ಬೆಂಗಳೂರು ಸುತ್ತ ಸ್ಯಾಟಲೈಟ್ ಟೌನ್ಶಿಪ್ಗೆ ಸಂಪುಟ ಸಮ್ಮತಿ: ಏನಿದರ ಉದ್ದೇಶ, ಪ್ರಯೋಜನ? ಇಲ್ಲಿದೆ ಮಾಹಿತಿ
ಕರ್ನಾಟಕ ಸಚಿವ ಸಂಪುಟವು ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಹೊರವಲಯಗಳ ಭೂಮಿಯ ಮೌಲ್ಯವನ್ನು ಹೆಚ್ಚಿಸಲು "ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ"ಗೆ ಅನುಮೋದನೆ ನೀಡಿದೆ. ಬಿಡದಿ, ರಾಮನಗರ, ಬೈರಮಂಗಲ ಮುಂತಾದ ಪ್ರದೇಶಗಳಲ್ಲಿ ಸ್ಯಾಟಲೈಟ್ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ. ಹಾಗಾದರೆ, ಸ್ಯಾಟಲೈಟ್ ಟೌನ್ಶಿಪ್ ಎಂದರೇನು? ಉದ್ದೇಶಗಳೇನು? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಬೆಂಗಳೂರು, ಜನವರಿ 31: ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ನಗರದ ಹೊರವಲಯಗಳ ಪ್ರದೇಶಗಳಲ್ಲಿನ ಭೂಮಿಯ ಮೌಲ್ಯವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಸ್ಯಾಟಲೈಟ್ ಟೌನ್‌ಶಿಪ್‌ಗಳನ್ನು ಅಭಿವೃದ್ಧಿ ಪಡಿಸುವ “ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ” ಅನುಷ್ಠಾನಕ್ಕೆ ಕರ್ನಾಟಕದ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಬಿಡದಿ ಹೋಬಳಿ, ರಾಮನಗರ ತಾಲೂಕು, ರಾಮನಗರ ಜಿಲ್ಲೆ, ಬೈರಮಂಗಲ, ಬೆನ್ನಿಗೆರೆ, ಹೊಸೂರು, ಕೆಜಿ ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಲುಸಂದ್ರ, ಕೆಂಪಯ್ಯನ ಪಾಳ್ಯ, ಕಂಚುಗಾರನಹಳ್ಳಿ ಕಾವಲು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸ್ಯಾಟಲೈಟ್ ಟೌನ್ಶಿಪ್ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ಕಾನೂನು ಸಚಿವ ಹೆಚ್ಕೆ ಪಾಟೀಲ್ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಜನಸಂಖ್ಯಾ ಸಾಂಧ್ರತೆಯನ್ನು ಕಡಿಮೆ ಮಾಡಲು ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಲ್ಲಾಪುರ, ಮಾಗಡಿ ಮತ್ತು ಬಿಡದಿಯಂತಹ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳನ್ನು ರಸ್ತೆ ಮತ್ತು ರೈಲ್ವೆ ಸೌಲಭ್ಯಗಳೊಂದಿಗೆ ಸ್ಯಾಟಲೈಟ್ ಟೌನ್ಶಿಪ್ಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಹಿರಿಯ ಕಾಂಗ್ರೆಸ್ಸಿಗ ವಿ ಎಸ್ ಉಗ್ರಪ್ಪ ನೇತೃತ್ವದ ಸಮಿತಿಯ ಅಂತಿಮ ವರದಿಯ ಬಗ್ಗೆಯೂ ಕ್ಯಾಬಿನೆಟ್ನಲ್ಲಿ ಚರ್ಚೆಗಳು ನಡೆದಿವೆ. ಸಮಿತಿಯ 135 ಶಿಫಾರಸುಗಳನ್ನು ಪರಿಗಣಿಸಲು, ವರದಿಯನ್ನು ಚರ್ಚಿಸಲು ಮತ್ತು ಅದರ ಅನುಷ್ಠಾನದ ಕುರಿತು ಸಲಹೆಗಳನ್ನು ನೀಡಲು ಮುಖ್ಯ ಕಾರ್ಯದರ್ಶಿಯ ಅಧೀನದಲ್ಲಿರುವ ತಂಡಕ್ಕೆ ಮೂರು ತಿಂಗಳುಗಳ ಕಾಲಾವಕಾಶ ನೀಡಲಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಅಟ್ಟಹಾಸಕ್ಕೆ ಬ್ರೇಕ್, ಸುಗ್ರೀವಾಜ್ಞೆ ತರಲು ಸಿದ್ದರಾಮಯ್ಯ ಸಂಪುಟ ಒಪ್ಪಿಗೆ
ಮೈಕ್ರೊ ಫೈನಾನ್ಸ್ ಅಟ್ಟಹಾಸಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸುವ ಪ್ರಸ್ತಾವಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸ್ಯಾಟಲೈಟ್ ಟೌನ್ಶಿಪ್ ಎಂದರೇನು?
ಸ್ಯಾಟಲೈಟ್ ಟೌನ್ಶಿಪ್ ಎಂಬುದು ವಸತಿ ಮತ್ತು ಉದ್ಯೋಗವನ್ನು ಒದಗಿಸುವ ಉದ್ದೇಶದೊಂದಿಗೆ ದೊಡ್ಡ ದೊಡ್ಡ ನಗರಗಳ ಬಳಿ ನಿರ್ಮಿಸಲಾಗುವ ಪಟ್ಟಣಗಳಾಗಿವೆ. ಸ್ಯಾಟಲೈಟ್ ಟೌನ್‌ಶಿಪ್‌ಗಳನ್ನು ಸ್ಯಾಟಲೈಟ್ ಸಿಟಿಗಳು ಎಂದೂ ಕರೆಯಲಾಗುತ್ತದೆ.
ಸ್ಯಾಟಲೈಟ್ ಟೌನ್ಶಿಪ್ ಉದ್ದೇಶಗಳೇನು?
ಮಹಾನಗರಗಳಲ್ಲಿ ಹೆಚ್ಚುವರಿ ಜನಸಂಖ್ಯೆಯ ಸಮಸ್ಯೆಗೆ ಕಡಿವಾಣ ಹಾಕುವುದರ ಜತೆಗೆ ಜನ ಸಾಂಧ್ರತೆಯನ್ನು ಕಡಿಮೆ ಮಾಡುವುದು ಸ್ಯಾಟಲೈಟ್ ಟೌನ್ಶಿಪ್ನ ಮುಖ್ಯ ಉದ್ದೇಶವಾಗಿದೆ. ಸ್ಯಾಟಲೈಟ್ ಟೌನ್ಶಿಪ್ಗಳು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತವೆ. ಒಂದು ಪ್ರದೇಶದಲ್ಲಿ ಸಂಪನ್ಮೂಲವನ್ನು ಸಮನಾಗಿ ವಿತರಣೆ ಮಾಡಲು ಕೂಡ ಸ್ಯಾಟಲೈಟ್ ಟೌನ್ಶಿಪ್ಗಳಿಂದ ಸಾಧ್ಯವಾಗುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ