
ಬೆಂಗಳೂರು, (ಜೂನ್ 09): ಪ್ರತಿಷ್ಠಿತ ಮುಯ್ ಥಾಯ್ (Muay Thai) ಕ್ರೀಡಾಕೂಟದಲ್ಲಿ ಬೆಂಗಳೂರಿನ (Bengaluru) ಬನಶಂಕರಿ ಪೊಲೀಸ್ ಠಾಣೆ ಎಎಸ್ಐ ಪುತ್ರ ಕಾಂತರಾಜು ಪುತ್ರ ಶ್ರೀಹರ್ಷ ಬಿ.ಕೆ. ವಿಶೇಷ ಸಾಧನೆ ಮಾಡಿದ್ದಾರೆ. ಹೌದು…ಶ್ರೀಲಂಕದ ನೆಗೊಂಬೋದಲ್ಲಿ ನಡೆದ ಮುಯ್ ಥಾಯ್ಸಮರ ಕಲೆಯ ಕ್ರೀಡಾಕೂಟದಲ್ಲಿ ಶ್ರೀಹರ್ಷ ಬಿ.ಕೆ ಅವರು ಪಾಕಿಸ್ತಾನದ ಸ್ಪರ್ಧಿಯನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಸ್ವಂತ ಪರಿಶ್ರಮದಿಂದ ಈ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಭಿನಂದನೆ ತಿಳಿಸಿದ್ದು, ಶ್ರೀಹರ್ಷ ಅವರನ್ನ ಕಚೇರಿಗೆ ಕರೆಸಿ ಸನ್ಮಾನಿಸಿದ್ದಾರೆ.
ಇಂಟರ್ ನ್ಯಾಷನಲ್ ಥಾಯ್ ಮಾರ್ಷಲ್ ಆರ್ಟ್ಸ್ (ITMA) ಸಂಸ್ಥೆಯು ಶ್ರೀಲಂಕಾದಲ್ಲಿ ಏರ್ಪಡಿಸಿದ್ದ ‘ಇಂಟರ್ ನ್ಯಾಷನಲ್ ಆಂಡ್ ಥಾಯ್ ಮಾರ್ಷಲ್ ಆರ್ಟ್ಸ್ ಏಷ್ಯನ್ ಗೇಮ್ಸ್-2026’ (ITMA Asian Games 2026) ಕ್ರೀಡಾಕೂಟದಲ್ಲಿ ಶ್ರೀಹರ್ಷ ಭಾರತವನ್ನು ಪ್ರತಿನಿಧಿಸಿದ್ದರು. 57 ಕೆಜಿ ವಿಭಾಗದ ತೀವ್ರ ಹಣಾಹಣಿಯ ಮುಯ್ ಥಾಯ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಇವರು, ಫೈನಲ್ ಪಂದ್ಯದಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿಪಾಕಿಸ್ತಾನದ ಸ್ಪರ್ಧಿಯ ವಿರುದ್ಧ ಸೆಣಸಾಡಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನವರಾದ ಶ್ರೀಹರ್ಷ ಅವರಿಗೆ ಈ ಹಂತಕ್ಕೆ ತಲುಪಲು ಯಾವುದೇ ಸರ್ಕಾರಿ ನೆರವು ಅಥವಾ ಪ್ರೋತ್ಸಾಹ ಸಿಕ್ಕಿರಲಿಲ್ಲ. ಆರ್ಥಿಕ ಮುಗ್ಗಟ್ಟು ಮತ್ತು ಸೌಲಭ್ಯಗಳ ಕೊರತೆಯ ನಡುವೆಯೂ ಕೇವಲ ತಮ್ಮ ಕಠಿಣ ಪರಿಶ್ರಮ, ತಂದೆಯ ಬೆಂಬಲ ಮತ್ತು ಅಚಲ ಛಲದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದು ಬೀಗಿದ್ದಾರೆ. ಈ ಮೂಲಕ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಬೆಂಗಳೂರು ಪೊಲೀಸ್ ಕುಟುಂಬದ ಯುವಕನೊಬ್ಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿರುವುದನ್ನು ಗುರುತಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಶ್ರೀಹರ್ಷ ಅವರನ್ನು ತಮ್ಮ ಕಚೇರಿಗೆ ಆಹ್ವಾನಿಸಿ ಅಭಿನಂದನೆ ತಿಳಿಸಿದ್ದಾರೆ. ಶ್ರೀಹರ್ಷ ಮತ್ತು ಅವರ ತಂದೆ ಎಎಸ್‌ಐ ಕಾಂತರಾಜು ಅವರಿಗೆ ನೆನಪಿನ ಕಾಣಿಕೆ ನೀಡಿ ವಿಶೇಷವಾಗಿ ಸನ್ಮಾನಿಸಿ ಶುಭ ಹಾರೈಸಿದರು.
ಇನ್ನು ಈ ಸಾಧನೆ ಬಗ್ಗೆ ಶ್ರೀಹರ್ಷ ಮಾತನಾಡಿದ್ದು,ಪಾಕಿಸ್ತಾನದ ವಿರುದ್ಧದ ಪಂದ್ಯಾವಳಿ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ದೇಶಕ್ಕಾಗಿ ಚಿನ್ನ ಗೆದ್ದಿರುವುದು ಅಪಾರ ಸಂತಸ ತಂದಿದೆ. ಯಾವುದೇ ಸರ್ಕಾರದ ಸಹಾಯವಿಲ್ಲದೆ ಇಲ್ಲಿಯವರೆಗೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ ಹಾಗೂ ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತರಬೇಕೆಂಬ ಆಸೆಯಿದೆ. ಸರ್ಕಾರ ನನ್ನಂತಹ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ನೀಡಿದರೆ ಇನ್ನು ಹೆಚ್ಚಿನ ಸಾಧನೆ ಮಾಡಬಹುದು ಎಂದಿದ್ದಾರೆ.
Published On - 8:23 pm, Tue, 9 June 26