ಬೆಂಗಳೂರು: ಕೆಆರ್ ಮಾರ್ಕೆಟ್ ಬಳಿ ಮಹಿಳೆಯ ರೇಪ್, ಚಿನ್ನಾಭರಣ, ಹಣ ದೋಚಿದ ದುಷ್ಕರ್ಮಿಗಳು
ಕರ್ನಾಟಕದಲ್ಲಿ ನಡೆಯುತ್ತಿರುವ ದರೋಡೆ ಪ್ರಕರಣಗಳು ಜನರಲ್ಲಿ ಆತಂಕ ಮೂಡಿಸಿದೆ. ಈ ನಡುವೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿರುವ ರೇಪ್ ಬೆಚ್ಚಿ ಬೀಳಿಸಿದೆ. ಕೆಆರ್ ಮಾರುಕಟ್ಟೆ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಮಹಿಳೆಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ಚಿನ್ನಾಭರಣ, ನಗದು, ಹಣ ದೋಚಿದ್ದಾರೆ.
ಬೆಂಗಳೂರು, ಜನವರಿ 21: ಮಹಿಳೆಯರ ವಾಸಕ್ಕೆ ಸುರಕ್ಷಿತ ಪ್ರದೇಶಗಳ ಪಟ್ಟಿಯಲ್ಲಿ ಬೆಂಗಳೂರು ನಂಬರ್ 1 ಸ್ಥಾನ ಪಡೆದಿರುವುದೇನೋ ಹೌದು. ಬೆಂಗಳೂರು ಸುರಕ್ಷಿತ ಪ್ರದೇಶ ಎಂಬ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಕೂಡ ಆಯಿತು. ಇಂಥ ಸಂದರ್ಭದಲ್ಲೇ ಬೆಂಗಳೂರು ನಗರದಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ.
ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಘನಘೋರ ಕೃತ್ಯ ನಡೆದಿದೆ. ಕೆಆರ್ ಮಾರ್ಕೆಟ್ನ ಗೋಡೌನ್ ಸ್ಟ್ರೀಟ್ನಲ್ಲಿ ಇಬ್ಬರು ದುಷ್ಕರ್ಮಿಗಳು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಮಧ್ಯರಾತ್ರಿ ಬಸ್ಗಾಗಿ ಕಾಯುತ್ತಿದ್ದ ಮಹಿಳೆ: ನಡೆದಿದ್ದೇನು?
ಭಾನುವಾರ ರಾತ್ರಿ 11.30 ರ ಸುಮಾರಿಗೆ ತಮಿಳುನಾಡು ಮೂಲದ ಮಹಿಳೆ ಯಲಹಂಕಕ್ಕೆ ತೆರಳಲು ಕೆಆರ್ ಮಾರ್ಕೆಟ್ ಬಳಿ ಬಸ್ಗಾಗಿ ಕಾಯುತ್ತಿದ್ದರು. ಯಲಹಂಕ ಕಡೆಗೆ ಬಸ್ ಬರದ ಕಾರಣ ಬಸ್ ಎಲ್ಲಿ ಬರುತ್ತದೆ ಎಂದು ಸ್ಥಳದಲ್ಲಿದ್ದವರಲ್ಲಿ ವಿಚಾರಿಸುತ್ತಿರುವಾಗ ದುಷ್ಕರ್ಮಿಗಳು ಬಂದಿದ್ದಾರೆ. ಬಸ್ ಬರುವ ಜಾಗ ತೋರಿಸತ್ತೇವೆ ಎಂದು ಸಮೀಪದಲ್ಲೇ ಇರುವ ಗೋಡೌನ್ ಸ್ಟ್ರೀಟ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ, ಮಹಿಳೆಯ ಬಳಿ ಇದ್ದ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ.
ತಮಿಳುನಾಡು ಮೂಲದ 37 ವರ್ಷದ ಮಹಿಳೆ ಒಂದು ವಾರದ ಹಿಂದೆ ಗಂಡನ ಜೊತೆ ಜಗಳ ಮಾಡಿಕೊಂಡು ಊರು ಬಿಟ್ಟಿದ್ದರು. ಹೀಗೆ ಊರು ಬಿಟ್ಟಿದ್ದ ಮಹಿಳೆ ಮಠ, ವಿಕ್ಟೋರಿಯಾ ಆಸ್ಪತ್ರೆ ಆವರಣ ಸೇರಿದಂತೆ ಬಿಬಿಎಂಪಿ ನಮ್ಮ ಮನೆಯಲ್ಲೂ ಉಳಿದುಕೊಂಡಿದ್ದರು. ಆದರೆ ಜನವರಿ19 ರಂದು ರಾತ್ರಿ ಭಾನುವಾರ ರಾತ್ರಿ ಬಸ್ ಸ್ಟಾಪ್ನಲ್ಲಿ ಕುಳಿತಿದ್ದ ವೇಳೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಮೊಬೈಲ್, ಹಣ, ಓಲೆ, ಚಿನ್ನದ ತಾಳಿ ಚೈನು ಕಿತ್ತು ಪರಾರಿ ಆಗಿದ್ದಾರೆ.
ಇದೀಗ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ: ಮೂವರು ಆರೋಪಿಗಳ ಬಂಧನ
ಬೀದರ್ನಲ್ಲಿ ಎಟಿಎಂಗೆ ಹಣ ತುಂಬಲು ಬಂದವರ ಮೇಲೆ ನಡೆದಿದ್ದ ಶೂಟೌಟ್, ಮಂಗಳೂರು ಸಮೀಪದ ಉಳ್ಳಾಲದ ಕೋಟೆಕಾರು ಬ್ಯಾಂಕ್ ದರೋಡೆ, ಮೈಸೂರಿನಲ್ಲಿ ದರೋಡೆ ಮಾಡಿ ಉದ್ಯಮಿಯ ಹಣ ಹಾಗೂ ಕಾರು ಸಮೇತ ಪರಾರಿಯಾದ ಘಟನೆಗಳ ಬೆನ್ನಲ್ಲೇ ರಾಜಧಾನಿಯಲ್ಲಿಯೇ ರೇಪ್ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ