡರಪಾಳ್ಯ ಸಾಯಿ ಬಡಾವಣೆಯ ರಸ್ತೆ ಸಂಪೂರ್ಣ ಜಲಾವೃತ ಆಗಿದ್ದು, ಪಾಲಿಕೆ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ.

ಆರ್‌.ಆರ್‌.ನಗರದ ಕೆರೆಗೋಡಿ ರಸ್ತೆ, ಸರ್ಜಾಪುರ ರಸ್ತೆ, ಏರ್‌ಪೋರ್ಟ್‌ ರಸ್ತೆಯಲ್ಲಿ ಗುಂಡಿಗಳಿಂದ ಸವಾರರು ಹೈರಾಣಾದರು.

ಕಂಟ್ರೋಲ್ ರೂಮ್ ತೆರೆದ ಬಿಬಿಎಂಪಿ: ಸಮಸ್ಯೆ ಆಲಿಸಿದ ಡಿಸಿಎಂ

ಮಳೆ ಸಮಸ್ಯೆ ನಿರ್ವಹಣೆಗೆ ಬಿಬಿಎಂಪಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಈ ಕಂಟ್ರೋಲ್ ರೂಂಗೆ ತಡರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದರು. ಅಧಿಕಾರಿಗಳಿಂದ ಮಳೆ ಹಾನಿ ಕುರಿತು ಮಾಹಿತಿ ಪಡೆದು, ಜನರ ಸಮಸ್ಯೆ ಆಲಿಸಿದರು.

ಅತ್ತ ಕೇಂದ್ರ ಸಚಿವ ಕುಮಾರಸ್ವಾಮಿ ಟ್ವೀಟ್ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ಹಾರಿಹಾಯ್ದಿದ್ದಾರೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಭಾರತದ ಐಟಿ ಕಾರಿಡಾರ್‌ನಲ್ಲಿ ಪ್ರವಾಹಸದೃಶ ಪರಿಸ್ಥಿತಿ ತಲೆದೋರಿದೆ ಅಂತಾ ಟ್ವೀಟ್​​​ನಲ್ಲೇ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಒಂದೇ ದಿನದ ವರುಣನ ಅಬ್ಬರಕ್ಕೆ ಭಾರತದ ಸಿಲಿಕಾನ್ ವ್ಯಾಲಿಯ ಮೂಲಸೌಕರ್ಯ ವ್ಯವಸ್ಥೆ ತತ್ತರಿಸಿ ಹೋಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಅಸಮರ್ಪಕ ನಿರ್ವಹಣೆಯಿಂದ ಭಾರತದ ಐಟಿ ಕಾರಿಡಾರ್​ನಲ್ಲಿ ಪ್ರವಾಹಸದೃಶ ಪರಿಸ್ಥಿತಿ ತಲೆದೋರಿದೆ.

ಇಂದು ಶಾಲೆಗಳಿಗೆ ರಜೆ: ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ

ಮಳೆ ಆರ್ಭಟದಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಮಾತ್ರ ರಜೆ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ತಾಸುಗಟ್ಟಲೆ ನಿರಂತರ ಸುರಿದ ಮಳೆ: ಹಲವೆಡೆ ರಸ್ತೆಗಳು ಜಲಾವೃತ, ಟ್ರಾಫಿಕ್ ಜಾಮ್

ಬೆಂಗಳೂರಿನಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ಇಂದು ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂಗೆ ಅನುಮತಿ ನೀಡಲಾಗಿದೆ ಎಂದು ಇನೋವೇಷನ್ & ಟೆಕ್ನಾಲಜಿ ಸೊಸೈಟಿ ಸುತ್ತೋಲೆ ಹೊರಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ