ಬೆಂಗಳೂರಿಗೆ ಎದುರಾಗಲಿದೆ ಹಾಲಿನ ಕೊರತೆ; ಹಾಲಿನ ಉತ್ಪಾದನೆ ಕಡಿಮೆಯಾಗಿದೆ ಎಂದು ಎಚ್ಚರಿಕೆ ನೀಡಿದ ಬಮುಲ್
ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ನಲ್ಲಿ ಟೆಕ್ನಿಕಲ್ ಸಮಸ್ಯೆ ಎದುರಾಗಿದೆ. ಬಮುಲ್ನ ಇಆರ್ಪಿ ಸರ್ವರ್ ಡೌನ್ ಆಗಿದೆ. ಇದೇ ಸಮಸ್ಯೆ ಮುಂದಿನ ಎರಡು ದಿನ ಮುಂದುವರೆಯುವ ಸಾಧ್ಯತೆ ಇದೆ.
ಬೆಂಗಳೂರು: ಬೇಸಿಗೆಯ ಬೇಗೆಯ ನಡುವೆ ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಬಿಸಿ ತಟ್ಟಲಿದೆ. ಇಂದಿನಿಂದ ಸರಿಯಾದ ಸಮಯಕ್ಕೆ ಹಾಲು ಸಿಗೋದು ಕಷ್ಟಕರ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಲಿನ ಉತ್ಪಾದನೆಯು ದಿನಕ್ಕೆ 14-15 ಲಕ್ಷ ಲೀಟರ್‌ನಿಂದ 12-13 ಲಕ್ಷ ಲೀಟರ್‌ಗೆ ಒಂದೆರಡು ತಿಂಗಳೊಳಗೆ ಕಡಿಮೆಯಾಗುವುದರಿಂದ, ಮುಂಬರುವ ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಹಾಲಿನ ಪೂರೈಕೆಯಲ್ಲಿ ಕೊರತೆ ಉಂಟಾಗಲಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಹಾಲು ಸಿಗುವುದು ಕಷ್ಟವಾಗಲಿದೆ.
ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ನಲ್ಲಿ ಟೆಕ್ನಿಕಲ್ ಸಮಸ್ಯೆ ಎದುರಾಗಿದೆ. ಬಮುಲ್ನ ಇಆರ್ಪಿ ಸರ್ವರ್ ಡೌನ್ ಆಗಿದೆ. ಇದೇ ಸಮಸ್ಯೆ ಮುಂದಿನ ಎರಡು ದಿನ ಮುಂದುವರೆಯುವ ಸಾಧ್ಯತೆ ಇದೆ. ಇಆರ್ಪಿ ಸಮಸ್ಯೆಯಿಂದ ಲಾರಿಗಳಿಗೆ ಸಿಸ್ಟಮ್ನ ಡೇಟಾ ಪ್ರಕಾರ ಲೋಡ್ ಮಾಡಲು ತೊಂದರೆಯಾಗುತ್ತಿದೆ. ಸರಿಯಾದ ಸಮಯಕ್ಕೆ ಲೋಡ್ ಆಗದ ಕಾರಣ ಸಪ್ಲೈ ನಲ್ಲಿ ವ್ಯತ್ಯಯ ಕಂಡು ಬಂದಿದೆ. ಸಿಸ್ಟಂ ಸರಿ ಮಾಡೋದಕ್ಕೆ ಬಮುಲ್ ಅಧಿಕಾರಿಗಳು ಈಗಾಗಲೇ ಹೈದರಾಬಾದ್ ತಜ್ಞರ ಮೊರೆ ಹೋಗಿದ್ದಾರೆ. ಇಂದು ಹೈದ್ರಾಬಾದ್ ನಿಂದ ತಂಡ ಆಗಮಿಸುವ ಸಾಧ್ಯತೆ ಇದೆ. ನಾಳೆಯೊಳಗೆ ಸಮಸ್ಯೆ ಬಗೆಹರಿಸುವುದಾಗಿ ಬಮುಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಒಡೆದ ಹಾಲಿನ ಬಗ್ಗೆ ಬೆಂಗಳೂರಿಗರಿಂದ ದೂರಿನ ಸುರಿಮಳೆ; ಬೇಸಿಗೆ ನೆಪ ಹೇಳಿದ ಕೆಎಂಎಪ್
ಹೈನುಗಾರಿಕೆಯಲ್ಲಿ ಆಸಕ್ತಿ ಕಳೆದುಕೊಂಡ ರೈತರು
ಇನ್ನು ಮತ್ತೊಂದೆಡೆ ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ (ಬಮುಲ್), ನಷ್ಟವನ್ನು ಉಲ್ಲೇಖಿಸಿ ರೈತರು ಹೈನುಗಾರಿಕೆಯನ್ನು ತ್ಯಜಿಸುವ ಪ್ರವೃತ್ತಿ ಹೆಚ್ಚುತ್ತಿರುವ ಕಾರಣ ಹಾಲಿನ ಕೊರತೆ ಎದುರಾಗಿದೆ. ಬಮುಲ್ ಅಂದಾಜಿನ ಪ್ರಕಾರ ಬೆಂಗಳೂರು ಪ್ರದೇಶವೊಂದರಿಂದಲೇ ಸುಮಾರು 2,500-3,000 ಜಾನುವಾರುಗಳನ್ನು ಪ್ರತಿ ತಿಂಗಳು ಹೈನುಗಾರಿಕೆ ಲಾಭದಾಯಕವಾಗಿರುವ ಇತರ ರಾಜ್ಯಗಳ ರೈತರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಪರಿಸ್ಥಿತಿ ಆತಂಕಕಾರಿಯಾಗಿದ್ದು, ರೈತರನ್ನು ಮನವೊಲಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪ್ರತಿ ಲೀಟರ್ ಹಾಲಿಗೆ ನೆರೆಯ ರಾಜ್ಯಗಳು ರೈತರಿಗೆ 40 ರೂ.ಗಳನ್ನು ನೀಡುತ್ತಿದ್ದರೆ, ಕರ್ನಾಟಕವು 30 ರೂ.ಗಳನ್ನು ಪಾವತಿಸುತ್ತಿದೆ, ಇದು ವೆಚ್ಚವನ್ನು ಭರಿಸುವುದಿಲ್ಲ. ಪ್ರತಿ ತಿಂಗಳು 15-20 ರೈತರು ನಮಗೆ ಹಾಲು ಮಾರಾಟ ಮಾಡುವುದನ್ನು ನಿಲ್ಲಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ 20,500 ಅಕ್ರಮ ವ್ಯಾಪಾರ ಪತ್ತೆ; 16,449 ಜನರಿಗೆ ನೋಟಿಸ್, 132 ಮಳಿಗೆ ಬಂದ್ ಮಾಡಿಸಿದ ಬಿಬಿಎಂಪಿ
ಇದರ ಪರಿಣಾಮವಾಗಿ, ಬಮುಲ್ ಹಾಲಿನ ಪ್ಯಾಕೆಟ್‌ಗಳು, ತುಪ್ಪ ಮತ್ತು ಇತರ ಉತ್ಪನ್ನಗಳ ಉತ್ಪಾದನೆಯನ್ನು ಕಡಿಮೆ ಮಾಡಲು ಪ್ರಾರಂಭಿಸಿದೆ. 15 ಲಕ್ಷ ಲೀಟರ್ ಹಾಲಿನಲ್ಲಿ ಬೆಂಗಳೂರಿನಾದ್ಯಂತ ಸುಮಾರು 11 ಲಕ್ಷ ಲೀಟರ್ ಹಾಲನ್ನು ಗ್ರಾಹಕರಿಗೆ ಪೂರೈಸಲಾಗುತ್ತಿದೆ.
ಉಳಿದರಲ್ಲಿ ಕೆನೆರಹಿತ ಹಾಲಿನ ಪುಡಿ ಮತ್ತು ಚೀಸ್ ತಯಾರಿಸಲು ಬಳಸಲಾಗುತ್ತಿದೆ. ಹಾಲಿನ ಪುಡಿಯನ್ನು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆಯಡಿ ಸರಬರಾಜು ಮಾಡಬೇಕು. ಸಹಾಯ ಕೋರಿ ಬಮೂಲ್‌ನ ಅನೇಕ ಮನವಿಗಳಿಗೆ ಸರ್ಕಾರ ಸ್ಪಂದಿಸದ ಕಾರಣ, ಇದೇ ಪರಿಸ್ಥಿತಿ ಒಂದು ತಿಂಗಳು ಮುಂದುವರಿದರೆ ಬಿಕ್ಕಟ್ಟು ಉಂಟಾಗುತ್ತದೆ ಎಂದು ಅವರು ತಿಳಿಸಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:38 am, Tue, 7 March 23