
ಬೆಂಗಳೂರು, (ಮೇ 16): ಭಾರತ ಮತ್ತು ಪಾಕಿಸ್ತಾನದ (India And Pakistan) ನಡುವಿನ ಸಂಘರ್ಷದಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿದ್ದ 2025ರ ಐಪಿಎಲ್ ಟೂರ್ನಮೆಂಟ್ (indian premier league 2025) ಮರು ಆರಂಭಕ್ಕೆ ಬಿಸಿಸಿಐ ದಿನಾಂಕ ಘೋಷಣೆ ಮಾಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಟೂರ್ನಿಯ ದ್ವಿತೀಯಾರ್ಧದ ಮೊದಲ ಪಂದ್ಯ ನಾಳೆ ಅಂದ್ರೆ ಮೇ 17 ಬೆಂಗಳೂರಿನಲ್ಲಿ (Bengaluru) ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers bengaluru) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (kolkata knight riders) ನಡುವೆ ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಇದಕ್ಕಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರು (Bengaluru Traffic Advisory), ವಾಹನ ಸಂಚಾರ ಹಾಗೂ ಪಾರ್ಕಿಂಗ್ ಸಲಹೆ ನೀಡಿದ್ದಾರೆ. ಹಾಗೇ ಸಾರ್ವಜನಿಕರ ಅನೂಕೂಲಕ್ಕಾಗಿ ನಮ್ಮ ಮೆಟ್ರೋ (Namma Metro) ಸಂಚಾರ ಸಮಯಾವಧಿ ವಿಸ್ತರಣೆ ಮಾಡಿದೆ.
ಸ್ಟೇಡಿಯಂ ಸುತ್ತಮುತ್ತ ಸಂಚಾರ ದಟ್ಟಣೆ ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಶನಿವಾರ(ಮೇ 17) ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆ ವರೆಗೂ ಸ್ಟೇಡಿಯಂ ಸುತ್ತಮುತ್ತ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ. ಪಂದ್ಯ ವೀಕ್ಷಿಸಲು ಬರುವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣ ಸುತ್ತಮುತ್ತ ವಾಹನಗಳ ನಿಲುಗಡೆಗೆ ಸ್ಥಳ ಕೊರತೆ ಇರುವುದರಿಂದ ಬಿಎಂಟಿಸಿ, ಮೆಟ್ರೋ ಬಳಸಲು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಓಲಾ, ಉಬರ್, ಆಟೋ ಇತ್ಯಾದಿ ಕ್ಯಾಬ್‌ಗಳು ಪಿಕ್ ಆಪ್ ಮತ್ತು ಡ್ರಾಪ್ ಮಾಡಲು ಸ್ಥಳ ನಿಗದಿಪಡಿಸಲಾಗಿದೆ.
ಇನ್ನು ಆರ್ಸಿಬಿ-ಕೋಲ್ಕತ್ತಾ ಪಂದ್ಯದ ವೇಳೆ ಸಾರ್ವಜನಿಕರ ಅನೂಕೂಲಕ್ಕಾಗಿ ನಮ್ಮ ಮೆಟ್ರೋ (Namma Metro) ಪಂದ್ಯಗಳ ದಿನ ಸಮಯಾವಧಿ ವಿಸ್ತರಣೆ ಮಾಡಿದೆ. ಮೇ 17 ಮತ್ತು ಮೇ 23ರಂದು ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆಯಲಿದೆ. ಈ ದಿನಗಳಲ್ಲಿ ನಮ್ಮ ಮೆಟ್ರೋ ಎಲ್ಲಾ ಟರ್ಮಿನಲ್ ಅಂದರೆ ವೈಟ್ ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದವರ ಮಟ್ರೋ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಯನ್ನು ಮಧ್ಯರಾತ್ರಿ 1ರ ವರೆಗೆ ವಿಸ್ತರಿಸಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ ಮಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 1:35ಕ್ಕೆ ಹೊರಡಲಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ನಮ್ಮ ಮೆಟ್ರೋ ಕೋರಿದೆ.