ವಾಹನ ಸವಾರರ ಗಮನಕ್ಕೆ: ಹೆಣ್ಣೂರು -ಬಾಗಲೂರು ರಸ್ತೆ 1 ತಿಂಗಳು ಬಂದ್​​​ ಸಾಧ್ಯತೆ

ಉತ್ತರ ಬೆಂಗಳೂರಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯ ವಾಹನ ಸವಾರರಿಗೆ ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಯಾಕಂದ್ರೆ ಈ ಮುಖ್ಯ ರಸ್ತೆಯನ್ನು 33 ದಿನ ಬಂದ್ ಮಾಡಲು ನೈಋತ್ಯ ರೈಲ್ವೆ, ಬೆಂಗಳೂರು ಟ್ರಾಫಿಕ್ ಪೊಲೀಸರ ಮುಂದೆ ಪ್ರಸ್ತಾಪಿಸಿದೆ. ಹೋಗಾಗಿ ಈ ರಸ್ತೆಯನ್ನೇ ಅವಲಂಬಿಸಿದ ವಾಹನ ಸವಾರರಿಗೆ ಪರ್ಯಾಯ ಮಾರ್ಗ ಯಾವುದು ಎನ್ನುವ ಆತಂಕ ಶುರುವಾಗಿದೆ.

ವಾಹನ ಸವಾರರ ಗಮನಕ್ಕೆ: ಹೆಣ್ಣೂರು -ಬಾಗಲೂರು ರಸ್ತೆ 1 ತಿಂಗಳು ಬಂದ್​​​ ಸಾಧ್ಯತೆ
Hennur Road
Edited By:

Updated on: Nov 20, 2026 | 6:23 PM

ಬೆಂಗಳೂರು, (ನವೆಂಬರ್ 20): ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯ ಮೆಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗೆ ಬಿಡಿಎ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಶುರುವಾಗಲಿದೆ. ಹೀಗಾಗಿ ಬಳ್ಳಾರಿ ರಸ್ತೆಯಲ್ಲಿ ನವೆಂಬರ್ 6 ರಿಂದ ಜಾರಿಗೆ ಬರುವಂತೆ ಒಂದುವರೆ ವರ್ಷ ಕಾಲ ಬಳ್ಳಾರಿ ರಸ್ತೆಯಲ್ಲಿ ಭಾರಿ ಸಂಚಾರ ಮಾರ್ಗ ಬದಲಾವಣೆಗಳನ್ನು ಮಾಡಲಾಗಿದೆ. ಇದೀಗ ನ್ಯೂ ಏರ್​ಪೋರ್ಟ್​​ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯ ಸರದಿ. ಹೌದು…ಬೆಂಗಳೂರಿನ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯ ಗೆದ್ದಲಹಳ್ಳಿ ರೈಲ್ವೆ ಸೇತುವೆ ಸಂಖ್ಯೆ 535ರ ಅಗಲೀಕರಣ ಕಾಮಗಾರಿ ನಡೆಯಬೇಕಿದೆ. ಹೀಗಾಗಿ ಇದೇ ನವೆಂಬರ್ 28ರಿಂದ ಡಿಸೆಂಬರ್ 30ರವರೆಗೆ ಬರೋಬ್ಬರಿ 33 ದಿನಗಳ ಕಾಲ ರಸ್ತೆ ಸಂಚಾರ ಬಂದ್ ಮಾಡಲು ನೈಋತ್ಯ ರೈಲ್ವೆ, ಬೆಂಗಳೂರು ಟ್ರಾಫಿಕ್ ಪೊಲೀಸರ ಮುಂದೆ ಪ್ರಸ್ತಾಪಿಸಿದೆ.

ನವೆಂಬರ್ 11ರಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ನೈಋತ್ಯ ರೈಲ್ವೆಯ ಹಿರಿಯ ವಿಭಾಗೀಯ ಎಂಜಿನಿಯರ್ ಹರ್ಷಿತ್ ಗುಪ್ತಾ, ಕಾಮಗಾರಿಯ ಸಂಪೂರ್ಣ ವಿವರಗಳನ್ನು ದಾಖಲಿಸಿದ್ದಾರೆ. ಪ್ರಸ್ತುತ ಸೇತುವೆಯ ಬಳಿ ಇರುವ 9.5 ಮೀಟರ್ ಅಗಲದ ರಸ್ತೆಯನ್ನು 18 ಮೀಟರ್‌ಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಎರಡು ದ್ವಾರಗಳನ್ನು ಹೊಂದಿರುವ 9 ಮೀಟರ್‌ನ ಬಲವರ್ಧಿತ ಸಿಮೆಂಟ್ ಕಾಂಕ್ರೀಟ್ ಬಾಕ್ಸ್ ರಚನೆಗಳನ್ನು ನಿರ್ಮಿಸಲಾಗುತ್ತದೆ. ಹೀಗಾಗಿ ನವೆಂಬರ್ 28ರಿಂದ ಡಿಸೆಂಬರ್ 30ರವರೆಗೆ ಒಟ್ಟು 33 ದಿನಗಳ ಕಾಲ ಈ ರಸ್ತೆಯನ್ನು ಬಂದ್ ಮಾಡಿ ವಾಹನ ಸಂಚಾರ ಮಾರ್ಗ ಬದಲಾಯಿಸಲು ಅನುಮತಿ ಕೋರಿದ್ದಾರೆ.

Loading...

ಇದನ್ನೂ ಓದಿ: 18 ತಿಂಗಳು ಬಳ್ಳಾರಿ ರಸ್ತೆ ಬಂದ್‌: ಮೆಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗೆ ಬಸ್ ಸೇರಿ ಭಾರೀ ವಾಹನಗಳಿಗೆ ನಿರ್ಬಂಧ, ಇಲ್ಲಿವೆ ಪರ್ಯಾಯ ಮಾರ್ಗಗಳು

ಬೆಂಗಳೂರು ಮೂಲದ ‘ಗೌಂಡರ್ ಇನ್‌ಫ್ರಾಟೆಕ್’ ಸಂಸ್ಥೆಯು ಈ ಕಾಮಗಾರಿಯ ಗುತ್ತಿಗೆ ಪಡೆದಿದೆ. ಪ್ರಸ್ತಾವಿತ ವೇಳಾಪಟ್ಟಿಯ ಪ್ರಕಾರ, ಡಿಸೆಂಬರ್ 2ರಂದು ತಾತ್ಕಾಲಿಕ ಗರ್ಡರ್‌ಗಳ ಅಳವಡಿಕೆ ಕಾರ್ಯ ಆರಂಭವಾಗಲಿದ್ದು, ಡಿಸೆಂಬರ್ 10ರಂದು ಆರ್‌ಸಿಸಿ ಬಾಕ್ಸ್ ರಚನೆಗಳನ್ನು ಅಳವಡಿಸಲಾಗುತ್ತದೆ. ಈ ಕಾರಣಕ್ಕೆ ಡಿಸೆಂಬರ್ 12ರಂದು ರೈಲ್ವೆ ಮಾರ್ಗದಲ್ಲಿ ಲೈನ್ ಮತ್ತು ಪವರ್ ಬ್ಲಾಕ್ ತೆಗೆದುಕೊಳ್ಳುವುದು ಅನಿವಾರ್ಯವಾಗಿದ್ದು, ಆ ಅವಧಿಯಲ್ಲಿ ರೈಲು ಸೇವೆಗಳು ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ. ಆದರೆ, ರಸ್ತೆ ಬಂದ್ ಮಾಡುವ ಕುರಿತು ಬೆಂಗಳೂರು ಸಂಚಾರ ಪೊಲೀಸರು ಅನುಮತಿ ನೀಡಿಲ್ಲ.

ಈ ಬಗ್ಗೆ ಸಂಚಾರಿ ಪೊಲೀಸ್, ಇದಕ್ಕೆ ಪರ್ಯಾವಾಗಿ ಈ ರಸ್ತೆಯ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬೇರೆಡೆಗೆ ತಿರುಗಿಸಲು ಚಿಂತನೆ ನಡೆಸಿದ್ದು,  ಯಾವುದೇ ಸಂದರ್ಭದಲ್ಲೂ ಈ ರಸ್ತೆ ಬಂದ್ ಮಾಡಿ ಪರ್ಯಾಯ ಮಾರ್ಗ ತೋರಿಸುವ ಸಾಧ್ಯತೆಗಳಿವೆ. ಹೀಗಾಗಿ ಈ ರಸ್ತೆ ಕಡೆ ಸಂಚರಿಸುವ ವಾಹನ ಸವಾರರು ಮಾಹಿತಿ ತಿಳಿದುಕೊಂಡು ಹೋಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
Loading...
Unable to load recommendations.
Follow Us