
ಬೆಂಗಳೂರು, ನವೆಂಬರ್ 7: ರಾಜಾಜಿನಗರದಲ್ಲಿ ನಡೆದ ಏಳು ಮಂದಿಯ ಸರಣಿ ಹತ್ಯೆ ಪ್ರಕರಣದಲ್ಲಿ ಒಂದು ಕನ್ನಡ ಸಂದೇಶವೇ ಪೊಲೀಸರಿಗೆ ಮಹತ್ವದ ಸುಳಿವಾಗಿ ಪರಿಣಮಿಸಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ. ಹತ್ಯೆಯಾದ ಶಂಕರ್ ಅವರ ಮೊಬೈಲ್ನಿಂದ ಕನ್ನಡದಲ್ಲಿ ಕಳುಹಿಸಲಾದ ರಿಪ್ಲೈ ಸಂದೇಶವನ್ನು ಗಮನಿಸಿದ ಸ್ನೇಹಿತರು ಅನುಮಾನಗೊಂಡಿದ್ದೇ ಪ್ರಕರಣದ ಭೇದಿಸಲು ನೆರವಾಗಿದೆ. ಇದೇ ಅನುಮಾನ ಮತ್ತಷ್ಟು ಅನಾಹುತ ಸಂಭವಿಸುವ ಮುನ್ನ ಪೊಲೀಸರ ಗಮನಕ್ಕೆ ಪ್ರಕರಣ ತಲುಪುವಂತೆ ಮಾಡಿತು.
ಶಂಕರ್ ಅವರ ಮೊಬೈಲ್ ಬಳಸಿ ಆರೋಪಿ ಇಂದುಶೇಖರ್ ಸ್ನೇಹಿತರಿಗೆ ಕನ್ನಡದಲ್ಲಿ ರಿಪ್ಲೈ ಸಂದೇಶ ಕಳುಹಿಸಿದ್ದ. ಆದರೆ, ಶಂಕರ್ ಈ ಹಿಂದೆ ತಮ್ಮ ಸ್ನೇಹಿತರಿಗೆ ಸಾಮಾನ್ಯವಾಗಿ ಕನ್ನಡದಲ್ಲಿ ಸಂದೇಶಗಳಿಗೆ ಉತ್ತರಿಸುತ್ತಿರಲಿಲ್ಲ. ಇದು ಸ್ನೇಹಿತರ ಗಮನಕ್ಕೆ ಬಂದಿದೆ.
ಶಂಕರ್ ಮೊಬೈಲ್ನಿಂದ ಬಂದ ಕನ್ನಡ ಸಂದೇಶಗಳು ಅನುಮಾನ ಹುಟ್ಟಿಸಿದ್ದರಿಂದ, ಸ್ನೇಹಿತರು ನಳಿನಿ ಅವರ ತಾಯಿಗೆ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದ್ದರು. ಇದೇ ವೇಳೆ, ಕುಟುಂಬದವರು ಪ್ರವಾಸಕ್ಕೆ ತೆರಳಿದ್ದಾರೆ ಎಂಬ ರೀತಿಯಲ್ಲಿ ಪರಿಸ್ಥಿತಿಯನ್ನು ಬಿಂಬಿಸಲು ಆರೋಪಿ ಹಲವು ಪ್ರಯತ್ನಗಳನ್ನು ನಡೆಸಿದ್ದ ಎಂಬ ಆರೋಪವೂ ಕೇಳಿಬಂದಿದೆ.
ನಳಿನಿ ತಾಯಿಗೆ ಮೊಮ್ಮಗನ ಮೂಲಕ ವಾಯ್ಸ್ ನೋಟ್ ಕಳುಹಿಸಲಾಗಿತ್ತು. ‘‘ಅಜ್ಜಿ, ನಾವೆಲ್ಲ ಟೂರ್ಗೆ ಬಂದಿದ್ದೇವೆ. ಮೊಬೈಲ್ ಅಧಿಕಾರಿಗಳ ಬಳಿ ಇರುತ್ತದೆ. ನಾವಿಲ್ಲಿ ಆರಾಮಾಗಿದ್ದೇವೆ. ಫ್ರೀ ಆದಾಗ ನಾವೇ ಕರೆ ಮಾಡುತ್ತೇವೆ’’ ಎಂಬ ಮಾತುಗಳನ್ನು ಬಾಲಕನಿಂದ ಹೇಳಿಸಿ ವಾಯ್ಸ್ ನೋಟ್ ಕಳುಹಿಸಿದ್ದ.
ಆದರೆ ಮೊಬೈಲ್ ಸಂದೇಶದ ಭಾಷಾ ಶೈಲಿಯಲ್ಲಿನ ಬದಲಾವಣೆ ಸ್ನೇಹಿತರ ಅನುಮಾನಕ್ಕೆ ಕಾರಣವಾಯಿತು. ಈ ಸಣ್ಣ ಸುಳಿವೇ ಪೊಲೀಸರಿಗೆ ಪ್ರಕರಣದ ಬಗ್ಗೆ ಮಾಹಿತಿ ಸಿಗಲು ಮತ್ತು ತನಿಖೆ ಆರಂಭಿಸಲು ನೆರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ತನ್ನ 17 ವರ್ಷದ ಮಗಳ ಮನಸ್ಸಿನಲ್ಲಿ ಪತ್ನಿಯ ಕುಟುಂಬದವರ ಬಗ್ಗೆ ದ್ವೇಷ ಮೂಡಿಸುವ ಪ್ರಯತ್ನ ನಡೆಸಿದ್ದ ಎನ್ನಲಾಗಿದೆ. ಪತ್ನಿಯ ಕುಟುಂಬದವರನ್ನು ಶತ್ರುಗಳಂತೆ ಬಿಂಬಿಸಿ, ತನ್ನ ಯೋಜನೆಗೆ ಮಗಳ ಸಹಾಯ ಪಡೆಯಲು ಆರೋಪಿ ಪ್ರಯತ್ನಿಸಿದ್ದ ಎಂಬ ಅನುಮಾನವೂ ತನಿಖೆಯ ಭಾಗವಾಗಿದೆ. ಕಳೆದ ಸುಮಾರು 15 ದಿನಗಳಿಂದ ಹತ್ಯೆಗೆ ಯೋಜನೆ ರೂಪಿಸಿದ್ದ ಆರೋಪಿ, ಒಬ್ಬೊಬ್ಬರನ್ನು ಮನೆಗೆ ಕರೆಸಿ ಹತ್ಯೆ ನಡೆಸಿ, ಮೃತದೇಹಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಲು ಯೋಜಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜಾಜಿನಗರದ ಭಾಷ್ಯಂ ಸರ್ಕಲ್ ಸಮೀಪದ ಮನೆಯ ಮೂರನೇ ಮಹಡಿಯಿಂದ ಮೃತದೇಹಗಳನ್ನು ಕಾರಿಗೆ ಸಾಗಿಸಿದ್ದ ಆರೋಪವೂ ಕೇಳಿಬಂದಿದೆ. ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ವಿಲೇವಾರಿ ಮಾಡಿದರೆ ಪೊಲೀಸರಿಂದ ತಪ್ಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಆರೋಪಿಯದ್ದಾಗಿತ್ತು ಎಂದು ತಿಳಿದುಬಂದಿದೆ.
ಹತ್ಯೆಯಾದ ಶಂಕರ್ ಮತ್ತು ನಳಿನಿ ಅವರ ಪುತ್ರ ಬದುಕುಳಿದಿದ್ದಾನೆ. ಆತನನ್ನು ಕಾರಿನಲ್ಲಿ ಕಸದ ಮೂಟೆಯಂತೆ ಬಿಂಬಿಸಿ ಸಾಗಿಸಲು ಯತ್ನಿಸಲಾಗಿತ್ತು ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ. ಶಂಕರ್ ಮೊಬೈಲ್ನಿಂದ ಬಂದ ಅಸಹಜ ಕನ್ನಡ ಸಂದೇಶದ ಬಗ್ಗೆ ಸ್ನೇಹಿತರು ಅನುಮಾನ ವ್ಯಕ್ತಪಡಿಸಿ, ಕುಟುಂಬದವರಿಗೆ ಪೊಲೀಸರನ್ನು ಸಂಪರ್ಕಿಸುವಂತೆ ತಿಳಿಸಿದ್ದೇ ತನಿಖೆಗೆ ಮಹತ್ವದ ತಿರುವು ನೀಡಿದೆ. ಪೊಲೀಸರ ಸಮಯೋಚಿತ ಕ್ರಮದಿಂದ ಬಾಲಕನ ಜೀವ ಉಳಿಯಲು ಸಾಧ್ಯವಾಯಿತು ಎಂಬುದು ಪೊಲೀಸ್ ಮೂಲಗಳ ಮಾಹಿತಿ.
ರಾಜಾಜಿನಗರದಲ್ಲಿ ನಡೆದ ಈ ಭೀಕರ ಪ್ರಕರಣದಲ್ಲಿ ಆರೋಪಿ ಇಂದುಶೇಖರ್ ತನ್ನ ಪತ್ನಿ ಸುನೀತಾ ಹಾಗೂ ಆಕೆಯ ಕುಟುಂಬದ ಸದಸ್ಯರನ್ನು ಗುರಿಯಾಗಿಸಿಕೊಂಡು ಏಳು ಮಂದಿಯನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಕೌಟುಂಬಿಕ ಕಲಹ ಹಾಗೂ ಪತ್ನಿಯ ಕುಟುಂಬದ ಮೇಲಿನ ದ್ವೇಷವೇ ಕೃತ್ಯದ ಹಿನ್ನೆಲೆಯಾಗಿರಬಹುದು ಎಂದು ತನಿಖೆ ನಡೆಯುತ್ತಿದೆ. ಸದ್ಯ ಆರೋಪಿಯ ಹೇಳಿಕೆಯ ಆಧಾರದ ಮೇಲೆ ವಿವಿಧ ಸ್ಥಳಗಳಲ್ಲಿ ಮೃತದೇಹಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಹತ್ಯೆಯಾದ ಬಾಲಕ ಪುನೀತ್ನ ಮೃತದೇಹ ಈಗಾಗಲೇ ನಂದಿಬೆಟ್ಟದಲ್ಲಿ ಪತ್ತೆಯಾಗಿದ್ದು, ಉಳಿದ ಮೃತದೇಹಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಬೆಂಗಳೂರು: 7 ಮಂದಿಯ ಸರಣಿ ಕೊಲೆ ಹಿಂದಿನ ಅಸಲಿ ಕಾರಣ ಇನ್ನೂ ನಿಗೂಢ!
ಏತನ್ಮಧ್ಯೆ, ಸದ್ಯ ರಾಜಾಜಿನಗರ ಪೊಲೀಸರು ತಮಿಳುನಾಡಿನ ಸೇಲಂಗೆ ತೆರಳಿದ್ದು, ಆರೋಪಿ ನೀಡಿರುವ ಮಾಹಿತಿಯ ಆಧಾರದ ಮೇಲೆ ಪತ್ನಿ ಸುನೀತಾ ಹಾಗೂ ಅತ್ತೆ ರೂಪಾವತಿ ಅವರ ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸಲಿದ್ದಾರೆ. ಸೇಲಂನ ಅರಣ್ಯ ಪ್ರದೇಶದಲ್ಲಿ ಮೃತದೇಹಗಳನ್ನು ಎಸೆದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ