ಬೆಂಗಳೂರು ಕಾಲ್ತುಳಿತ: ಸರ್ಕಾರದ ವಿರುದ್ಧ ಸಿಡಿದೆದ್ದ ಮಠಾಧೀಶರು, ದೂರು ನೀಡಲು ಚಿಂತನೆ

ಆರ್‌ಸಿಬಿ ಕಾಲ್ತುಳಿತ ದುರಂತದಲ್ಲಿ 11 ಅಭಿಮಾನಿಗಳು ಮೃತಪಟ್ಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹೀಗಿರುವಾಗಲೇ ಮಠಾಧೀಶರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧ ದೂರು ಸಲ್ಲಿಸಲು ಮುಂದಾಗಿದ್ದಾರೆ. ಹೀಗಾಗಿ ಈಗಾಗಲೇ ಸ್ವಾಮೀಜಿಗಳ ತಂಡ ಬೆಂಗಳೂರಿಗೆ ಆಗಮಿಸಿದೆ.

ಬೆಂಗಳೂರು ಕಾಲ್ತುಳಿತ: ಸರ್ಕಾರದ ವಿರುದ್ಧ ಸಿಡಿದೆದ್ದ ಮಠಾಧೀಶರು, ದೂರು ನೀಡಲು ಚಿಂತನೆ
ರಾಜ್ಯ ಸರ್ಕಾರದ ವಿರುದ್ಧ ಮಠಾಧೀಶರ ಆಕ್ರೋಶ
Updated By: ಗಂಗಾಧರ​ ಬ. ಸಾಬೋಜಿ

Updated on: Jun 08, 2025 | 9:40 AM

ಬೆಂಗಳೂರು, ಜೂನ್​ 08: ಕಾಲ್ತುಳಿತದಿಂದ ಆರ್​ಸಿಬಿಯ (RCB) 11 ಅಭಿಮಾನಿಗಳ ಸಾವು ಪ್ರಕರಣ ಸದ್ಯ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ. ವಿಪಕ್ಷಗಳು ಕಾಂಗ್ರೆಸ್​ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಈ ಮಧ್ಯೆ ಮಠಾಧೀಶರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ದೂರು ಸಲ್ಲಿಸಲು ಸ್ವಾಮೀಜಿಗಳ ತಂಡ (Swamiji team) ಮುಂದಾಗಿದೆ. ಈಗಾಗಲೇ ಬೆಂಗಳೂರು ತಲುಪಿರುವ ಸ್ವಾಮೀಜಿಗಳ ತಂಡ ಇಂದು ಕಬ್ಬನ್​ಪಾರ್ಕ್ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಲಿದೆ. ಬಳಿಕ ಆರ್​ಸಿಬಿ ವಿರುದ್ಧ ಇಡಿಗೂ ದೂರು ದಾಖಲಿಸಲಿದ್ದಾರೆ.

ಕಲಬುರಗಿಯ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ, ಕುಂಬಾರ ಮಹಾಸಂಸ್ಥಾನ ಪೀಠ ಬಸವಮೂರ್ತಿ ಕುಂಬಾರ ಗುಂಡಯ್ಯಶ್ರೀ ಮತ್ತು ಛಲವಾದಿ ಜಗದ್ಗುರು ಪೀಠದ ಬಸವನಾಗಿದೇವಶ್ರೀ ಸೇರಿ ಹಲವರಿಂದ ದೂರು ನೀಡಲಾಗುತ್ತಿದೆ.

ಸಿಎಂ, ಡಿಸಿಎಂ ಮತ್ತು ಗೃಹ ಸಚಿವರ ವಿರುದ್ಧವೂ ದೂರು ದಾಖಲಿಸಲು ಚಿಂತನೆ

ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದು, ಆರ್‌ಸಿಬಿ ತಂಡಕ್ಕೆ ಅಂತಾರಾಷ್ಟ್ರೀಯ ಮಟ್ಟದ ಹಣದ ವ್ಯವಹಾರವಿದೆ. ಹೊರ ದೇಶದವರು ಈ ತಂಡದ ಮೇಲೆ ಹಣ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಇ.ಡಿ ಅಧಿಕಾರಿಗಳು ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದು, ನ್ಯಾಯಾಲಯದಲ್ಲೂ ಖಾಸಗಿ ದೂರು ದಾಖಲಿಸಲು ಶ್ರೀಗಳು ಚಿಂತನೆ ನಡೆಸಿದ್ದಾರೆ.

ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ ಮಾನವ ಹಕ್ಕು ಆಯೋಗ

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ 3 ಸ್ವಯಂಪ್ರೇರಿತ ಮತ್ತು 2 ಪ್ರತ್ಯೇಕ ದೂರು ದಾಖಲಿಸಿಕೊಂಡಿದ್ದ ಮಾನವ ಹಕ್ಕು ಆಯೋಗ ಇದೀಗ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ ಮಾಡಿದೆ. ಮಾನವ ಹಕ್ಕು ಶಿಫಾರಸು ಮಾಡಿರುವ ಅಂಶಗಳು ಈಕೆಳಗಿನಂತಿವೆ.

ಇದನ್ನೂ ಓದಿ: ಕೆಎಸ್​​ಸಿಎಗೆ ಮತ್ತೊಂದು ಸಂಕಷ್ಟ: 10 ಕೋಟಿ ರೂ ಜಾಹೀರಾತು ತೆರಿಗೆ ಬಾಕಿ, ವಸೂಲಿಗೆ ಮುಂದಾದ ಬಿಬಿಎಂಪಿ

  • ದೂರಿನ ಮೇರೆಗೆ 6 ರಂದು ಸ್ಥಳಕ್ಕೆ ಬೇಟಿ ಕೊಟ್ಟು ಪರಿಶೀಲನೆ ಮಾಡಲಾಗಿತ್ತು. ಘಟನೆಯಲ್ಲಿ 11 ಜನ ಮೃತಪಟ್ಟಿದ್ದರು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
  • ಪ್ರಜಾಪ್ರಭುತ್ವ ಮತ್ತು ನಾಗರೀಕ ಸಮಾಜದಲ್ಲಿ ಮಾನವನಿಗೆ ಮೂಲಭೂತ ಸೌಕರ್ಯಗಳನ್ನು ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಕಲ್ಪಿಸುವುದು ಅತ್ಯಂತ ಪ್ರಮುಖ.
  • ಆಯೋಗವು ಘಟನಾ ಸ್ಥಳ ಹಾಗೂ ಘಟನೆಗೆ ಸಂಬಂಧಿಸಿದಂತೆ ಲಭ್ಯವಿರುವು ಎಲ್ಲಾ ವಿವರಗಳನ್ನು ಕ್ರೋಢೀಕರಿಸಿದೆ‌.
  • ಬೌರಿಂಗ್ ಮತ್ತು ವೈದೇಹಿ ಆಸ್ಪತ್ರೆಯಲ್ಲಿರುವ ಎಲ್ಲಾ ಗಾಯಾಳುಗಳನ್ನು ಆಯೋಗವು ಭೇಟಿ ಮಾಡಿ ಅವರನ್ನು ವಿಚಾರಿಸುವುದರೊಂದಿಗೆ ವೈದ್ಯಾಧಿಕಾರಿಗಳಿಗೆ ಎಲ್ಲ ವೈದ್ಯಕೀಯ ನೆರವು ನೀಡಲು ಸೂಚಿಸಿದೆ.
  • ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳು ಮತ್ತು ವೈದ್ಯರು ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುವುದೆಂದು ತಿಳಿಸಿದ್ದಾರೆ.
  • ಮರಣಹೊಂದಿದ 11 ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳನ್ನು ಸರ್ಕಾರ ಈಗಾಗಲೇ ಘೋಷಿಸಿರುವುದನ್ನು ಪರಿಗಣಿಸಿ ಇನ್ನೂ 15 ಲಕ್ಷ ರೂ. ಮೃತರ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ (ಒಟ್ಟು 25 ಲಕ್ಷ ರೂಗಳನ್ನು) ನೀಡುವಂತೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:40 am, Sun, 8 June 25