ಸರ್ಕಾರದಿಂದ ಉಚಿತ ಬಸ್ ಪ್ರಯಾಣ: ಮಾಸಿಕ ಪಾಸ್ ಖರೀದಿಸಲು ಹಿಂದೇಟು ಹಾಕುತ್ತಿರುವ ಮಹಿಳೆಯರು
ಉಚಿತ ಬಸ್ ಪ್ರಯಾಣಕ್ಕಾಗಿ ಮಹಿಳೆಯರು ಕಾದಿದ್ದು, ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಲು ಪ್ರತಿ ತಿಂಗಳ ಆರಂಭದಲ್ಲಿ ಖರೀದಿಸುತ್ತಿದ್ದ ಮಾಸಿಕ ಪಾಸ್‌ಗಳನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವದ 5 ಗ್ಯಾರೆಂಟಿ (5 Guarantee) ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಸರ್ಕಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ (Free Bus Travel for woman) ಸದ್ಯ ಸಾಕಷ್ಟು ಚರ್ಚೆಯಾಗುತ್ತಿದೆ. ಇನ್ನು ಉಚಿತ ಬಸ್ ಪ್ರಯಾಣಕ್ಕಾಗಿ ಮಹಿಳೆಯರು ಕಾದಿದ್ದು, ಬಿಎಂಟಿಸಿ (BMTC) ಬಸ್‌ಗಳಲ್ಲಿ ಪ್ರಯಾಣಿಸಲು ಪ್ರತಿ ತಿಂಗಳ ಆರಂಭದಲ್ಲಿ ಖರೀದಿಸುತ್ತಿದ್ದ ಮಾಸಿಕ ಪಾಸ್‌ಗಳನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದರ ಬದಲಿಗೆ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್ (Congress) ಸರಕಾರ ಜಾರಿಗೆ ತರಲಿರುವ ಉಚಿತ ಬಸ್ ಪ್ರಯಾಣ ಯೋಜನೆಗಾಗಿ ಅವರು ಕಾತರದಿಂದ ಕಾಯುತ್ತಿದ್ದಾರೆ.
ಬಿಎಂಟಿಸಿ ಬಸ್ ಪಾಸ್ನ ಮಾಸಿಕ ಪಾಸ್ ವೆಚ್ಚದ 1,050 ರೂಪಾಯಿ ಇದೆ. ಇದೀಗ ಈ ಪಾಸ್ ಅನ್ನು ಖರೀದಿಸಿದರೆ ಅದು ವ್ಯರ್ಥವಾಗಲಿದೆ ಎಂದು ಮಹಿಳೆಯರು ಪಾಸ್ ಖರೀದಿಸಲು ಮುಂದಾಗುತ್ತಿಲ್ಲ. ಏಕೆಂದರೆ ಇಂದು (ಜೂ.02) ಸಚಿವ ಸಂಪುಟ ಸಭೆಯ ನಂತರ ಸರ್ಕಾರವು ಈ ವಾರಾಂತ್ಯದಲ್ಲಿ ತನ್ನ ಯೋಜನೆಯನ್ನು ಜಾರಿಗೊಳಿಸುವ ನಿರೀಕ್ಷೆಯಿದೆ.
ಮಾಲತಿ ಎಂಬವರು ಎಂಜಿ ರಸ್ತೆಯಲ್ಲಿನ ಕಚೇರಿಯಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಾರೆ. ಇವರು ಪ್ರತಿದಿನ ಆಜಾದ್‌ನಗರದಲ್ಲಿರುವ ತಮ್ಮ ಮನೆಯಿಂದ ಎಂಜಿ ರಸ್ತೆಗೆ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಈ ಬಗ್ಗೆ ಮಾತನಾಡಿದ ಅವರು ನಾನು ಮಾಸಿಕ ಪಾಸ್ನ್ನು ಖರೀದಿಸುತ್ತೇನೆ. ಅದು ತಿಂಗಳ ಕೊನೆ ದಿನ ಮುಕ್ತಾಯವಾಗುತ್ತದೆ. ಈ ಬಾರಿ ಮೇ 31 ರಂದು ಮುಕ್ತಾಯವಾಗಿದೆ. ಆದರೂ ಕೂಡ ನಾನು ಹೊಸ ಪಾಸ್ ಮಾಡಿಸಿಲ್ಲ. ಏಕೆಂದರೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಯಾಗುವುದರಿಂದ ವಿಳಂಬ ಮಾಡಿದ್ದೇನೆ. ಹೀಗಾಗಿ ನಾನು ಗುರುವಾರ ಟಿಕೆಟ್ ಖರೀದಿಸಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: BMTC: ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕನ ಕರ್ತವ್ಯ ನಿಷ್ಠೆಗೆ ಸಲಾಂ
ಅವರ ಪ್ರಕಾರ, ಮೆಜೆಸ್ಟಿಕ್‌ನಲ್ಲಿ ಮಾಸಿಕ ಪಾಸ್‌ಗಳನ್ನು ಖರೀದಿಸುತ್ತಿದ್ದ ಅನೇಕ ಮಹಿಳೆಯರು ಸಹ ಹೊಸ ಪಾಸ್ ಖರೀದಿಸಲು ವಿಳಂಬ ಮಾಡಿದ್ದಾರೆ. ಏಕೆಂದರೆ ಈಗ ಪಾಸ್ ಖರೀದಿಸಿದರೇ ವ್ಯರ್ಥವಾಗುತ್ತದೆ.
ಆವಲಹಳ್ಳಿ ನಿವಾಸಿ ರತ್ನಮ್ಮ, ಕೆಲಸದ ನಿಮಿತ್ತ ಸೇಂಟ್ ಮಾರ್ಕ್ಸ್ ರಸ್ತೆಗೆ ತೆರಳುತ್ತಾರೆ. ನಾನು ಮಂಗಳವಾರ ಸಂಜೆ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಪಾಸ್ ಖರೀದಿಸಲು ಹೋದಾಗ, ಉಚಿತ ಯೋಜನೆ ಶೀಘ್ರದಲ್ಲೇ ಟೇಕಾಫ್ ಆಗಲಿರುವ ಕಾರಣ ಮುಂದಿನ 2-3 ದಿನಗಳವರೆಗೆ ಟಿಕೆಟ್‌ಗಳನ್ನು ಬಳಸಲು ಬಿಎಂಟಿಸಿ ಅಧಿಕಾರಿ ನನಗೆ ಸಲಹೆ ನೀಡಿದರು. ಈ ಮೂಲಕ ನಾನು ಮಾಸಿಕ ಪಾಸ್‌ಗೆ ಖರ್ಚು ಮಾಡುವ 1,050 ರೂ.ಗಳನ್ನು ಉಳಿಸಬಹುದು ಎಂದು ರತ್ನಮ್ಮ ಹೇಳಿದರು.
ಉಚಿತ ಪ್ರಯಾಣ ಯೋಜನೆಯಿಂದ ಸರ್ಕಾರಕ್ಕೆ 3,500 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತಾದರೂ, ಅಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ 4,200 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬಸ್ ನಿಗಮಗಳ ಅಧಿಕಾರಿಗಳು ಸೂಚಿಸಿರುವ ಮೂರು ಆಯ್ಕೆಗಳಲ್ಲಿ ಒಂದನ್ನು ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆಯ್ಕೆಮಾಡಿ ಉಚಿತ ಪ್ರಯಾಣದ ಘೋಷಣೆ ಮಾಡುವ ನಿರೀಕ್ಷೆಯಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಯೋಜನೆಗೆ ತಗಲುವ ಖರ್ಚು-ವೆಚ್ಚದ ಬಗ್ಗೆ ಈಗಾಗಲೆ ಮಾಹಿತಿ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ