ಬೆಂಗಳೂರು ಇಸ್ಕಾನ್ ಹರೇ ಕೃಷ್ಣ ದೇಗುಲದ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಬೆಂಗಳೂರಿನ ಇಸ್ಕಾನ್ ಹರೇ ಕೃಷ್ಣ ದೇಗುಲದ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರೊಂದಿಗೆ, ದೇವಾಲಯದ ಆಡಳಿತ ನಿರ್ವಹಣೆ ಸಂಬಂಧ ಇಸ್ಕಾನ್ ಮುಂಬೈಗೆ ಅಧಿಕಾರ ನೀಡಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಅಸಿಂಧುವಾಗಿದೆ. ದೇಗುಲವು ಬೆಂಗಳೂರು ಇಸ್ಕಾನ್ ಸೊಸೈಟಿಗೆ ಸೇರಿದ್ದೆಂಬುದನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ. ಪ್ರಕರಣದ ವಿವರ ಇಲ್ಲಿದೆ.

ಬೆಂಗಳೂರು, ಮೇ 16: ಬೆಂಗಳೂರಿನಲ್ಲಿರುವ ಹರೇ ಕೃಷ್ಣ ದೇವಸ್ಥಾನ (Hare Krishna Temple) ಮತ್ತು ಶೈಕ್ಷಣಿಕ ಸಂಕೀರ್ಣದ ಒಡೆತನ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ (Supreme Court), ದೇಗುಲದ ಒಡೆತನ ಬೆಂಗಳೂರು ಇಸ್ಕಾನ್ ಸೊಸೈಟಿಗೆ (ISKCON Society Bangalore) ಸೇರಿದ್ದು ಎಂದು ಶುಕ್ರವಾರ ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಇಸ್ಕಾನ್ ಸೊಸೈಟಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ಬೆಂಗಳೂರು ಇಸ್ಕಾನ್ ಸೊಸೈಟಿ ಪರ ತೀರ್ಪು ನೀಡಿದೆ.
2011 ರ ಮೇ 23 ರಂದು ಕರ್ನಾಟಕ ಹೈಕೋರ್ಟ್ ‘ಇಸ್ಕಾನ್ ಮುಂಬೈ’ ಪರವಾಗಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಬೆಂಗಳೂರು ಇಸ್ಕಾನ್ ಸೊಸೈಟಿ 2011 ರ ಜೂನ್ 2 ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯಲ್ಲಿ, ಬೆಂಗಳೂರಿನ ಸ್ಥಳೀಯ ನ್ಯಾಯಾಲಯದ 2009 ರ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲಾಗಿತ್ತು. ಬೆಂಗಳೂರು ಇಸ್ಕಾನ್ ಸೊಸೈಟಿ ಪ್ರತಿನಿಧಿ ಕೋದಂಡರಾಮ ದಾಸ ಅವರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.
ಬೆಂಗಳೂರಿನ ವಿಚಾರಣಾ ನ್ಯಾಯಾಲಯವು ಈ ಹಿಂದೆ ಬೆಂಗಳೂರು ಇಸ್ಕಾನ್ ಸೊಸೈಟಿ ಪರವಾಗಿ ತೀರ್ಪು ನೀಡಿತ್ತು. ಅಲ್ಲದೆ, ಇಸ್ಕಾನ್ ಮುಂಬೈ ವಿರುದ್ಧ ಶಾಶ್ವತ ತಡೆಯಾಜ್ಞೆ ನೀಡಿತ್ತು. ಆದಾಗ್ಯೂ, ಈ ತೀರ್ಪನ್ನು ರದ್ದುಗೊಳಿಸಿದ್ದ ಹೈಕೋರ್ಟ್, ಇಸ್ಕಾನ್ ಮುಂಬೈನ ಪ್ರತಿವಾದವನ್ನು ಎತ್ತಿಹಿಡಿದಿತ್ತು. ದೇವಾಲಯದ ನಿಯಂತ್ರಣಾಧಿಕಾರವನ್ನು ಇಸ್ಕಾನ್ ಮುಂಬೈಗೆ ನೀಡಿತ್ತು.
ಕರ್ನಾಟಕದಲ್ಲಿ ನೋಂದಾಯಿತ ಬೆಂಗಳೂರು ಇಸ್ಕಾನ್ ಸೊಸೈಟಿ, ದಶಕಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಬೆಂಗಳೂರು ದೇವಾಲಯವನ್ನು ನಿರ್ವಹಿಸುತ್ತಿದೆ ಎಂದು ವಾದಿಸಿತ್ತು.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟರ್ಕಿಯ ಸೆಲೆಬಿ ಏವಿಯೇಷನ್ ಕಾರ್ಯಾಚರಣೆ ಸ್ಥಗಿತ
ಮತ್ತೊಂದೆಡೆ, ಇಸ್ಕಾನ್ ಬೆಂಗಳೂರು ತನ್ನ ಶಾಖೆಯಾಗಿದ್ದು ಅದರ ಆಸ್ತಿಯು ನ್ಯಾಯಸಮ್ಮತವಾಗಿ ತನ್ನ ವ್ಯಾಪ್ತಿಗೆ ಸೇರಿದೆ ಎಂದು ಇಸ್ಕಾನ್ ಮುಂಬೈ ಪ್ರತಿಪಾದಿಸಿತ್ತು. ಇಸ್ಕಾನ್ ಮುಂಬೈ 1860 ರ ರಾಷ್ಟ್ರೀಯ ಸಂಘಗಳ ನೋಂದಣಿ ಕಾಯ್ದೆ ಮತ್ತು 1950 ರ ಬಾಂಬೆ ಸಾರ್ವಜನಿಕ ಟ್ರಸ್ಟ್ ಕಾಯ್ದೆಯಡಿಯಲ್ಲಿ ನೋಂದಾಯಿಸಲಾಗಿರುವ ಸಂಸ್ಥೆಯಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








