
ಬೆಂಗಳೂರು, ನವೆಂಬರ್ 25: ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಆಗಾಗ್ಗೆ ಚರ್ಚೆಗೆ ಗ್ರಾಸವಾಗುವ ಬೆಂಗಳೂರಿನ ಬಗ್ಗೆ ಇದೀಗ ಪೊಲೀಸ್ ಇಲಾಖೆಯಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ತಡರಾತ್ರಿಯ ಸಿನಿಮಾ ಪ್ರದರ್ಶನಗಳು, ಮನರಂಜನಾ ಕಾರ್ಯಕ್ರಮಗಳು ಹಾಗೂ ವಿವಿಧ ಶೋಗಳಿಗೆ ಟಿಕೆಟ್ ಬುಕ್ ಮಾಡುವ ಮಹಿಳೆಯರ ಸಂಖ್ಯೆ ದೇಶದಲ್ಲೇ ಬೆಂಗಳೂರಿನಲ್ಲಿ ಅತಿ ಹೆಚ್ಚಾಗಿದೆ. ಮೇಕ್ ಮೈ ಟ್ರಿಪ್ ಆ್ಯಪ್ನ ದತ್ತಾಂಶವನ್ನು ಉಲ್ಲೇಖಿಸಿರುವ ಬೆಂಗಳೂರಿನ ನೂತನ ಮುಖ್ಯ ಪೊಲೀಸ್ ಆಯುಕ್ತ ಆರ್. ಹಿತೇಂದ್ರ, ಮಹಿಳೆಯರು ನಗರದಲ್ಲಿ ಸುರಕ್ಷಿತವಾಗಿದ್ದಾರೆ ಎಂಬುದಕ್ಕೆ ಇದು ಉತ್ತಮ ಸೂಚನೆ ಎಂದು ಹೇಳಿದ್ದಾರೆ.
ನವೆಂಬರ್ 18ರಂದು ಬೆಂಗಳೂರಿನ ಮೊದಲ ಮುಖ್ಯ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಆರ್. ಹಿತೇಂದ್ರ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಮೇಕ್ ಮೈ ಟ್ರಿಪ್ ದತ್ತಾಂಶದ ಪ್ರಕಾರ, ತಡರಾತ್ರಿಯ ಸಿನಿಮಾ ಪ್ರದರ್ಶನಗಳು ಮತ್ತು ಕಾರ್ಯಕ್ರಮಗಳಿಗೆ ಮಹಿಳೆಯರು ಅತಿ ಹೆಚ್ಚು ಟಿಕೆಟ್ ಬುಕ್ ಮಾಡುತ್ತಿರುವುದು ಬೆಂಗಳೂರಿನಿಂದಲೇ. ಮಹಿಳೆಯರು ನಗರದಲ್ಲಿ ಸುರಕ್ಷಿತವಾಗಿ ಸಂಚರಿಸಲು ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರುವುದು ಸಂತಸದ ವಿಚಾರ ಎಂದಿದ್ದಾರೆ.
ಆದರೆ, ಮಹಿಳೆಯರ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವುದು ಪೊಲೀಸ್ ಇಲಾಖೆಯ ಗುರಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಮಹಿಳೆಯರ ರಕ್ಷಣೆ, ಸೈಬರ್ ಅಪರಾಧ ನಿಯಂತ್ರಣ ಹಾಗೂ ಮಾದಕ ವಸ್ತುಗಳ ಹಾವಳಿಗೆ ಕಡಿವಾಣ ಹಾಕುವುದು ಪ್ರಮುಖ ಆದ್ಯತೆಗಳಾಗಿವೆ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಐದು ಪೊಲೀಸ್ ಕಮಿಷನರೇಟ್‌ಗಳಾಗಿ ಪುನರ್‌ರಚಿಸಿರುವುದರ ಉದ್ದೇಶ ಪೊಲೀಸ್ ಸೇವೆಯನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸುವುದಾಗಿದೆ ಎಂದು ಹಿತೇಂದ್ರ ವಿವರಿಸಿದ್ದಾರೆ. ಇನ್ನು ಮುಂದೆ ಸಾರ್ವಜನಿಕರು ತಮ್ಮ ವಲಯದ ಪೊಲೀಸ್ ಆಯುಕ್ತರನ್ನು ನೇರವಾಗಿ ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಪೊಲೀಸ್ ಆಯುಕ್ತರ ಕಚೇರಿಗೆ ಬರಬೇಕಾದ ಅನಿವಾರ್ಯತೆ ಇರುವುದಿಲ್ಲ ಎಂದಿದ್ದಾರೆ.
ಇದೇ ವೇಳೆ, ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಶೇಷ ಸಂಸ್ಥೆಗಳ ನೆರವು ಪಡೆಯಲಾಗುವುದು. 2028ರ ವೇಳೆಗೆ ಮಾದಕ ವಸ್ತು ಮುಕ್ತ ಕರ್ನಾಟಕ ನಿರ್ಮಿಸುವ ಸರ್ಕಾರದ ಗುರಿಗೆ ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ