
ಬೆಂಗಳೂರು, ಏ.30: ಬುಧವಾರದ (ಏ.29) ಭೀಕರ ಮಳೆಗೆ ಈಗಾಗಲೇ 9 ಜೀವಗಳನ್ನು ಬಲಿ ಪಡೆದಿರುವ ಸಿಲಿಕಾನ್ ಸಿಟಿಯಲ್ಲಿ ಇಂದು ಕೂಡ ಮಳೆಯ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ನಗರದಲ್ಲಿ ಇಂದು ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ನಗರದ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ. ಪ್ರಮುಖವಾಗಿ ಈ ಕೆಳಗಿನ ಭಾಗಗಳಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಲಾಗಿದೆ.
ದಕ್ಷಿಣ ಬೆಂಗಳೂರು: ಜೆ.ಪಿ. ನಗರ, ಜಯನಗರ, ಬನ್ನೇರುಘಟ್ಟ ರಸ್ತೆ ಮತ್ತು ಬಿಟಿಎಂ ಲೇಔಟ್.
ಪೂರ್ವ ಬೆಂಗಳೂರು: ವೈಟ್‌ಫೀಲ್ಡ್, ಮಾರತಹಳ್ಳಿ, ಎಚ್‌ಎಸ್‌ಆರ್ ಲೇಔಟ್ ಮತ್ತು ಬೆಳ್ಳಂದೂರು.
ಕೇಂದ್ರ ಭಾಗ: ಶಿವಾಜಿನಗರ, ಮೆಜೆಸ್ಟಿಕ್, ಎಂ.ಜಿ. ರಸ್ತೆ ಮತ್ತು ಶಾಂತಿನಗರ.
ಉತ್ತರ ಬೆಂಗಳೂರು: ಯಲಹಂಕ, ಹೆಬ್ಬಾಳ ಮತ್ತು ಆರ್.ಟಿ. ನಗರದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಬಹುದು.
ಈಗಾಗಲೇ ಹಲವು ಸಾವುಗಳು ವಿದ್ಯುತ್ ಸ್ಪರ್ಶದಿಂದ ಸಂಭವಿಸಿರುವುದರಿಂದ, ಮಳೆಯ ವೇಳೆ ವಿದ್ಯುತ್ ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್‌ಗಳ ಹತ್ತಿರ ಹೋಗಬೇಡಿ ಎಂದು ಇಲಾಖೆ ಹೇಳಿದೆ. ನೀರು ನುಗ್ಗುವ ಸಾಧ್ಯತೆ ಇರುವ ಪ್ರದೇಶದ ಜನರು ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ. ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಚಾಲನೆಯಲ್ಲಿ ಜಾಗರೂಕತೆ ಇರಲಿ. ಮರಗಳ ಕೆಳಗೆ ವಾಹನಗಳನ್ನು ನಿಲ್ಲಿಸಬೇಡಿ ಎಂದು ಹೇಳಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಬುಧವಾರ ಸುರಿದ ಧಾರಾಕಾರ ಮಳೆ ಮತ್ತು ಅನಿರೀಕ್ಷಿತ ಆಲಿಕಲ್ಲು ಮಳೆಯು ಕಳೆದ ಹಲವು ದಿನಗಳ ಸುಡುವ ಬಿಸಿಲಿನಿಂದ ಜನರಿಗೆ ತಾತ್ಕಾಲಿಕ ನೆಮ್ಮದಿ ನೀಡಿದೆ. ಆದರೆ, ಕೇವಲ ಎರಡು ಗಂಟೆಗಳ ಈ ಅಬ್ಬರದ ಮಳೆಯು ನಗರದ ದುಸ್ಥಿತಿಯನ್ನು ಬಯಲು ಮಾಡಿದೆ. 37 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿದ್ದ ತಾಪಮಾನವು ಮಳೆಯಿಂದಾಗಿ ಕುಸಿದಿದ್ದರೂ, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಮಗು ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ.ಮಲ್ಲೇಶ್ವರಂ, ಶಾಂತಿನಗರ ಮತ್ತು ಶೇಷಾದ್ರಿಪುರಂ ಸೇರಿದಂತೆ ನಗರದ ಸುಮಾರು 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮರಗಳು ಧರೆಗುರುಳಿವೆ. ಕರ್ನಾಟಕದ ಶಕ್ತಿ ಕೇಂದ್ರವಾದ ವಿಧಾನ ಸೌಧದ ಕಾರಿಡಾರ್‌ಗಳು ಮತ್ತು ಕಚೇರಿಗಳಿಗೆ ಮಳೆ ನೀರು ನುಗ್ಗಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕಚೇರಿಯೂ ಜಲಾವೃತವಾಗಿತ್ತು.
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಅಬ್ಬರಿಸಲಿದ್ದಾನೆ ವರುಣ
ರಿಚ್‌ಮಂಡ್ ಟೌನ್ ಮತ್ತು ಶಾಂತಿನಗರದಂತಹ ತಗ್ಗು ಪ್ರದೇಶಗಳು ಮಳೆ ನೀರಿನಿಂದ ದ್ವೀಪದಂತಾಗಿವೆ. ರಸ್ತೆಗಳಲ್ಲಿ ಸೊಂಟದವರೆಗೆ ನೀರು ನಿಂತಿದ್ದರಿಂದ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ಮೆಟ್ರೋ ಸೇವೆಗಳಲ್ಲೂ ವ್ಯತ್ಯಯ ಉಂಟಾಗಿದ್ದು, ಕಚೇರಿಯಿಂದ ಮನೆಗೆ ತೆರಳುವವರು ತೀವ್ರ ಸಂಕಷ್ಟ ಅನುಭವಿಸಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:06 am, Thu, 30 April 26