
ಬೆಂಗಳೂರು, ಮೇ 01: ಮೊನ್ನೆಯಷ್ಟೇ ಜಸ್ಟ್ 1 ಗಂಟೆ ಸುರಿದ ಮಳೆಗೆ ರಾಜಧಾನಿ ಅಕ್ಷರಶಃ ತತ್ತರಿಸಿ ಹೋಗಿತ್ತು. ನಿನ್ನೆ ಮೋಡ ಕವಿದ ವಾತಾವರಣವಿದ್ದರು ಮಳೆ (Rain) ಆಗಿರಲಿಲ್ಲ. ಆದರೆ ಇಂದು ಬೆಂಗಳೂರಿಗೆ (Bangaluru) ಮತ್ತೆ ವರುಣನ ಎಂಟ್ರಿ ಆಗಿದ್ದು, ನಗರದಾದ್ಯಂತ ಆರ್ಭಟ ಜೋರಾಗಿದೆ. ಸಂಜೆಯಾಗುತ್ತಿದ್ದಂತೆ ಶುರುವಾದ ಧಾರಾಕಾರ ಮಳೆಗೆ ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಕೆಲಸ ಮುಗಿಸಿ ಮನೆಗೆ ಮರಳುವ ಹೊತ್ತಿನಲ್ಲೇ ಸುರಿದ ಮಳೆಗೆ ಸಿಟಿ ಮಂದಿ ಹಿಡಿಶಾಪ ಕೂಡ ಹಾಕುವಂತಾಗಿದೆ.
ವಸಂತನಗರ, ಸಿಟಿ ಮಾರ್ಕೆಟ್, ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಜೆಪಿ ನಗರ, ಬನಶಂಕರಿ, ಕೋಣನಕುಂಟೆ, ಹೆಬ್ಬಾಳ, ಯಲಹಂಕ, ಸದಾಶಿವನಗರ, ರಾಜಾಜಿನಗರ, ವಿಜಯನಗರ, ಚಂದ್ರಲೇಔಟ್, ಇಂದಿರಾನಗರ, ಲಗ್ಗೆರೆ, ನಂದಿನಿಲೇಔಟ್, ಆಡುಗೋಡಿ, ಕೋರಮಂಗಲ, ಕಾರ್ಪೊರೇಷನ್, ಮಹಾಲಕ್ಷ್ಮಿ ಲೇಔಟ್, ಸುಬ್ರಮಣ್ಯ ನಗರ, ನಾಗರಬಾವಿ, ಮೂಡಲಪಾಳ್ಯ, ಗಿರಿನಗರ, ಬಸವನಗುಡಿ, ಮಲ್ಲೇಶ್ವರಂ, ರಿಚ್ಮಂಡ್ ಟೌನ್, ಟ್ರಿನಿಟಿ, ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಫ್ರೀಡಂ ಪಾರ್ಕ್ ಮತ್ತು ಟೌನ್ ಹಾಲ್ ಸುತ್ತಮುತ್ತ ಜೋರು ಮಳೆ ಸುರಿಯುತ್ತಿದೆ.
ಬೆಂಗಳೂರಿನೆಲ್ಲೆಡೆ ವರುಣನ ಅಬ್ಬರದಿಂದಾಗಿ ಫ್ರೀಡಂ ಪಾರ್ಕ್ ಬಳಿಯ ಶೇಷಾದ್ರಿ ರೋಡ್ ಜಲಾವೃತಗೊಂಡಿದೆ. ಹೀಗಾಗಿ ಮಳೆ ನೀರಿನಲ್ಲಿಯೇ ವಾಹನಗಳು ಸಂಚರಿಸುತ್ತಿವೆ. ಕೆಆರ್ ಮಾರುಕಟ್ಟೆ ರಸ್ತೆ ಕೂಡ ಮಳೆಗೆ ಮಿನಿ ಕೆರೆಯಾಗಿದ್ದು, ರಸ್ತೆ ತುಂಬಾ ಮಳೆ ನೀರು ತುಂಬಿಕೊಂಡಿದೆ. ಅದೇ ರೀತಿಯಾಗಿ ಎಸ್ಪಿ ರಸ್ತೆ ಸುತ್ತ ಕೂಡ ರಸ್ತೆಯಲ್ಲಿ ಮಳೆ ನೀರು ನಿಂತುಕೊಂಡಿದ್ದು, ಸಂಚಾರ ಅಸ್ತವ್ಯಸ್ತ ಉಂಟಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಗಾಳಿ ಸಹಿತ ಮಳೆಗೆ ಅವಾಂತರ ಸಂಭವಿಸಿದೆ. ಟೊಮೆಟೊ ಮಂಡಿಗಳ ಮೇಲೆ ಹಾಕಿದ್ದ ಸೀಟ್ಗಳು ಕುಸಿದು ವಾಹನಗಳು ಜಖಂಗೊಂಡಿವೆ. ಬಿರುಗಾಳಿಗೆ ಕೆಲವೆಡೆ ಸೀಟ್ಗಳು ಹಾರಿಹೋಗಿವೆ. ಬಾಗೇಪಲ್ಲಿ ಪಟ್ಟಣದ ಕೆ.ಎಚ್.ಬಿ ಕಾಲೋನಿ ಬಳಿ ನಿರ್ಮಿಸಿರುವ ಟೊಮೆಟೊ ಮಾರುಕಟ್ಟೆಯಲ್ಲಿ ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:43 pm, Fri, 1 May 26