
ಬೆಂಗಳೂರು, ಜೂನ್ 02: ನಗರದ ಹಲವೆಡೆ ಮಳೆ (Rain) ಸುರಿದಿದ್ದು, ಏಕಾಏಕಿ ವರುಣನ ಆಗಮನದಿಂದ ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ. ಕಚೇರಿಗಳಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ದಿಢೀರ್ ಸುರಿದ ಮಳೆಗೆ ಪರದಾಟ ನಡೆಸಿದ್ದು, ಬಸ್ ನಿಲ್ದಾಣಗಳು ಮತ್ತು ಅಂಗಡಿ ಮುಗಟ್ಟುಗಳ ಬಳಿ ನಿಂತ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಂಡುಬಂದಿವೆ. ಮೆಜೆಸ್ಟಿಕ್, ವಸಂತನಗರ, ಕೆ.ಆರ್.ಸರ್ಕಲ್, ಕೆ.ಆರ್.ಮಾರ್ಕೆಟ್, ವಿಜಯನಗರ, ಜಯನಗರ, ಬನಶಂಕರಿ, ಕೆಂಗೇರಿ, ನಾಯಂಡಹಳ್ಳಿ, ಬಸವೇಶ್ವರ ನಗರ, ರಾಜಾಜಿನಗರ, ಶಿವಾಜಿನಗರ, ಮಲ್ಲೇಶ್ವರಂ, ಬಸವನಗುಡಿ, ಗಿರಿನಗರ, ಜ್ಞಾನಭಾರತಿ, ಆರ್.ಆರ್.ನಗರ, ಶಾಂತಿನಗರ, ಕೋರಮಂಗಲ, ಹೆಚ್ಎಸ್ಆರ್ ಲೇಔಟ್, ಆಡುಗೋಡಿ, ಮಡಿವಾಳ, ಬಿಟಿಎಂ ಲೇಔಟ್, ಹೆಬ್ಬಾಳ, ಕಾಮಾಕ್ಷಿಪಾಳ್ಯ, ಬ್ಯಾಟರಾಯನಪುರ, ಸಹಕಾರನಗರ, ಯಲಹಂಕ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ.
“Traffic advisory ”
Traffic is slow from Kadubisanahalli towards Bellandur due to water logging at Devarabisana halli upper ramp & in front of Ecospace Commuters,we request your patience & cooperation. @DCPSouthTrBCP @acphsrtrps @blrcitytraffic @BlrCityPolice @0RRCA @kdevforum pic.twitter.com/XfwVmsTzc9— BELLANDURU TRAFFIC BTP (@bellandurutrfps) June 2, 2026
ನಗರದ ಕೆಲವು ಏರಿಯಾಗಳಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಬಾಗ್ಮನೆ ಟೆಕ್ ಪಾರ್ಕ್, ಮಾರತಹಳ್ಳಿ ಸೇರಿ ಹಲವೆಡೆ ರಸ್ತೆಗಳು ಹೊಳೆಯಂತಾಗಿದ್ದು, ದೇವರಬೀಸನಹಳ್ಳಿ ಮೇಲ್ಸೇತುವೆ ರ್ಯಾಂಪ್‌ನಲ್ಲಿ ನೀರು ನಿಂತಿರುವ ಕಾರಣ ಕಡುಬೀಸನಹಳ್ಳಿಯಿಂದ ಬೆಳ್ಳಂದೂರು ಕಡೆಗೆ ವಾಹನಗಳ ಸಂಚಾರ ಕೂಡ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ: ಇಡೀ ರಾಜ್ಯದಲ್ಲಿಂದು ಭಾರೀ ಮಳೆ! 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಗುಡುಗು ಸಹಿತ ವರುಣನ ಆರ್ಭಟದ ಹಿನ್ನೆಲೆ ನವದೆಹಲಿಯಿಂದ ಆಗಮಿಸಿದ್ದ ಇಂಡಿಗೋ ಫ್ಲೈಟ್ ಲ್ಯಾಂಡಿಂಗ್ ಸಾಧ್ಯವಾಗದೆ ಕೆಲ ಕಾಲ ಆಕಾಶದಲ್ಲೇ ಸುತ್ತಾಡಿದ ಪ್ರಸಂಗವೂ ನಡೆದಿದೆ. ವಿಮಾನ ನಿಲ್ದಾಣದಿಂದ ನಗರದ ಕಡೆ ಆಗಮಿಸಬೇಕಿದ್ದ ಪ್ರಯಾಣಿಕರು ಕೂಡ ಮಳೆಯಿಂದ ತೀವ್ರ ತೊಂದರೆ ಅನುಭವಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:16 pm, Tue, 2 June 26