
ಬೆಂಗಳೂರು, ಜೂನ್ 26: ನಗರದ (Bengaluru) ಜನತೆಗೆ ಮಾರುಕಟ್ಟೆಯಲ್ಲಿ ಮತ್ತೊಂದು ಭಾರಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದಿನನಿತ್ಯದ ಅಡುಗೆಗೆ ಅತ್ಯಗತ್ಯವಾಗಿರುವ ತರಕಾರಿಗಳ (Vegetable Price Hike) ಬೆಲೆ ಗಗನಕ್ಕೇರಿದ್ದು, ಮಧ್ಯಮ ಹಾಗೂ ಬಡ ವರ್ಗದ ಜನರ ಜೇಬಿಗೆ ಭಾರಿ ಕತ್ತರಿ ಬಿದ್ದಿದೆ. ಕಳೆದ ವಾರ ಗ್ರಾಹಕರ ಕಣ್ಣೀರು ಹಾಕಿಸಿದ್ದ ಟೊಮೇಟೊ ಬೆಲೆ ಈಗ ಕೊಂಚ ಇಳಿಕೆಯಾಗಿದ್ರೂ, ಸದ್ಯ ಬದನೆಕಾಯಿ ಮತ್ತು ಬೀನ್ಸ್ ಸರದಿ ಬಂದಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕೆಜಿ ಬದನೆಕಾಯಿ ಬೆಲೆ ನೂರರ ಗಡಿ ದಾಟಿದ್ದು, ವಾಂಗಿಬಾತ್ ಪ್ರಿಯರಿಗೆ ಭಾರಿ ಶಾಕ್ ನೀಡಿದೆ.
ರಾಜ್ಯಾದ್ಯಂತ ಮುಂಗಾರು ಮಳೆ ಆರಂಭವಾಗಿದ್ದರೂ, ಹವಾಮಾನದ ಏರುಪೇರು ತರಕಾರಿ ಇಳುವರಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಒಂದೆಡೆ ಕೆಲವು ಭಾಗಗಳಲ್ಲಿ ಅತಿವೃಷ್ಟಿಯಿಂದ ಬೆಳೆಗಳು ಕೊಳೆತು ಹೋಗುತ್ತಿದ್ದರೆ, ಇನ್ನೊಂದೆಡೆ ಸಕಾಲಕ್ಕೆ ಮಳೆಯಾಗದ ಕಡೆಗಳಲ್ಲಿ ಅನಾವೃಷ್ಟಿಯಿಂದಾಗಿ ಬೆಳೆಗಳು ನಾಶವಾಗಿವೆ. ಇದರ ನೇರ ಪರಿಣಾಮ ಮಾರುಕಟ್ಟೆಗೆ ಪೂರೈಕೆಯಾಗುವ ತರಕಾರಿಗಳ ಪ್ರಮಾಣ ಭಾರಿ ಕುಸಿದಿದ್ದು, ಬೆಲೆಗಳು ದಿಢೀರ್ ರೇಷ್ಮೆ ದರವನ್ನು ಪಡೆದುಕೊಳ್ಳುತ್ತಿವೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಕೆಜಿ ಬಿಳಿ ಬದನೆಕಾಯಿ ಬೆಲೆ ಬರೋಬ್ಬರಿ 100 ರಿಂದ 140 ರೂಪಾಯಿಗೆ ತಲುಪಿದೆ. ಇನ್ನು ಅಡುಗೆಗೆ ರುಚಿ ನೀಡುವ ಬೀನ್ಸ್, ಬಟಾಣಿ, ಶುಂಠಿ ಮತ್ತು ಬೆಳ್ಳುಳ್ಳಿ ದರಗಳು ಈಗ ‘ಡಬಲ್ ಸೆಂಚುರಿ’ (200 ರೂ.) ಬಾರಿಸಿ ಗ್ರಾಹಕರು ತರಕಾರಿ ಮಾರ್ಕೆಟ್ ಕಡೆ ತಲೆಹಾಕದಂತೆ ಮಾಡಿವೆ. ನುಗ್ಗೆಕಾಯಿ, ಕ್ಯಾಪ್ಸಿಕಂ ಮತ್ತು ಹಸಿಮೆಣಸಿನಕಾಯಿ ದರಗಳೂ ಸಹ ನೂರರ ಗಡಿ ದಾಟಿ ಮುನ್ನುಗ್ಗುತ್ತಿವೆ.
ನಾವೇನು ತಿನ್ನಬೇಕು ಹೇಳಿ? ಸಂಬಳ ಹೆಚ್ಚಾಗಲ್ಲ, ಆದ್ರೆ ತರಕಾರಿ ಬೆಲೆ ದಿನಾ ಹೆಚ್ಚಾಗುತ್ತೆ. ನೂರು ರೂಪಾಯಿ ತಗೊಂಡು ಬಂದ್ರೆ ಒಂದು ಕೆಜಿ ಬದನೆಕಾಯಿನೂ ಬರಲ್ಲ. ಎಲ್ಲಾ ನೂರರ ಗಡಿ ದಾಟಿದೆ. ಸಾಂಬಾರ್ ಮಾಡೋಕೂ ಯೋಚನೆ ಮಾಡಬೇಕಾಗಿದೆ ಎಂದು ಮಾರುಕಟ್ಟೆಗೆ ಬಂದ ಗ್ರಾಹಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ವ್ಯಾಪಾರಿಗಳೂ ಸಹ ತರಕಾರಿ ಬಾರದ ಹಿನ್ನೆಲೆಯಲ್ಲಿ ವ್ಯಾಪಾರ ಕುಂಠಿತಗೊಂಡಿರುವುದಾಗಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಬೆಲೆ ಏರಿಕೆಯ ನಡುವೆ ಗ್ರಾಹಕರಿಗೆ ಸದ್ಯ ಸಮಾಧಾನ ತಂದಿರೋದು ಕೇವಲ ಟೊಮೇಟೊ ಮಾತ್ರ. ಕಳೆದ ವಾರ 60 ರಿಂದ 70 ರೂಪಾಯಿ ಮುಟ್ಟಿದ್ದ ಟೊಮೇಟೊ ಬೆಲೆ, ಈಗ ಮಾರುಕಟ್ಟೆಗೆ ಭರ್ಜರಿ ಆವಕ ಹಿನ್ನೆಲೆಯಲ್ಲಿ 20 ರಿಂದ 30 ರೂಪಾಯಿಗೆ ಇಳಿಕೆಯಾಗಿದೆ. ಆದಾಗ್ಯೂ, ಉಳಿದೆಲ್ಲಾ ಅಗತ್ಯ ವಸ್ತುಗಳು ಮತ್ತು ತರಕಾರಿಗಳ ಬೆಲೆ ಗಗನಕ್ಕೇರಿರುವುದು ಮಧ್ಯಮ ವರ್ಗದ ಜನರ ಬಜೆಟ್ ಅಸ್ತವ್ಯಸ್ತಗೊಳಿಸಿದೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ