ಬೆಂಗಳೂರಿನ ಕಸದ ಸಮಸ್ಯೆಗೆ ಬ್ರೇಕ್: ಜಿಪಿಎಸ್ ಟ್ರ್ಯಾಕಿಂಗ್, 9 ಸಾವಿರ ಟನ್ ಸಾಗಣೆ ಸಾಮರ್ಥ್ಯ
ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಗೆ ಜಿಬಿಎ (GBA) ಬೃಹತ್ ಸುಧಾರಣಾ ಯೋಜನೆ ರೂಪಿಸಿದೆ. ಪ್ರತಿದಿನ 9,000 ಟನ್ ತ್ಯಾಜ್ಯ ಸಾಗಣೆ ಸಾಮರ್ಥ್ಯ ವೃದ್ಧಿ, 4,500 ವಾಹನಗಳಿಗೆ GPS ಟ್ರ್ಯಾಕಿಂಗ್ ಕಡ್ಡಾಯಗೊಳಿಸಲಾಗಿದೆ. ಸಚಿವ ಕೃಷ್ಣ ಬೈರೇಗೌಡರು ಸಾರ್ವಜನಿಕರಿಗೆ ಕಸ ವಿಂಗಡಿಸಲು ಮನವಿ ಮಾಡಿದರು. ಬೃಹತ್ ತ್ಯಾಜ್ಯ ಉತ್ಪಾದಕರು ನಿಯಮ ಪಾಲಿಸಬೇಕು. ತ್ಯಾಜ್ಯ ಸಂಸ್ಕರಣೆ ಮತ್ತು ಭೂಭರ್ತಿ ಕಡಿತಕ್ಕೆ ಒತ್ತು ನೀಡಲಾಗಿದೆ.

ಬೆಂಗಳೂರು ಸೆ. 25: ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರು ಕಸ ರಾಶಿ, ಇದೀಗ ಇದರ ನಿರ್ವಹಣೆ ಹಾಗೂ ಈ ಸಮಸ್ಯೆಗೆ ಮುಕ್ತಿ ನೀಡಲು ಸರ್ಕಾರ ಹೊಸ ಪ್ಲಾನ್ ಮಾಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಸಿಲಿಕಾನ್ ಸಿಟಿ ಬೆಂಗಳೂರಿನ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಲು ಬೃಹತ್ ಯೋಜನೆಯನ್ನು ರೂಪಿಸಿದೆ. ನಗರದ ದಿನನಿತ್ಯದ ತ್ಯಾಜ್ಯ ಸಾಗಣೆ ಸಾಮರ್ಥ್ಯವನ್ನು ದಿನಕ್ಕೆ 9,000 ಟನ್‌ಗೆ ಹೆಚ್ಚಿಸಲು ಹಾಗೂ ಪ್ರತಿಯೊಂದು ಕಸ ಸಂಗ್ರಹಣಾ ವಾಹನಕ್ಕೂ ಜಿಪಿಎಸ್ (GPS) ಟ್ರ್ಯಾಕಿಂಗ್ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 6,500 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಸದ್ಯದ ಸಂಗ್ರಹಣಾ ಸಾಮರ್ಥ್ಯ ಕೇವಲ 5,200 ಟನ್‌ನಷ್ಟಿದೆ. ಈ ಕೊರತೆಯನ್ನು ನೀಗಿಸಲು ಸರ್ಕಾರ ಹೊಸ ಯೋಜನೆಗೆ ಚಾಲನೆ ನೀಡಿದೆ.
4,500 ವಾಹನಗಳು ಮತ್ತು 33 ಪ್ಯಾಕೇಜ್‌ಗಳು
ಗುರುವಾರ ನಡೆದ ಘನತ್ಯಾಜ್ಯ ನಿರ್ವಹಣೆ ಕುರಿತ ಶೇರುದಾರರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಹೊಸ ವ್ಯವಸ್ಥೆಯ ವಿವರಗಳನ್ನು ಹಂಚಿಕೊಂಡರು. ಈ ಹಿಂದೆ ಇದ್ದ 27 ವಿಧಾನಸಭಾ ಕ್ಷೇತ್ರ ಆಧಾರಿತ ಪ್ಯಾಕೇಜ್‌ಗಳನ್ನು ರದ್ದುಗೊಳಿಸಿ, ಹೊಸ ವ್ಯವಸ್ಥೆಯಡಿ 33 ಪ್ಯಾಕೇಜ್‌ಗಳಾಗಿ ಮರುಸಂಘಟಿಸಲಾಗಿದೆ. ಕಸ ಸಂಗ್ರಹಣೆಗೆ 2 ಮತ್ತು 3 ಟನ್ ಸಾಮರ್ಥ್ಯದ ದೊಡ್ಡ ವಾಹನಗಳನ್ನು ಬಳಸಲಾಗುತ್ತಿದ್ದು, ನಗರದಾದ್ಯಂತ ಸುಮಾರು 4,500 ವಾಹನಗಳು ಕಾರ್ಯಾಚರಣೆ ನಡೆಸಲಿವೆ. ವಾಹನಗಳು ತಮಗೆ ನಿಗದಿಪಡಿಸಿದ ಮಾರ್ಗದಲ್ಲೇ ಚಲಿಸುತ್ತಿವೆಯೇ ಮತ್ತು ಸರಿಯಾಗಿ ಸೇವೆ ನೀಡುತ್ತಿವೆಯೇ ಎಂಬುದನ್ನು ನಿಗಾ ವಹಿಸಲು ಜಿಪಿಎಸ್ ಟ್ರ್ಯಾಕಿಂಗ್ ಕಡ್ಡಾಯಗೊಳಿಸಲಾಗಿದೆ. ಕಸ ಸಂಗ್ರಹಣೆ ವಾಹನಗಳು ಪ್ರತಿ ಮನೆ ಬಾಗಿಲಿಗೆ ತಲುಪುವುದನ್ನು ಸರ್ಕಾರ ಖಾತ್ರಿಪಡಿಸಲಿದೆ, ಆದರೆ ಸಾರ್ವಜನಿಕರು ಕಸವನ್ನು ರಸ್ತೆಬದಿಯಲ್ಲಿ ಬಿಸಾಡದೆ, ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ವಾಹನಗಳಿಗೆ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.
ಬಲ್ಕ್ ತ್ಯಾಜ್ಯ ಉತ್ಪಾದಕರಿಗೆ ಎಚ್ಚರಿಕೆ ಮತ್ತು ಕಸ ಸಂಸ್ಕರಣೆಯ ಸ್ಥಿತಿಗತಿ:
ನಗರದಲ್ಲಿ ಸುಮಾರು 50,000 ಬಲ್ಕ್ (ಬೃಹತ್) ತ್ಯಾಜ್ಯ ಉತ್ಪಾದಕರಿದ್ದಾರೆ. ಆದರೆ ಕೇವಲ 2,000 ಸಂಸ್ಥೆಗಳು ಮಾತ್ರ ಅಧಿಕೃತ ಏಜೆನ್ಸಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಇನ್ನುಳಿದ ಬಲ್ಕ್ ಉತ್ಪಾದಕರು ದಿನಕ್ಕೆ ಸುಮಾರು 1,000 ಟನ್ ತ್ಯಾಜ್ಯವನ್ನು ಗೃಹಬಳಕೆಯ ಕಸದ ವ್ಯವಸ್ಥೆಗೆ ಸೇರಿಸುತ್ತಿದ್ದಾರೆ. ಅವರು ನಿಯಮ ಪಾಲಿಸಿ ತಮ್ಮ ಮೂಲದಲ್ಲೇ ಕಸವನ್ನು ಸಂಸ್ಕರಿಸಬೇಕು ಎಂದು ಸಚಿವರು ಸೂಚಿಸಿದರು. ಪ್ರಸ್ತುತ ದಿನಕ್ಕೆ 2,100 ಟನ್ ವಿಂಗಡಿಸಿದ ಹಸಿ ಕಸವನ್ನು ಸಂಸ್ಕರಣಾ ಘಟಕಗಳಿಗೆ ಕಳುಹಿಸಲಾಗುತ್ತಿದೆ. ಲ್ಯಾಂಡ್‌ಫಿಲ್‌ಗಳಿಗೆ (ಕಸ ಸುರಿಯುವ ಜಾಗ) ರವಾನೆಯಾಗುವ ಕಸದ ಪ್ರಮಾಣವನ್ನು 4,000 ಟನ್‌ನಿಂದ 2,500 ಟನ್‌ಗೆ ತಗ್ಗಿಸಲಾಗಿದೆ. ‘ಫ್ರೀಡಂ ಫ್ರಮ್ ವೇಸ್ಟ್’ ಅಭಿಯಾನದಡಿ ಜಿಬಿಎ 1.42 ಲಕ್ಷ ಟನ್ ಹಾಗೂ ಬಿಡಿಎ 80,000 ಟನ್ ಹಳೆಯ ತ್ಯಾಜ್ಯವನ್ನು ತೆರವುಗೊಳಿಸಿದೆ.
ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ: ಜನವರಿ ತಿಂಗಳ ಒಳಗಾಗಿಯೇ ಜಲಕ್ಷಾಮದ ಭೀತಿ
ನಾಗರಿಕರಿಂದ ಬಂದ ಪ್ರಮುಖ ಸಲಹೆಗಳು:
- ಸಮಾವೇಶದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಮತ್ತು ಸಂಘಟನೆಗಳು ಕೆಲವು ಪ್ರಮುಖ ಸಲಹೆಗಳನ್ನು ನೀಡಿವೆ.
- ವಾರ್ಡ್ ಮಟ್ಟದಲ್ಲಿ ಕಸ ಸಂಸ್ಕರಣಾ ಘಟಕಗಳು, ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳು ಮತ್ತು RRR (Reduce, Reuse, Recycle) ಕೇಂದ್ರಗಳನ್ನು ಸ್ಥಾಪಿಸುವುದು.
- ಕಸ ಸಂಗ್ರಹಣೆ ವಾಹನಗಳಿಗೆ ತೂಕದ ಯಂತ್ರ ಅಳವಡಿಕೆ ಹಾಗೂ ಬೀದಿ ಕಸ ಗುಡಿಸಲು ಪ್ರತ್ಯೇಕ ವಾಹನ ನಿಯೋಜಿಸುವುದು.
- ಕಂಟ್ರಾಕ್ಟರ್‌ಗಳ ಕಾರ್ಯವೈಖರಿಯನ್ನು ಸಾರ್ವಜನಿಕರು ವೀಕ್ಷಿಸಲು ಮುಕ್ತ ಅವಕಾಶ ನೀಡಿಕಾ ಹಾಗೂ ಮೇಲ್ವಿಚಾರಣೆಗೆ ವೇತನಸಹಿತ ‘ಸಿಟಿಜನ್ ವಾರ್ಡನ್’ ನೇಮಕ ಮಾಡುವುದು.
- ಕಸವನ್ನು ಸರಿಯಾಗಿ ವಿಂಗಡಿಸಿ ನೀಡುವ ಮನೆಗಳಿಗೆ ಪ್ರೋತ್ಸಾಹಧನ ನೀಡುವುದು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




