- Kannada News Photo gallery Incessant rain for hours in Bengaluru: many roads waterlogged, traffic jams, See pics here
ಬೆಂಗಳೂರಿನಲ್ಲಿ ತಾಸುಗಟ್ಟಲೆ ನಿರಂತರ ಸುರಿದ ಮಳೆ: ಹಲವೆಡೆ ರಸ್ತೆಗಳು ಜಲಾವೃತ, ಟ್ರಾಫಿಕ್ ಜಾಮ್
ಬೆಂಗಳೂರು, ಅಕ್ಟೋಬರ್ 15: ಬೆಂಗಳೂರು ನಗರದಾದ್ಯಂತ ಮಂಗಳವಾರ ಬೆಳಗ್ಗೆಯಿಂದ ಎಡೆಬಿಡದೆ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಳ್ಳುವಂತಾಯಿತು. ಕೆಆರ್ ಮಾರುಕಟ್ಟೆ, ಓಕಳಿಪುರಂ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆ, ಅಂಡರ್ಪಾಸ್ಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಬೆಂಗಳೂರು ಹಾಗೂ ಕರ್ನಾಟಕದ ಇತರ ಜಿಲ್ಲೆಗಳಿಗೆ ಹವಾಮಾನ ಇಲಾಖೆ 3 ದಿನ ಮಳೆ ಮುನ್ಸೂಚನೆ ನೀಡಿದೆ.
Updated on: Oct 15, 2024 | 12:41 PM

ಮೆಜೆಸ್ಟಿಕ್ ಬಳಿಯ ಓಕಳಿಪುರ ಅಂಡರ್ಪಾಸ್ನಲ್ಲಿ ನೀರು ನಿಂತು ನೀರಿನಲ್ಲಿ ಎರಡು ವಾಹನಗಳು ಕೆಟ್ಟುನಿಂತವು. ಪರಿಣಾಮವಾಗಿ ಓಕಳಿಪುರದ ಸುತ್ತಮುತ್ತ ಟ್ರಾಫಿಕ್ಜಾಮ್ ಉಂಟಾಯಿತು. ನಿಧಾನಗತಿಯಲ್ಲಿ ಚಲಿಸುತ್ತಿರುವ ವಾಹನಗಳ ದಟ್ಟಣೆಯಲ್ಲಿ ಸಿಲುಕಿ ವಾಹನ ಸವಾರರ ಪರದಾಟಪಟ್ಟರು. ಅಂಡರ್ಪಾಸ್ ಬಳಿ ಟ್ರಾಫಿಕ್ನಲ್ಲಿ ಸಿಲುಕಿ ಌಂಬುಲೆನ್ಸ್ ಕೂಡ ಪರದಾಡುವಂತಾಯಿತು.

ಮುಂಜಾನೆಯಿಂದ ಬಿಟ್ಟೂಬಿಡದೆ ಮಳೆ ಸುರಿದಿದ್ದರಿಂದ ಬೆಳಗ್ಗೆ ಕಚೇರಿ, ಶಾಲೆಗಳಿಗೆ ತೆರಳುವ ಮಕ್ಕಳು ಸಂಕಷ್ಟಕ್ಕೀಡಾದರು. ಒಮ್ಮೆ ಧೋ ಎಂದು ಸುರಿಯುವ ಮಳೆ, ನಂತರ ಜಿಟಿಜಿಟಿ ಜಿನುಗುವ ಮಳೆಯಿಂದ ಬೈಕ್ ಸವಾರರು ಒದ್ದಾಡಿದರು. ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್ ಆಗಿ ಸವಾರರಿಗೆ ಸಂಕಷ್ಟ ಎದುರಾಯಿತು.

ಮಳೆ ಆರ್ಭಟಕ್ಕೆ ಯಶವಂತಪುರ, ಗೊರಗುಂಟೆಪಾಳ್ಯ ಸುತ್ತ ಕಿಲೋ ಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತವು. ಕಚೇರಿ, ಶಾಲಾ-ಕಾಲೇಜುಗಳಿಗೆ ಹೋಗುವವರು ಸಂಕಷ್ಟ ಅನುಭವಿಸಿದರು.

ಬೆಂಗಳೂರಿನ 8ನೇ ಮೈಲಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. 8ನೇ ಮೈಲಿನಿಂದ ಹೆಸರಘಟ್ಟ ರಸ್ತೆಯಲ್ಲಿ ಸಂಚಾರ ದಟ್ಟಣೆಯಾಗಿ ಸವಾರರು ಪರದಾಡಿದರು. ದೇವನಹಳ್ಳಿಯಲ್ಲಿ ಮಳೆಯಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರದಾಡಿದರು. ದೊಡ್ಡಬಳ್ಳಾಪುರ, ಹೊಸಕೋಟೆ ಭಾಗದಲ್ಲೂ ಜಿಟಿಜಿಟಿ ಮಳೆಯಾಗಿದೆ.

ಹೆಚ್ಎಂಟಿ ಲೇಔಟ್ನಲ್ಲಿ ಬೃಹತ್ ಮರ ಧರೆಗುರುಳಿ ಕಾರೊಂದು ಸಂಪೂರ್ಣ ಜಖಂಗೊಂಡಿತು. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮರ ಉರುಳಿತ್ತು. ಮರ ತೆರವಿಗೆ ಬಿಬಿಎಂಪಿಗೆ ದೂರು ನೀಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿತ್ತು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ 5 ಗಂಟೆ ಸುಮಾರಿಗೆ ಮರ ಧರೆಗುರುಳಿದ್ದು, ಜನಸಂಚಾರ ಕಡಿಮೆ ಇದ್ದಿದ್ದಕ್ಕೆ ದೊಡ್ಡ ಅನಾಹುತ ತಪ್ಪಿದೆ.



















