ಬೆಂಗಳೂರು ಟ್ರಾಫಿಕ್​ ನಿರ್ವಹಣೆಗೆ ಬರಲಿವೆ ಹೆಚ್ಚುವರಿ 750 ಎಐ ಕ್ಯಾಮರಾ

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ನಿರ್ವಹಣೆಗೆ ಸಂಚಾರ ಪೊಲೀಸರು, ಸರ್ಕಾರ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿರುತ್ತಾರೆ. ಆದರೆ, ಏನೇ ಮಾಡಿದರೂ ಸಮಸ್ಯೆಗೆ ತೃಪ್ತಿಕರ ಪರಿಹಾರ ದೊರೆಯುತ್ತಿಲ್ಲ. ಇದೀಗ ಬೆಂಗಳೂರು ಟ್ರಾಫಿಕ್ ಪೊಲೀಸರು ಹೆಚ್ಚುವರಿಯಾಗಿ 750 ಎಐ ಕ್ಯಾಮರಾ ಅಳವಡಿಸಲು ಮುಂದಾಗಿದ್ದಾರೆ. ಇದರಿಂದ ಏನು ಲಾಭ? ಎಐ ಕ್ಯಾಮರಾಗಳ ವಿಶೇಷತೆಗಳೇನು ಎಂಬ ವಿವರ ಇಲ್ಲಿದೆ.

ಬೆಂಗಳೂರು ಟ್ರಾಫಿಕ್​ ನಿರ್ವಹಣೆಗೆ ಬರಲಿವೆ ಹೆಚ್ಚುವರಿ 750 ಎಐ ಕ್ಯಾಮರಾ
ಬೆಂಗಳೂರು ಟ್ರಾಫಿಕ್​ ನಿರ್ವಹಣೆಗೆ ಬರಲಿವೆ ಹೆಚ್ಚುವರಿ 750 ಎಐ ಕ್ಯಾಮರಾ (ಸಾಂದರ್ಭಿಕ ಚಿತ್ರ)
Follow us
|

Updated on: Jul 15, 2024 | 7:53 AM

ಬೆಂಗಳೂರು, ಜುಲೈ 15: ಟ್ರಾಫಿಕ್ ನಿರ್ವಹಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸುಮಾರು ಬೆಂಗಳೂರಿನ 3,000 ಕಡೆಗಳಲ್ಲಿ ಹೆಚ್ಚುವರಿಯಾಗಿ 750 ಕೃತಕ ಬುದ್ಧಿಮತ್ತೆ ಸ್ಮಾರ್ಟ್ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಟ್ರಾಫಿಕ್ ಪೊಲೀಸ್ ಮೂಲಗಳು ತಿಳಿಸಿವೆ. ಈ ಸ್ಥಳಗಳಲ್ಲಿ ಈಗಾಗಲೇ ಸುಮಾರು 7,500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿ ಕ್ಯಾಮರಾಗಳನ್ನು ನಗರದ ಹೊರವಲಯ ಮತ್ತು ಹೊಸ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿರುವ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲಾಗುತ್ತದೆ.

ಟ್ರಾಫಿಕ್ ನಿರ್ವಹಣೆಗೆ ನೆರವಾಗುವುದು, ಹಿಟ್ ಅಂಡ್ ರನ್ ಪ್ರಕರಣಗಳು, ಮಹಿಳೆಯರಿಗೆ ಕಿರುಕುಳ ಮತ್ತು ಇತರ ಕಾನೂನು ಸುವ್ಯವಸ್ಥೆ ಸಂಬಂಧಿತ ಘಟನೆಗಳ ಮೇಲೆ ನಿರಂತರವಾಗಿ ಕಣ್ಗಾವಲಿರಿಸುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಪೂರ್ವ) ರಮಣ್ ಗುಪ್ತಾ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ಇಷ್ಟೇ ಅಲ್ಲದೆ, ಸುರಕ್ಷಿತ ನಗರ ಯೋಜನೆಯ ಭಾಗವಾಗಿ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 150 ವಾಚ್ ಟವರ್‌ಗಳು ಮತ್ತು ಎಂಟು ಹೈ ಡೆಫಿನಿಷನ್ ಫೇಸ್-ರೆಕಗ್ನಿಷನ್ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಹೈ-ಡೆಫಿನಿಷನ್ ಫೇಸ್-ರೆಕಗ್ನಿಷನ್ ಕ್ಯಾಮರಾಗಳು ಸಂಚಾರ ದಟ್ಟಣೆಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡಲಿವೆ. ವಾಚ್ ಟವರ್‌ಗಳು ಸಾರ್ವಜನಿಕ ಪ್ರದೇಶಗಳ ಸಮರ್ಪಕ ಚಿತ್ರಣ ಒದಗಿಸಲಿವೆ. ಜತೆಗೆ, ಅಧಿಕಾರಿಗಳು ಘಟನೆಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡಲಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಕನಕಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ ಮತ್ತು ಸರ್ಜಾಪುರ ರಸ್ತೆಯಂತಹ ಪ್ರಮುಖ ಪ್ರದೇಶಗಳು 50 ಹೊಸ ಟ್ರಾಫಿಕ್ ಸಿಗ್ನಲ್‌ಗಳನ್ನು ಒಳಗೊಂಡಿರಲಿದ್ದು, ಈ ಪ್ರದೇಶಗಳಲ್ಲಿಯೂ ಹೊಸ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ-ದಕ್ಷಿಣ) ಶಿವ ಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜಪಾನ್ ತಂತ್ರಜ್ಞಾನಕ್ಕೂ ಸಾಧ್ಯವಾಗ್ತಿಲ್ಲ ಬೆಂಗಳೂರು ಟ್ರಾಫಿಕ್ ನಿಯಂತ್ರಣ! ಕಾರಣ ಇಲ್ಲಿದೆ

ಈ ಕ್ಯಾಮರಾಗಳು ವೀಡಿಯೊ ಕಣ್ಗಾವಲು ಸುಗಮಗೊಳಿಸಲಿವೆ. ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲೂ ನೆರವಾಗಲಿವೆ ಎಂದು ಶಿವ ಪ್ರಕಾಶ್ ಹೇಳಿದ್ದಾರೆ. ನೋ-ಎಂಟ್ರಿ ಜೋನ್‌ಗಳಲ್ಲಿ ಚಾಲನೆ ಮಾಡುವುದು ಅಥವಾ ಫುಟ್‌ಪಾತ್‌ಗಳಲ್ಲಿ ವಾಹನ ನಿಲುಗಡೆ ಮಾಡುವಂತಹ ನಿಯಮ ಉಲ್ಲಂಘನೆಗಳನ್ನು ಸದ್ಯ ಕ್ಯಾಮರಾ ಮೂಲಕ ಪತ್ತೆ ಮಾಡಲಾಗುತ್ತಿಲ್ಲ. ಹೆಚ್ಚುವರಿ ಕ್ಯಾಮರಾಗಳು ಇದಕ್ಕೆ ನೆರವಾಗಲಿವೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ