ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೊ ನಂಬಿ 6.88 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ! ನಕಲಿ ಹೂಡಿಕೆ ಜಾಹೀರಾತುಗಳ ಬಗ್ಗೆ ಎಚ್ಚರ

Bangalore News: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಡೀಪ್‌ಫೇಕ್ ವಿಡಿಯೊವನ್ನು ನಂಬಿದ ಬೆಂಗಳೂರಿನ 66 ವರ್ಷದ ನಿವೃತ್ತ ವ್ಯಕ್ತಿಯೊಬ್ಬರು ನಕಲಿ ಸರ್ಕಾರಿ ಹೂಡಿಕೆ ಯೋಜನೆಯಲ್ಲಿ 6.88 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸೈಬರ್ ವಂಚಕರು ಸರ್ಕಾರಿ ಯೋಜನೆ ಹೆಸರಿನಲ್ಲಿ ಜನರನ್ನು ಮೋಸಗೊಳಿಸುವ ಹೊಸ ಹಾದಿಕಂಡುಕೊಂಡಿದ್ದು, ಜನರು ಎಚ್ಚರ ವಹಿಸಬೇಕಿದೆ.

ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೊ ನಂಬಿ 6.88 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ! ನಕಲಿ ಹೂಡಿಕೆ ಜಾಹೀರಾತುಗಳ ಬಗ್ಗೆ ಎಚ್ಚರ
ಸಾಂದರ್ಭಿಕ ಚಿತ್ರ
Image Credit source: TV9 Network

Updated on: Jul 20, 2026 | 7:32 AM

ಮುಖ್ಯಾಂಶಗಳು

  • ಡೀಪ್‌ಫೇಕ್ ವಿಡಿಯೊ ನಂಬಿ ₹6.88 ಲಕ್ಷ ಕಳೆದುಕೊಂಡ ವ್ಯಕ್ತಿ
  • ಕೇಂದ್ರ ಸರ್ಕಾರದ ನಕಲಿ ಹೂಡಿಕೆ ಯೋಜನೆ ಹೆಸರಿನಲ್ಲಿ ವಂಚನೆ
  • ಫೇಸ್‌ಬುಕ್ ಲಿಂಕ್‌, ವಾಟ್ಸ್‌ಆ್ಯಪ್ ಕರೆ ಮೂಲಕ ವಂಚಿಸುವ ಜಾಲ

ಬೆಂಗಳೂರು, ಜುಲೈ 20: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಡೀಪ್‌ಫೇಕ್ (Deepfake) ವಿಡಿಯೊ ಬಳಸಿಕೊಂಡು ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ 6.88 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ನಾರಾಯಣಪುರ ನಿವಾಸಿಯಾದ 66 ವರ್ಷದ ವ್ಯಕ್ತಿಗೆ, ಕೇಂದ್ರ ಸರ್ಕಾರ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜಂಟಿಯಾಗಿ ಹೂಡಿಕೆ ಯೋಜನೆ ಆರಂಭಿಸಿರುವಂತೆ ತೋರಿಸುವ ವಿಡಿಯೊ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿತ್ತು. ಅದರಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಉತ್ತಮ ಲಾಭ ಸಿಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಮಾತನಾಡಿರುವಂತೆ ಡೀಪ್ ಪೇಕ್ ತಂತ್ರಜ್ಞಾನದ ಮೂಲಕ ತೋರಿಸಲಾಗಿತ್ತು.

ವಿಡಿಯೊದಲ್ಲಿದ್ದ ಲಿಂಕ್‌ ಅನ್ನು ಕ್ಲಿಕ್ ಮಾಡಿದ ವ್ಯಕ್ತಿ ತನ್ನ ಕೆವೈಸಿ ಸೇರಿದಂತೆ ಅಗತ್ಯ ಮಾಹಿತಿಯನ್ನು ದಾಖಲಿಸಿದ್ದರು. ಬಳಿಕ ಯುಕೆ (+44) ಕೋಡ್‌ನ ವಾಟ್ಸ್‌ಆ್ಯಪ್ ಸಂಖ್ಯೆಯಿಂದ ಕರೆ ಬಂದಿದ್ದು, 22 ಸಾವಿರ ರೂ. ಹೂಡಿಕೆಯ ಬದಲು 6 ಲಕ್ಷ ರೂ.ಗಿಂತ ಹೆಚ್ಚು ಹೂಡಿಕೆ ಮಾಡಿದರೆ ಕೇವಲ 10 ದಿನಗಳಲ್ಲಿ 15 ಲಕ್ಷ ರೂ. ವಾಪಸ್ ಸಿಗುತ್ತದೆ ಎಂದು ನಂಬಿಸಲಾಗಿದೆ.

ಸರ್ಕಾರಿ ಯೋಜನೆ ಎಂದು ನಂಬಿ ಮೋಸಹೋದ ವ್ಯಕ್ತಿ

ಸರ್ಕಾರಿ ಯೋಜನೆ ಎಂಬ ನಂಬಿಕೆಯಿಂದ ನಾರಾಯಣಪುರ ನಿವಾಸಿಯು ಮಾರ್ಚ್‌ನಿಂದ ಜೂನ್‌ವರೆಗೆ ಒಟ್ಟು 6.88 ಲಕ್ಷ ರೂ. ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಆದರೆ ಯಾವುದೇ ಹಣ ಮರಳಿ ಬರದ ಹಿನ್ನೆಲೆಯಲ್ಲಿ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಡೀಪ್‌ಫೇಕ್ ವಿಡಿಯೊಗಳಿಂದ ಎಚ್ಚರ!

ರಾಜಕಾರಣಿಗಳು, ನಟರು ಅಥವಾ ಗಣ್ಯರ ಮುಖ ಮತ್ತು ಧ್ವನಿಯನ್ನು ಕೃತಕ ಬುದ್ಧಿಮತ್ತೆ ಬಳಸಿ ನೈಜ ಎಂಬಂತೆ ಬಿಂಬಿಸಿ ಜನರನ್ನು ವಂಚಿಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ ಎಂದು ಸೈಬರ್ ತಜ್ಞರು ಹೇಳಿದ್ದಾರೆ. ಸರ್ಕಾರ ಅಥವಾ ಬ್ಯಾಂಕ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಹೂಡಿಕೆ ಯೋಜನೆಗಳನ್ನು ಪರಿಶೀಲಿಸದೆ ಹಣ ಹೂಡಿಕೆ ಮಾಡಬಾರದು. ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದು ಹಾಗೂ ಅಧಿಕೃತ ವೆಬ್‌ಸೈಟ್‌ಗಳಲ್ಲಿಯೇ ಮಾಹಿತಿ ಪರಿಶೀಲಿಸುವುದು ಸುರಕ್ಷಿತ ಎಂದು ಅವರು ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us