ಬೆಂಗಳೂರು, ಸೆ.22: ರಾಜಧಾನಿ ದೆಹಲಿಯಲ್ಲಿ 2022ರ ಮೇ 18 ರಂದು ಶ್ರದ್ದಾ ವಾಕರ್ (Delhi Shraddha Walkar Murder) ಎಂಬ ಯುವತಿಯನ್ನು ಭೀಕರವಾಗಿ ಕೊಲೆ ಮಾಡಿ ಬಳಿಕ ಮೃತದೇಹವನ್ನು 35 ತುಂಡಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ಇಟ್ಟು ನಂತರ ನಗರದ ಹಲವೆಡೆ ಮೃತ ದೇಹ ತುಂಡುಗಳನ್ನು ಎಸೆದಿದ್ದ ಘಟನೆ ನಡೆದಿತ್ತು. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆದರೆ ಇದಕ್ಕೂ ಮೀರಿ ಇನ್ನಷ್ಟು ಕ್ರೂರವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊಲೆಯೊಂದು ನಡೆದಿದೆ(Bengaluru Mahalakshmi Murder). ಇಲ್ಲಿ ಮಹಿಳೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ಇಡಲಾಗಿದೆ. ಇನ್ನು ಕೂಡ ಕೊಲೆ ಆರೋಪಿ ಪತ್ತೆಯಾಗಿಲ್ಲ. ಮಹಿಳೆಯ ಕೊಲೆಯ ಸುತ್ತ ಹಲವಾರು ಅನುಮಾನಗಳು ವ್ಯಕ್ತವಾಗಿವೆ.
ವೈಯಾಲಿಕಾವಲ್ ನಲ್ಲಿ ನಡೆದಿರೊ ಮಹಾಲಕ್ಷ್ಮೀ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿರೊ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಕೊಲೆ ರಹಸ್ಯ ಇನ್ನು ನಿಗೂಢವಾಗಿಯೇ ಉಳಿದಿದೆ. ಈ ಘಟನೆ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೃತಳ ತಾಯಿ ಸೀಮಾ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗ್ತಿದೆ.
ಭೀಕರವಾಗಿ ಕೊಲೆಯಾಗಿರುವ ಮಹಾಲಕ್ಷ್ಮಿ ಪರಸಂಗದ ಪೀಕಲಾಟಕ್ಕೆ ಕೊಲೆಯಾಗಿದ್ದಾರೆ ಎಂಬ ಅನುಮಾನ ಹುಟ್ಟಿಕೊಂಡಿದೆ. ಮೆನ್ಸ್ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿ ಜೊತೆ ಮೃತ ಮಹಾಲಕ್ಷ್ಮಿ ಸಲುಗೆ ಮತ್ತು ಆತ್ಮೀಯತೆ ಹೊಂದಿದ್ದರು. ಆದರೆ ಕೆಲ ದಿನಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು. ಹೀಗಾಗಿ ಮೆನ್ಸ್ ಪಾರ್ಲರ್ ವ್ಯಕ್ತಿಯ ಮೇಲೆ ಪೊಲೀಸರಿಗೆ ಅನುಮಾನ ಹುಟ್ಟಿಕೊಂಡಿದೆ. ಸದ್ಯ ನಾಪತ್ತೆಯಾಗಿರುವ ಮೆನ್ಸ್ ಪಾರ್ಲರ್ ವ್ಯಕ್ತಿಗಾಗಿ ಪೊಲೀಸರು ಹುಡುಕಾಟುತ್ತಿದ್ದಾರೆ.
ಮಹಾಲಕ್ಷ್ಮೀ ಬಾಡಿಗೆ ಮನೆ ಸಮೀಪ ಕಿರಾಣಿ ಅಂಗಡಿ ಇಟ್ಟಿರುವ ಗಜೇಂದ್ರ ಅವರು ಟಿವಿ9 ಜೊತೆ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮೃತ ಮಹಿಳೆ ಮಹಾಲಕ್ಷ್ಮೀಯನ್ನು ಕಳೆದ ತಿಂಗಳು ಕೊನೆಯ ಬಾರಿ ನೋಡಿದ್ದು. ಪ್ರತಿ ನಿತ್ಯ ಕೆಲಸ ಮುಗಿಸಿ ಮನೆಗೆ ತೆರಳ್ತಿದ್ದ ವೇಳೆ ಮಹಾಲಕ್ಷ್ಮೀ ಸ್ನಾಕ್ಸ್ ಖರಿದೀಗೆ ಅಂಗಡಿಗೆ ಬರ್ತಿದ್ದರು. ಮಹಾಲಕ್ಷ್ಮೀ ಅವರು ಭಾರತದ ಈಶಾನ್ಯ ರಾಜ್ಯ ತ್ರಿಪುರ ಮೂಲದವರು. ಇಡೀ ಕುಟುಂಬ ಹಲವು ವರ್ಷಗಳ ಹಿಂದೆಯೇ ನೆಲಮಂಗಲದಲ್ಲಿ ನೆಲೆಸಿದೆ. ಕಳೆದ ಐದು ತಿಂಗಳ ಹಿಂದೆ ನೆಲಮಂಗಲದಲ್ಲಿ ವಾಸವಿದ್ದ ಪತಿ ಜೊತೆ ಜಗಳ ಮಾಡಿಕೊಂಡಿದ್ರು. ಪತಿ, ತಾಯಿ ನೆಲಮಂಗಲದಲ್ಲೇ ವಾಸವಿದ್ದಾರೆ, ಸೋದರಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಮನೆ ನೋಡುವ ವೇಳೆ ಮೂರ್ನಾಕು ಜನರು ಬಂದಿದ್ದರು. ನಾನು ಕೂಡ ಅದೇ ಮನೆಯಲ್ಲಿ ವಾಸವಿದ್ದೇ, ಐದು ತಿಂಗಳ ಹಿಂದೆ ಮನೆ ಖಾಲಿ ಮಾಡಿದ್ದೆ. ಆ ಮನೆಗೆ ಮಹಾಲಕ್ಷ್ಮೀ ಬಂದು ಒಬ್ಬಳೇ ವಾಸವಿದ್ದರು. ಆಗಾಗ ಯುವಕನೋರ್ವ ಆಕೆಯನ್ನು ಪಿಕ್ ಅಪ್ ಡ್ರಾಪ್ ಮಾಡಲು ಬರ್ತಿದ್ದ. ಬೆಳಗ್ಗೆ 9 ಗಂಟೆಗೆ ಮನೆಯಿಂದ ಕೆಲಸಕ್ಕೆ ತೆರಳ್ತಿದ್ದ ಮಹಾಲಕ್ಷ್ಮೀ, ಶೂರೂಂ ನಲ್ಲಿ ಕೆಲಸ ಮುಗಿಸಿ ಪ್ರತಿದಿನ ರಾತ್ರಿ 9:00 ರಿಂದ 9:30 ಮನೆಗೆ ಬರ್ತಿದ್ದರು.
ರಾತ್ರಿ ಮನೆಗೆ ಊಟಕ್ಕೆ ತೆರಳುವ ವೇಳೆ ನೂಡಲ್ಸ್, ಸ್ನ್ಯಾಕ್ಸ್ ಖರೀದಿಸಿ ತೆರಳ್ತಿದ್ದರು. ಕನ್ನಡ ಮತ್ತು ನೇಪಾಳಿ ಭಾಷೆಯನ್ನು ಆಕೆ ಮಾತನಾಡ್ತಿದ್ದರು. ಮಹಾಲಕ್ಷ್ಮೀ ವಾಸವಿದ್ದ ನೆರೆಮನೆಯವರು ಊರಿಗೆ ತೆರಳಿದ್ರು, ನಿನ್ನೆ ಅವ್ರು ವಾಪಾಸ್ ಆಗಿದ್ದರು. ಮಹಾಲಕ್ಷ್ಮೀ ಮನೆಯಿಂದ ದುರ್ವಾಸನೆ ಬರ್ತಿತ್ತು. ಹೀಗಾಗಿ ಅನುಮಾನ ಬಂದು ಮಹಾಲಕ್ಷ್ಮಿಗೆ ಕರೆ ಮಾಡಿದ್ರು, ಆಕೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಮಹಾಲಕ್ಷ್ಮೀ ಸೋದರಿ, ತಾಯಿಗೆ ಕರೆ ಮಾಡಿ ಸಂಪರ್ಕ ಮಾಡಿ ಕರೆಸಿಕೊಂಡಿದ್ದಾರೆ. ಆ ಬಳಿಕ ಫ್ರಿಡ್ಜ್ ನಲ್ಲಿ ಮೃತ ದೇಹದ ತುಂಡುಗಳು ಕತ್ತರಿಸಿಟ್ಟಿರುವುದು ಕಂಡು ಬಂದಿದೆ ಎಂದು ಗಜೇಂದ್ರ ಅವರು ತಿಳಿಸಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ವರದಿ ತುಂಬಾನೇ ಮುಖ್ಯ. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಪ್ರಾಥಮಿಕ ಸಾಕ್ಷ್ಯ ಪತ್ತೆ ಹಚ್ಚೋದೆ ವೈದ್ಯರಿಗೆ ಸವಾಲು. ಹಂತಕ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. Antemortem ಎಂದರೆ ಮರಣಕ್ಕೂ ಮೊದಲಾಗಿರುವ ಗಾಯಗಳನ್ನು ಪತ್ತೆ ಹಚ್ಚುವುದು. Antemortem ಗೊತ್ತಾದರೆ ಯಾವ ಆಯುಧದಿಂದ ಈ ಕೃತ್ಯ ಎಸಗಲಾಗಿದೆ ಎಂಬ ಬಗ್ಗೆ ಅಂದಾಜು ಮಾಡಲಾಗುತ್ತೆ. ಸದ್ಯ ಮೃತದೇಹದ ಎಲ್ಲ ಭಾಗವನ್ನು ಫ್ರೀಜರ್ ಅಲ್ಲಿ ಇಡಲಾಗಿದೆ. ಪೋಸ್ಟ್ ಮಾರ್ಟಂ ಮಾಡಲು ಪೊಲೀಸರಿಂದ ಇನ್ ಕ್ವೆಸ್ಟ್ ಅನುಮತಿ ಸಿಗಬೇಕು. ಪೊಲೀಸರು ಇನ್ ಕ್ವೆಸ್ಟ್ ಅನುಮತಿ ನಂತರ ಪೋಸ್ಟ್ ಮಾರ್ಟಂ ಮಾಡಲಾಗುತ್ತೆ.
Published On - 12:22 pm, Sun, 22 September 24