ಪೊಲೀಸರ ಸೋಗಲ್ಲಿ ಉದ್ಯಮಿ ಮನೆಗೆ ನುಗ್ಗಿ 20 ಲಕ್ಷ ನಗದು, ಅರ್ಧ ಕೆಜಿ ಚಿನ್ನಾಭರಣ ದರೋಡೆ

ಬೆಂಗಳೂರಿನ ಬಿಇಎಲ್ ಲೇಔಟ್‌ನಲ್ಲಿ ಉದ್ಯಮಿ ಮನೆಗೆ ಪೊಲೀಸರ ಸೋಗಿನಲ್ಲಿ ನುಗ್ಗಿದ ನಾಲ್ವರ ಗ್ಯಾಂಗ್ ಭಾರಿ ದರೋಡೆ ನಡೆಸಿದೆ. ನಗದು ಹಾಗೂ ಅರ್ಧ ಚಿನ್ನಾಭರಣಗಳನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ. ಬಂದೂಕು, ಚಾಕುವಿನಿಂದ ಬೆದರಿಸಿ ಮನೆಯವರ ಕೈಕಾಲು ಕಟ್ಟಿ ಕೃತ್ಯ ಎಸಗಲಾಗಿದೆ. ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಪೊಲೀಸರ ಸೋಗಲ್ಲಿ ಉದ್ಯಮಿ ಮನೆಗೆ ನುಗ್ಗಿ 20 ಲಕ್ಷ ನಗದು, ಅರ್ಧ ಕೆಜಿ ಚಿನ್ನಾಭರಣ ದರೋಡೆ
ಸಾಂದರ್ಭಿಕ ಚಿತ್ರ
Image Credit source: Google

Updated on: Feb 17, 2026 | 2:25 PM

ಬೆಂಗಳೂರು, ಫೆಬ್ರವರಿ 17: ಪೊಲೀಸರ ಹೆಸರಲ್ಲಿ ಮನೆಗೆ ಎಂಟ್ರಿಕೊಟ್ಟ ಗ್ಯಾಂಗ್​​ ಒಂದು ರಿಯಲ್ ಎಸ್ಟೇಟ್ ಉದ್ಯಮಿ ಮನೆಯಿಂದ ಬರೋಬ್ಬರಿ 20 ಲಕ್ಷ ರೂಪಾಯಿ ನಗದು ಮತ್ತು ಸುಮಾರು ಅರ್ಧ ಕೆಜಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಿಇಎಲ್ ಲೇಔಟ್‌ನಲ್ಲಿ ನಡೆದಿದೆ. ನಾಲ್ಕು ಮಂದಿಯ ತಂಡ ಕೃತ್ಯ ಎಸಗಿದೆ ಎನ್ನಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಹೊಂಬಾಳೆಗೌಡ ಎಂಬವರ ಮನೆಯಲ್ಲಿ ನಿನ್ನೆ ಘಟನೆ ನಡೆದಿದೆ.

ಹೊಂಬಳೆಗೌಡ ಅವರು ಪತ್ನಿ ಮಂಗಳಮ್ಮ ಹಾಗೂ ಮೊಮ್ಮಕ್ಕಳೊಂದಿಗೆ ಮನೆಯಲ್ಲಿ ಇದ್ದ ವೇಳೆ ಪೊಲೀಸರಂತೆ ವೇಷಧರಿಸಿದ್ದ ಆರೋಪಿಗಳು ಮನೆಗೆ ಬಂದಿದ್ದಾರೆ. ತಾವು ಯಲಹಂಕ ಠಾಣೆಯಿಂದ ಬಂದಿದ್ದೇವೆ ಎಂದು ತಿಳಿಸಿದ್ದು, ಬ್ಯಾಗ್​​ ಮತ್ತು ಡೈರಿಯನ್ನೂ ಹಿಡಿದು ಬಂದಿದ್ದರು. ಹೀಗಾಗಿ ಆರಂಭದಲ್ಲಿ ಮನೆಯವರೂ ಆರೋಪಿಗಳ ಮಾತು ನಂಬಿದ್ದರು. ಆದರೆ ಬಳಿಕ ಆರೋಪಿಗಳು ವೃದ್ಧ ದಂಪತಿಯನ್ನು ಬಂದೂಕು ಮತ್ತು ಚಾಕುವಿನಿಂದ ಬೆದರಿಸಿ, ಅವರ ಕೈಕಾಲುಗಳನ್ನು ಕಪ್ಪು ಟೇಪ್‌ನಿಂದ ಕಟ್ಟಿದ್ದಾರೆ. ಮನೆಯೆಲ್ಲ ಜಾಲಾಡಿರುವ ಖದೀಮರು ನಗದು, ಚಿನ್ನಾಭರಣ ಹಾಗೂ ಮೊಬೈಲ್​​ನ ದೋಚಿದ್ದಾರೆ. ಇಬ್ಬರು ಮನೆಯೊಳಗೆ ನುಗ್ಗಿದ್ದರೆ ಮತ್ತಿಬ್ಬರು ಹೊರಗಡೆಯೇ ನಿಂತು ಕಾವಲು ಕಾಯ್ದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ; 1.5 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ

ಘಟನೆಯ ಬಳಿಕ ಹೊಂಬಳೆಗೌಡ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ. ಸದ್ಯ ಆರೋಪಿಗಳನ್ನು ಪತ್ತೆಹಚ್ಚಲು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳು ಕೃತ್ಯ ಎಸಗಿದ ಬಳಿಕ ಮನೆಯ ಸಿಸಿಟಿವಿ ಡಿವಿಆರ್‌ ಕಳಚಿಕೊಂಡು ತೆರಳಿದ್ದಾರೆ ಎನ್ನಲಾಗಿದ್ದು, ಪೊಲೀಸರ ಸೋಗಲ್ಲೇ ಆರೋಪಿಗಳು ದರೋಡೆ ನಡೆಸಿರುವ ಕಾರಣ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us