ವೈದ್ಯನ ಮನೆಯಲ್ಲಿ ಅಪರೂಪದ ವಿದೇಶಿ ಪ್ರಾಣಿಗಳು ಪತ್ತೆ! 7 ಮಂದಿ ಅಂದರ್

ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆ ವೈದ್ಯ ಡಾ. ರಾಜ್ ಕಮಲ್ ಸೇರಿದಂತೆ ಏಳು ಮಂದಿಯನ್ನು ಅಕ್ರಮ ವಿದೇಶಿ ವನ್ಯಜೀವಿ ಕಳ್ಳಸಾಗಣೆ ಆರೋಪದಡಿ ಬಂಧಿಸಲಾಗಿದೆ. ಕುಮಾರಸ್ವಾಮಿ ಲೇಔಟ್‌ನ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದಾಗ ಬಾಲ್ ಹೆಬ್ಬಾವುಗಳು, ಅಪರೂಪದ ಹಲ್ಲಿಗಳು ಹಾಗೂ ಗಾಂಜಾ ಪತ್ತೆಯಾಗಿದೆ. ಇವರು ಥೈಲ್ಯಾಂಡ್, ಮಲೇಷ್ಯಾದಿಂದ ಪ್ರಾಣಿಗಳನ್ನು ತಂದು, '@Zoo2You' ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಶಾಲೆ-ಕಾಲೇಜುಗಳಲ್ಲಿ ಅಕ್ರಮ ಪ್ರದರ್ಶನ ನೀಡುತ್ತಿರುವುದು ಬೆಳಕಿಗೆ ಬಂದಿದೆ.

ವೈದ್ಯನ ಮನೆಯಲ್ಲಿ ಅಪರೂಪದ ವಿದೇಶಿ ಪ್ರಾಣಿಗಳು ಪತ್ತೆ! 7 ಮಂದಿ ಅಂದರ್
ವೈದ್ಯನ ಮನೆಯಲ್ಲಿ ಅಪರೂಪದ ವಿದೇಶಿ ಪ್ರಾಣಿಗಳು ಪತ್ತೆ!
Image Credit source: cbc

Updated on: Jun 05, 2026 | 12:47 PM

ಬೆಂಗಳೂರು, ಜೂನ್ 05: ನಗರದ ಅಕ್ರಮವಾಗಿ ಮತ್ತು ಯಾವುದೇ ಪರವಾನಗಿ ಇಲ್ಲದೆ ವಿದೇಶಿ ಹಾಗೂ ಅತ್ಯಂತ ಅಪರೂಪದ ವನ್ಯಜೀವಿಗಳನ್ನು ಮನೆಯಲ್ಲಿಯೇ ಸಾಕಿದ್ದ ವೈದ್ಯರೊಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ವೈದ್ಯನನ್ನು ಡಾ ರಾಜ್ ಕಮಲ್ ಎಂದು ಗುರುತಿಸಲಾಗಿದ್ದು, ಆತನ ಮನೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಎಕ್ಸೋಟಿಕ್ (Exotic) ಪ್ರಾಣಿ ಮತ್ತು ಪಕ್ಷಿಗಳನ್ನು ರಕ್ಷಿಸಲಾಗಿದೆ. ರಾಜ್ ಸೇರಿದಂತೆ ಇನ್ನೂ 6 ಮಂದಿಯನ್ನು ಈ ಕೇಸ್​ನಲ್ಲಿ ಬಂಧಿಸಲಾಗಿದೆ.

ಮುಖ್ಯಾಂಶಗಳು

  • ಬೆಂಗಳೂರಿನ ಜಯನಗರದ ಖ್ಯಾತ ವೈದ್ಯ ಡಾ. ರಾಜ್ ಕಮಲ್ ಸೇರಿ ಏಳು ಮಂದಿ ಬಂಧನ.
  • ಐಷಾರಾಮಿ ಫ್ಲಾಟ್‌ನಲ್ಲಿ ವಿದೇಶಿ ಹೆಬ್ಬಾವು, ಆಮೆಗಳು ಹಾಗೂ ಗಾಂಜಾ ಪತ್ತೆಯಾಗಿ ತನಿಖೆ ತೀವ್ರ.
  • ಇನ್‌ಸ್ಟಾಗ್ರಾಮ್‌ನ ‘@Zoo2You’ ಖಾತೆಯ ಮೂಲಕ ಮಕ್ಕಳ ಮುಂದೆ ಪ್ರಾಣಿಗಳ ಪ್ರದರ್ಶನ ದಂಧೆ ಬಯಲು.

ಐಷಾರಾಮಿ ಮನೆಯಲ್ಲಿ ವನ್ಯಜೀವಿಗಳ ಸಾಮ್ರಾಜ್ಯ!

ನಗರದ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ವಾಸವಿದ್ದ ಈ ವೈದ್ಯರು, ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಅಂತರರಾಷ್ಟ್ರೀಯ ನಿಯಮಗಳನ್ನು ಗಾಳಿಗೆ ತೂರಿ ಈ ಕೃತ್ಯ ಎಸಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಜಾಗೃತ ದಳ ಮತ್ತು ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ವೈದ್ಯನ ನಿವಾಸದ ಮೇಲೆ ಜಂಟಿ ದಾಳಿ ನಡೆಸಿದಾಗ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಮನೆಯ ಒಳಗೆ ಪ್ರತ್ಯೇಕ ಪಂಜರಗಳು ಮತ್ತು ವಿಶೇಷ ಕೃತಕ ವಾತಾವರಣ ನಿರ್ಮಿಸಿ ವಿವಿಧ ದೇಶಗಳ ವಿಲಕ್ಷಣ ಪ್ರಾಣಿಗಳನ್ನು ಸಾಕಿರುವುದು ಪತ್ತೆಯಾಗಿದೆ.

ಬಾಲ್ ಹೆಬ್ಬಾವುಗಳು, ಹಲ್ಲಿಗಳು, ಆಮೆಗಳು ಸೇರಿದಂತೆ ವಿಲಕ್ಷಣ ವನ್ಯಜೀವಿಗಳು, ವಿಮಾನ ನಿಲ್ದಾಣದ ಸಾಮಾನು ಟ್ಯಾಗ್‌ಗಳನ್ನು ಹೊಂದಿರುವ ಸೂಟ್‌ಕೇಸ್‌ಗಳು ಮತ್ತು ವನ್ಯಜೀವಿ ಕಳ್ಳಸಾಗಣೆಗೆ ಸಂಬಂಧಿಸಿದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಅಕ್ರಮವಾಗಿ ಭಾರತಕ್ಕೆ ತಂದು, ಇಲ್ಲಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುವ ಜಾಲದೊಂದಿಗೆ ವೈದ್ಯನಿಗೆ ಸಂಪರ್ಕವಿತ್ತೇ ಎಂಬ ಆಯಾಮದಲ್ಲಿ ತನಿಖೆ ಆರಂಭವಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ತನಿಖಾಧಿಕಾರಿಗಳು ಗಾಂಜಾ ಕುರುಹುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಂತರರಾಷ್ಟ್ರೀಯ ಪ್ರಾಣಿ ಕಳ್ಳಸಾಗಣೆ ಜಾಲದ ಶಂಕೆ

ವನ್ಯಜೀವಿ ನಿಯಮಾವಳಿಗಳ ಪ್ರಕಾರ, ವಿದೇಶಿ ಮೂಲದ ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಅಥವಾ ಇಟ್ಟುಕೊಳ್ಳಲು ಕೇಂದ್ರ ಸರ್ಕಾರದ ‘ಪರಿವೇಶ್‌’ (PARIVESH) ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು ಮತ್ತು ಸೂಕ್ತ ದಾಖಲೆ ಹೊಂದಿರಬೇಕು. ಆದರೆ ಬಂಧಿತ ವೈದ್ಯನ ಬಳಿ ಯಾವುದೇ ಕಾನೂನುಬದ್ಧ ದಾಖಲೆಗಳು ಇರಲಿಲ್ಲ. ಈ ಪ್ರಾಣಿಗಳನ್ನು ಕಸ್ಟಮ್ಸ್ ಕಣ್ತಪ್ಪಿಸಿ ದೇಶದೊಳಗೆ ಹೇಗೆ ತರಲಾಯಿತು ಮತ್ತು ಇದರ ಹಿಂದೆ ಇರುವ ಅಂತರರಾಷ್ಟ್ರೀಯ ಪ್ರಾಣಿ ಕಳ್ಳಸಾಗಣೆ (Animal Smuggling) ಜಾಲ ಯಾವುದು ಎಂಬುದರ ಕುರಿತು ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳು ವಿದೇಶಿ ಸಾಕುಪ್ರಾಣಿ ವ್ಯಾಪಾರದ ಪ್ರಮುಖ ಕೇಂದ್ರಗಳಾದ ಥೈಲ್ಯಾಂಡ್ ಮತ್ತು ಮಲೇಷ್ಯಾ ಸೇರಿದಂತೆ ದೇಶಗಳಿಗೆ ಆಗಾಗ್ಗೆ ಪ್ರಯಾಣಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಶಾಲೆಗಳು, ಕಾಲೇಜುಗಳು, ಅಪಾರ್ಟ್ಮೆಂಟ್ ಸಂಕೀರ್ಣಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವನ್ಯಜೀವಿ ಶಿಕ್ಷಣ ಕಾರ್ಯಕ್ರಮಗಳನ್ನು ಉತ್ತೇಜಿಸುವ “@Zoo2You” ಎಂಬ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ ಮೇಲೂ ಅನುಮಾನಗಳು ಹುಟ್ಟಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Follow Us