AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡಿಗೆ 1 ಟಿಎಂಸಿ ಬದಲಿಗೆ ನಿತ್ಯ 8000 ಕ್ಯುಸೆಕ್ ಕಾವೇರಿ ನೀರು ಬಿಡಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ

ತಮಿಳುನಾಡಿಗೆ ನಿತ್ಯ 1 ಟಿಎಂಸಿ( 11,000 ಕ್ಯೂಸೆಕ್‌ ) ಕಾವೇರಿ ನೀರು ಬಡುವಂತೆ CWRC ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಇಂದು (ಜುಲೈ 14) ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿದ್ದು, ಸಭೆಯಲ್ಲಿ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು, ಅಲ್ಲದೇ ಹಿರಿಯ ವಕೀಲ ಮೋಹನ್ ಕಾತರಕಿ ಅವರ ಸಲಹೆ ಪಾಲನೆಗೆ ಒಪ್ಪಿಗೆ ಸೂಚಿಸಲಾಗಿದೆ.

ತಮಿಳುನಾಡಿಗೆ 1 ಟಿಎಂಸಿ ಬದಲಿಗೆ ನಿತ್ಯ  8000 ಕ್ಯುಸೆಕ್ ಕಾವೇರಿ ನೀರು ಬಿಡಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ
ಸರ್ವಪಕ್ಷ ಸಭೆ
ರಮೇಶ್ ಬಿ. ಜವಳಗೇರಾ
|

Updated on:Jul 14, 2024 | 7:01 PM

Share

ಬೆಂಗಳೂರು, (ಜುಲೈ 14): ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಆದೇಶಿಸಿದ್ದು, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ  ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕರು ಸಹಮತ ಸೂಚಿಸಿದ್ದಾರೆ. ಇಂದು (ಜುಲೈ 14) ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಸದ್ಯಕ್ಕೆ ತಮಿಳುನಾಡಿಗೆ ನೀರು ಹರಿಸುವುದು ಬೇಡ ಎಂದು ಒತ್ತಾಯಿಸಿದ್ದಾರೆ. ಆದ್ರೆ, ಕಾನೂನಾತ್ಮಕವಾಗಿ ಹೋರಾಟ ಮಾಡಲು ಅಂತಿಮವಾಗಿ 11,000 ಕ್ಯೂಸೆಕ್​ ಬದಲಿಗೆ 8 ಸಾವಿರ ಕ್ಯುಸೆಕ್ ನೀರು ಬಿಡಲು ನಿರ್ಧಾರ ಮಾಡಲಾಗಿದೆ.

ಸರ್ವಪಕ್ಷಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್,  ನಿತ್ಯ 11,000 ಕ್ಯೂಸೆಕ್‌ ನೀರು ಬದಲು 8000 ಕ್ಯೂಸೆಕ್‌ ಬಿಡುಗಡೆ ಮಾಡಿ ಕಾನೂನು ಹೋರಾಟ ಮಾಡುತ್ತೇವೆ. CWRC ಶಿಫಾರಸು ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸುತ್ತೇವೆ. ಮಳೆ ಕಡಿಮೆಯಾದರೆ 8000 ಕ್ಯೂಸೆಕ್‌ಗಿಂತ ಕಡಿಮೆ ಬಿಡುತ್ತೇವೆ. ಒಂದು ವೇಳೆ ಮಳೆ ಹೆಚ್ಚಾದರೆ CWRC ಶಿಫಾರಸಿನಂತೆ ನೀರು ಬಿಡುಗಡೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ವಸ್ತು ಸ್ಥಿತಿ ಬಗ್ಗೆ ಚರ್ಚೆಯಾಗಿದೆ. ಜುಲೈ 11ರಂದು ನಡೆದ ಸಿಡಬ್ಲ್ಯುಆರ್‌ಸಿ ಸಭೆಯಲ್ಲಿ ಜುಲೈ 12ರಿಂದ 31ರವರೆಗೆ ತಮಿಳುನಾಡಿಗೆ ಪ್ರತಿ ನಿತ್ಯ 1TMC ನೀರನ್ನು ಬಿಡಲು ಆದೇಶ ಮಾಡಲಾಗಿತ್ತು. ಜೂನ್ ತಿಂಗಳಲ್ಲಿ 9.14 ಟಿಎಂಸಿ ನೀರು ಬಿಡಬೇಕಿತ್ತು. 31.24 ಜುಲೈ ತಿಂಗಳಲ್ಲಿ ಬಿಡಬೇಕು. ಒಟ್ಟಾರೆ ಸುಮಾರು 40.43 ಟಿಎಂಸಿ ನೀರು ಬಿಡಬೇಕು. ನಾವು ಈವರೆಗೂ 5 ಟಿಎಂಸಿವರೆಗೂ ನೀರು ಬಿಟ್ಟಿದ್ದೇವೆ ಎಂದು ತಿಳಿಸಿದರು.

8 ಸಾವಿರ ಕ್ಯುಸೆಕ್ ನೀರು ಬಿಡಲು ಸಲಹೆ

ಇನ್ನು ಸರ್ವಪಕ್ಷಗಳ ಸಭೆಯ ಆರಂಭದಲ್ಲಿ ವಿಕ್ಷಗಳ ನಾಯಕರು ಮಾತನಾಡಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆದ್ರೆ, ಈ ವೇಳೆ ಲೀಗಲ್ ಟೀಮ್‌ನ ಮೋಹನ್ ಕಾತರಕಿ ಮಾತನಾಡಿ, 1 ಟಿಎಂಸಿ ಬದಲಿಗೆ 8 ಸಾವಿರ ಕ್ಯೂಸೆಕ್​ ನೀರು ಬಿಡುವುದು ಸೂಕ್ತ ಎಂದು ಸಲಹೆ ನೀಡಿದರು. ನಂತರ ಇವರ ಸಲಹೆಗೆ ಸರ್ವಪಕ್ಷಗಳ ನಾಯಕರು ಸಹ ಒಪ್ಪಿಗೆ ಸೂಚಿಸಿದರು.

ತಮಿಳುನಾಡಿಗೆ ನಿತ್ಯ 1 ಟಿಎಂಸಿ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ CWRC ಆದೇಶಿಸಿತ್ತು. ಇದರ ಬೆನ್ನಲ್ಲೇ ಮೊನ್ನೆ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿದ್ದರೆ. ಆದ್ರೆ, ಇದೀಗ ಸರ್ವಪಕ್ಷಗಳ ಸಭೆಯಲ್ಲಿ ನಿತ್ಯ 1 ಟಿಎಂಸಿ ಬದಲಾಗಿ 8 ಸಾವಿರ ಕ್ಯೂಸೆಕ್​ ನೀರು ಹರಿಸಲು ತೀರ್ಮಾನಿಸಲಾಗಿದೆ.

ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯದ ಪರ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುವ ವಕೀಲ ಮೋಹನ್ ಕಾತರಗಿ, ಮಾಜಿ ಸಿಎಂ ಸದಾನಂದಗೌಡ, ಎಂಎಲ್‌ಸಿ ರವಿ ಕುಮಾರ್‌, ಸುರೇಶ್ ಬಾಬು, ನಾಗರಾಜ್ ಯಾದವ್, ಎಜಿ ಶಶಿಕಿರಣ್ ಶೆಟ್ಟಿ, ಮಂಜೇಗೌಡ, ಜಿಟಿ ದೇವೇಗೌಡ, ಸಿಟಿ ರವಿ, ಛಲವಾದಿ ನಾರಾಯಣಸ್ವಾಮಿ, ಯದವೀರ್ ಒಡೆಯರ್‌, ದರ್ಶನ ಪುಟ್ಟಣ್ಣಯ್ಯ ಹಾಗೂ ಜಲ ಸಂಪನ್ಮೂಲಗಳ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:54 pm, Sun, 14 July 24