GBA ಗುರುತಿಸಿದ ಕೇಂದ್ರಗಳಲ್ಲಿ ಮಾತ್ರ ಬೀದಿ ನಾಯಿಗಳಿಗೆ ಆಹಾರ ಹಾಕಬೇಕು: ಉಲ್ಲಂಘಿಸಿದರೆ ದಂಡ

ಬೆಂಗಳೂರಿನಲ್ಲಿ ಬೀದಿ ನಾಯಿ ದಾಳಿ ಹೆಚ್ಚಿದ ಕಾರಣ, GBA ಈಗ ಎಲ್ಲೆಂದರಲ್ಲಿ ಆಹಾರ ನೀಡುವುದಕ್ಕೆ ಬ್ರೇಕ್ ಹಾಕಿದೆ. ಶ್ವಾನಪ್ರಿಯರು ಮತ್ತು ಸಾರ್ವಜನಿಕರ ಸಂಘರ್ಷ ತಪ್ಪಿಸಲು 450 ಅಧಿಕೃತ ಆಹಾರ ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಕೇಂದ್ರಗಳ ಹೊರಗೆ ಆಹಾರ ನೀಡಿದರೆ ದಂಡ ವಿಧಿಸಲಾಗುವುದು. ಆದರೆ, ನಾಯಿಗಳು ಪ್ರಾದೇಶಿಕ ಪ್ರವೃತ್ತಿ ಹೊಂದಿರುವುದರಿಂದ ಈ ನಿರ್ಧಾರ ನಾಯಿಗಳ ನಡುವೆ ಕಾದಾಟಕ್ಕೆ ಕಾರಣವಾಗಬಹುದು ಎಂದು ಪ್ರಾಣಿ ಹಕ್ಕು ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

GBA ಗುರುತಿಸಿದ ಕೇಂದ್ರಗಳಲ್ಲಿ ಮಾತ್ರ ಬೀದಿ ನಾಯಿಗಳಿಗೆ ಆಹಾರ ಹಾಕಬೇಕು: ಉಲ್ಲಂಘಿಸಿದರೆ ದಂಡ
ಸಾಂದರ್ಭಿಕ ಚಿತ್ರ

Updated on: Feb 10, 2026 | 3:28 PM

ಬೆಂಗಳೂರು, ಫೆ.10: ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈಗ ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ನೀಡುವುದಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಶ್ವಾನಪ್ರಿಯರು ಮತ್ತು ಸಾರ್ವಜನಿಕರ ನಡುವಿನ ಸಂಘರ್ಷವನ್ನು ತಪ್ಪಿಸಲು ಹಾಗೂ ಸ್ವಚ್ಛತೆಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ. GBA ಅಡಿಯಲ್ಲಿ ಬರುವ ಐದೂ ನಗರ ಪಾಲಿಕೆಗಳಲ್ಲಿ ಪಶುಪಾಲನಾ ಇಲಾಖೆಯು ಒಟ್ಟು 450 ಅಧಿಕೃತ ಆಹಾರ ಕೇಂದ್ರಗಳನ್ನು ಗುರುತಿಸಿದೆ.

ಶೀಘ್ರದಲ್ಲೇ ಈ ಗುರುತಿಸಲಾದ ಸ್ಥಳಗಳಲ್ಲಿ ಶ್ವಾನಗಳಿಗೆ ಆಹಾರ ನೀಡುವ ಸ್ಥಳ ಎಂಬ ಫಲಕಗಳನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆ. ಅಧಿಕೃತ ಸ್ಥಳಗಳನ್ನು ಬಿಟ್ಟು ರಸ್ತೆಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಅಥವಾ ಸಾರ್ವಜನಿಕರಿಗೆ ತೊಂದರೆಯಾಗುವ ಕಡೆಗಳಲ್ಲಿ ಆಹಾರ ನೀಡಿದರೆ ದಂಡ ವಿಧಿಸಲು GBA ನಿರ್ಧರಿಸಿದೆ ಎಂದು ಹೇಳಿದ್ದಾರೆ. ಆಹಾರ ನೀಡುವವರು ಆ ಜಾಗವನ್ನು ಸ್ವಚ್ಛವಾಗಿಡಬೇಕು ಮತ್ತು ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಆಹಾರ ನೀಡಬೇಕು ಎಂಬ ಸೂಚನೆಯೂ ಇದೆ.

ಇದನ್ನೂ ಓದಿ: ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ: ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ಕುಟುಂಬದ ಪ್ರಾಣ

ಪಾಲಿಕೆವಾರು ಗುರುತಿಸಲಾದ ಆಹಾರ ಕೇಂದ್ರಗಳು:

ಪಾಲಿಕೆ ವ್ಯಾಪ್ತಿ ಆಹಾರ ಕೇಂದ್ರಗಳ ಸಂಖ್ಯೆ
ಬೆಂಗಳೂರು ಪೂರ್ವ (East) 150
ಬೆಂಗಳೂರು ಕೇಂದ್ರ (Central) 90
ಬೆಂಗಳೂರು ಪಶ್ಚಿಮ (West) 85
ಬೆಂಗಳೂರು ಉತ್ತರ (North) 70
ಬೆಂಗಳೂರು ದಕ್ಷಿಣ (South) 68

ಈ ನಿರ್ಧಾರಕ್ಕೆ ಶ್ವಾನಪ್ರಿಯರು ಮತ್ತು ಪ್ರಾಣಿ ಹಕ್ಕು ಹೋರಾಟಗಾರರಿಂದ ಅಸಮಾಧಾನ ವ್ಯಕ್ತವಾಗಿದೆ. ನಾಯಿಗಳು ‘ಟೆರಿಟೋರಿಯಲ್’ ಪ್ರವೃತ್ತಿ ಹೊಂದಿದ್ದು, ಒಂದು ಏರಿಯಾದ ನಾಯಿಗಳು ಮತ್ತೊಂದು ಏರಿಯಾಕ್ಕೆ ಹೋಗಿ ಆಹಾರ ಸೇವಿಸುವುದಿಲ್ಲ. ಹೀಗಾಗಿ, ಎಲ್ಲೋ ಒಂದು ಕಡೆ ಪಾಯಿಂಟ್ ಗುರುತಿಸುವುದು ನಾಯಿಗಳ ನಡುವೆ ಕಾದಾಟಕ್ಕೆ ಮತ್ತು ಹಸಿವಿನಿಂದ ಅವುಗಳ ಆಕ್ರೋಶಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ 

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ