ಇದು ಬ್ರಾಂಡ್ ಬೆಂಗಳೂರಲ್ಲ, ಬ್ಯಾಡ್ ಬೆಂಗಳೂರು: ಕಸದಿಂದ ತುಂಬಿ ತುಳುಕಿದ ಬಸ್​​ ನಿಲ್ದಾಣ

ಬೆಂಗಳೂರು 'ಸಿಲಿಕಾನ್ ವ್ಯಾಲಿ'ಯಾದರೂ, ಸಿ ವಿ ರಾಮನ್ ನಗರದ NGEF ಬಸ್ ನಿಲ್ದಾಣ ಕಸ ಮತ್ತು ನಿರ್ಮಾಣ ತ್ಯಾಜ್ಯದಿಂದ ತುಂಬಿಹೋಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಬಸ್ ಪ್ರಯಾಣಿಕರು ದುರ್ವಾಸನೆ ಮತ್ತು ಅನಾರೋಗ್ಯದ ನಡುವೆ ಪರದಾಡುತ್ತಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಘೋಷಣೆ ಕಸದ ರಾಶಿಯ ನಡುವೆ ಮಸುಕಾಗಿದ್ದು, ಈ ಅವ್ಯವಸ್ಥೆಗೆ ಶೀಘ್ರ ಪರಿಹಾರ ಬೇಕಾಗಿದೆ.

ಇದು ಬ್ರಾಂಡ್ ಬೆಂಗಳೂರಲ್ಲ, ಬ್ಯಾಡ್ ಬೆಂಗಳೂರು: ಕಸದಿಂದ ತುಂಬಿ ತುಳುಕಿದ ಬಸ್​​ ನಿಲ್ದಾಣ
ಕಸದಿಂದ ಕಾಣುತ್ತಿಲ್ಲ ಬಸ್​​ ನಿಲ್ದಾಣ
Image Credit source: Tv9 kannada

Updated on: Feb 03, 2026 | 4:00 PM

ಬೆಂಗಳೂರು, ಫೆ.3: ಬೆಂಗಳೂರು, ಭಾರತದ ‘ಸಿಲಿಕಾನ್ ವ್ಯಾಲಿ’ ಮತ್ತು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕೇಂದ್ರವಾಗಿದೆ. 14,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮತ್ತು 44ಕ್ಕೂ ಹೆಚ್ಚು ಯುನಿಕಾರ್ನ್ ಕಂಪನಿಗಳೊಂದಿಗೆ, ಇದು ಐಟಿ, ಎಐ (AI), ಡೀಪ್‌ಟೆಕ್ ಮತ್ತು ನಾವೀನ್ಯತೆಯ ಪ್ರಮುಖ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಎಲ್ಲ ಕೀರ್ತಿಗೂ ವಿರುದ್ಧವಾಗಿದೆ. ಒಂದು ಕಡೆ ರಾಜ್ಯ ಸರ್ಕಾರದ ಬೆಂಗಳೂರನ್ನು ಬ್ರಾಂಡ್​​ ಸಿಟಿ ಮಾಡುತ್ತೇವೆ ಎಂದು ಹೇಳುತ್ತಿದೆ. ಆದರೆ ಬೆಂಗಳೂರಿನ ಕಸ ರಾಶಿಯನ್ನು ನೋಡಿದ್ರೆ, ಇದು ಬ್ರಾಂಡ್ ಬೆಂಗಳೂರಲ್ಲ, ಬ್ಯಾಡ್ ಬೆಂಗಳೂರು ಎಂದು ಜನ ಹೇಳುತ್ತಿದ್ದಾರೆ. ಇದೇನು ಬಸ್ ನಿಲ್ದಾಣವೋ ಅಥವಾ ಜಿಬಿಎ ಡಂಪಿಂಗ್ ಸ್ಥಳವೋ ಎಂಬುದು ಗೊತ್ತಾಗುತ್ತಿಲ್ಲ. ಸಿ ವಿ ರಾಮನ್ ನಗರದ NGEF ವೃತ್ತದ ಬಳಿ ಇರುವ ಬಸ್​​ ನಿಲ್ದಾಣ ಅವಸ್ಥೆ ಇದು.

ಸಿ ವಿ ರಾಮನ್ ನಗರದ NGEF ವೃತ್ತದ ಬಳಿಯ ಬಸ್ ಸ್ಟಾಪ್ ಸುಮಾರು ದಿನಗಳಿಂದ ಇದೆ ಅವಸ್ಥೆಯಲ್ಲಿದೆ, ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಿಸಿಲ್ಲ, ಗಮನಿಸಿದ್ರು ಇದನ್ನು ಸರಿ ಮಾಡುವ ಯೋಚನೆ ಮಾಡಿಲ್ಲ. ನಾವು ಬೆಂಗಳೂರನ್ನು ಬದಲಾವಣೆ ಮಾಡುತ್ತೇವೆ. “ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ” ಎಂದು ಕೊಚ್ಚಿಕೊಳ್ಳುತ್ತಿರುವ ಜಿಬಿಎ (ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಈ ಕಡೆ ತಲೆ ಕೂಡ ಹಾಕಿಲ್ಲ. ಬಸ್ ಸ್ಟಾಪ್ ಮುಂದೆ ರಾಶಿ ರಾಶಿ ಕಸದ ಮಧ್ಯೆ ಬಸ್​​ಗಾಗಿ ಪ್ರಯಾಣಿಕರ ಪರದಾಡುತ್ತಿದ್ದಾರೆ. ಹಳೆ ಮದ್ರಾಸ್ ರಸ್ತೆಯಲ್ಲಿರುವ ಈ ಬಸ್ ನಿಲ್ದಾಣದಲ್ಲಿ ದಿನವಿಡೀ ಕಸದ ರಾಶಿ ಬಿದ್ದಿರುತ್ತದೆ. ಅಲ್ಲಿನ ದುರ್ವಾಸನೆಯಿಂದಾಗಿ ಪ್ರಯಾಣಿಕರು ನಿಲ್ದಾಣದ ಒಳಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ.

ಇಲ್ಲಿದೆ ನೋಡಿ ವಿಡಿಯೋ:

ಸ್ಥಳೀಯ ಕಟ್ಟಡ ಮಾಲೀಕರು ರಾತ್ರೋರಾತ್ರಿ ಬಂದು ಕಟ್ಟಡದ ತ್ಯಾಜ್ಯವನ್ನು (Construction Debris) ರಸ್ತೆಯ ಮೇಲೆ ಮತ್ತು ಬಸ್ ನಿಲ್ದಾಣದ ಮುಂದೆ ಸುರಿಯುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ.ಲ್ದಾಣದ ಮುಂದೆ ಕಸ ಮತ್ತು ತ್ಯಾಜ್ಯ ಇರುವುದರಿಂದ ಚಾಲಕರು ಬಸ್ ಅನ್ನು ನಿಲ್ಲಿಸದೆ ಹಾಗೆಯೇ ಹೋಗುತ್ತಿದ್ದಾರೆ. ಇದರಿಂದ ಬಸ್‌ಗಾಗಿ ಕಾಯುವ ಪ್ರಯಾಣಿಕರು ರಸ್ತೆಯ ಮಧ್ಯೆ ನಿಂತು ಜೀವದ ಹಂಗು ತೊರೆದು ಪರದಾಡಬೇಕಿದೆ. ಹಲವು ತಿಂಗಳಿಂದ ಈ ಅವಸ್ಥೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಬಿಬಿಎಂಪಿ ಸಿಬ್ಬಂದಿ ಕಣ್ಣೆತ್ತಿ ಕೂಡ ನೋಡಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಯುವತಿಯರೇ ನಿಮ್ಮ ಖಾಸಗಿ ಫೋಟೋ ಇಟ್ಟುಕೊಂಡು ಯಾರಾದರೂ ಬ್ಲ್ಯಾಕ್‌ಮೇಲ್​​​ ಮಾಡುತ್ತಿದ್ದಾರ? ಹೀಗೆ ಮಾಡಿದ್ರೆ ಸಾಕು

“ಇಲ್ಲಿ ಬಸ್ ನಿಲ್ಲಲ್ಲ, ನಿಂತರೂ ಕಸದ ವಾಸನೆಗೆ ನಾವು ನಿಲ್ಲೋಕೆ ಆಗಲ್ಲ. ರಾತ್ರಿ ಹೊತ್ತು ದೊಡ್ಡ ದೊಡ್ಡ ಲಾರಿಗಳಲ್ಲಿ ತಂದು ಕಸ ಹಾಕ್ತಾರೆ, ಕೇಳೋರೇ ಇಲ್ಲದಂತಾಗಿದೆ.” ಎಂದು ರಘು ಎಂಬುವವರು ಹೇಳಿದ್ದಾರೆ. ಬೈಕ್‌ನಲ್ಲಿ ಹೋಗುವಾಗ ಈ ರಸ್ತೆಯಲ್ಲಿ ಬಿದ್ದಿರೋ ಕಟ್ಟಡ ತ್ಯಾಜ್ಯದಿಂದಾಗಿ ಎಷ್ಟೋ ಜನ ಬಿದ್ದಿದ್ದಾರೆ. ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಈ ಕಸ ವಿಲೇವಾರಿ ಮಾಡಬೇಕು.” ಎಂದು ವಾಹನ ಸವಾರ ಚಂದ್ರಶೇಖರ್ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Published On - 3:59 pm, Tue, 3 February 26