ಬೆಂಗಳೂರು: ಫುಟ್ಪಾತ್ ಮೇಲೆ ವಾಹನ ಚಲಾಯಿಸಿದ್ರೆ ಲೈಸೆನ್ಸ್ ರದ್ದು!
ಬೆಂಗಳೂರು ಸಂಚಾರ ಪೊಲೀಸರು ಪಾದಚಾರಿ ಮಾರ್ಗಗಳಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಮೊದಲ ಅಪರಾಧಕ್ಕೆ ದಂಡ ವಿಧಿಸಲಾಗುವುದು, ಪುನರಾವರ್ತಿತ ಅಪರಾಧಕ್ಕೆ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗುವುದು. ಪಾದಚಾರಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪಾದಚಾರಿ ಮಾರ್ಗಗಳಲ್ಲಿ ವಾಹನ ಚಾಲನೆ ಮಾಡುವುದು ಅಪಾಯಕಾರಿ ಮತ್ತು ಕಾನೂನುಬಾಹಿರ ಎಂಬುದನ್ನು ಜನರು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು, ಫೆಬ್ರವರಿ 03: ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಹಾಗೇ, ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೂ ಕೂಡ ಕೆಲವರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದಾರೆ. ಇಂತವರ ವಿರುದ್ಧ ಸಂಚಾರಿ ಪೊಲೀಸರು ಕ್ರಮಕೈಗೊಳ್ಳುತ್ತಿದ್ದಾರೆ. ಟ್ರಾಫಿಕ್ ಜಾಮ್ ಅಂತ ಫುಟ್ಪಾತ್ ಮೇಲೆ ಗಾಡಿ ಓಡಿಸುವವರ ವಿರುದ್ಧ ನೂತನ ಅಸ್ತ್ರ ಪ್ರಯೋಗಿಸಲು ಬೆಂಗಳೂರು ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ.
ದಂಡಾಸ್ತ್ರಕ್ಕೂ ಜಗ್ಗದ ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ (Driving licence) ಅಮಾನತು ಮಾಡಲು ತೀರ್ಮಾನಿಸಿದ್ದಾರೆ. ಪಾದಚಾರಿಗಳ ಸುರಕ್ಷತೆ ದೃಷ್ಠಿಯಿಂದ ಸಂಚಾರಿ ಪೊಲೀಸರು ಈ ನಿಯಮ ಜಾರಿಗೆ ತಂದಿದ್ದಾರೆ. ಈ ಹಿಂದೆ ಫುಟಪಾತ್ ಮೇಲೆ ಗಾಡಿ ಓಡಿಸಿದರೆ ಸಂಚಾರಿ ಪೊಲೀಸರು ದಂಡ ಹಾಕುತ್ತಿದ್ದರು. ದಂಡ ವಿಧಿಸಿದರೂ ವಾಹನ ಸವಾರರು ಮಾತ್ರ, ಜಗ್ಗದೆ ಮತ್ತೆ ತಮ್ಮ ಫುಟ್ಪಾತ್ ಮೇಲೆ ವಾಹನ ಚಲಾಯಿಸುತ್ತಿದ್ದಾರೆ.
ಇದನ್ನೂ ಓದಿ: BTP AsTraM App: ಬೆಂಗಳೂರು ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಅಸ್ತ್ರಂ ಆ್ಯಪ್ ಬಿಡುಗಡೆ, ಇಲ್ಲಿದೆ ವಿವರ
ಹೀಗಾಗಿ, ಬೆಂಗಳೂರು ಸಂಚಾರಿ ಪೊಲೀಸ್ ಹಿರಿಯ ಅಧಿಕಾರಿಗಳು ಸಭೆ ನಡೆಸಿ, ಡ್ರೈವಿಂಗ್ ಲೈಸೆನ್ಸ್ ಅಮಾನತು ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಮೊದಲ ಬಾರಿಗೆ ದಂಡ ಹಾಕಲಾಗುತ್ತದೆ. ಮತ್ತೆ ಮತ್ತೆ ಸಿಕ್ಕಿಬಿದ್ದರೇ, ಆತನ ಲೈಸೆನ್ಸ್ ಅಮಾನತು ಮಾಡುವಂತೆ ಸಂಚಾರಿ ಪೊಲೀಸರು ಶಿಪಾರಸ್ಸು ಮಾಡುತ್ತಾರೆ. ಹೀಗಾಗಿ, ಇನ್ಮುಂದೆ ಫುಟ್ಪಾತ್ ಮೇಲೆ ಗಾಡಿ ಓಡಿಸುವ ಮುನ್ನ ಯೋಚಿಸಿ ಎಂದು ಸಂಚಾರಿ ಪೊಲೀಸರಿ ಎಚ್ಚರಿಕೆ ನೀಡಿದ್ದಾರೆ.
ಟ್ವಿಟರ್ ಪೋಸ್ಟ್
Follow Traffic Rules #BengaluruTrafficPolice #DcpTrafficwest @CPBlr @Jointcptraffic @blrcitytraffic @BlrCityPolice pic.twitter.com/1AfjUooV0h
— DCP TRAFFIC WEST (@DCPTrWestBCP) February 2, 2025
80 ಲಕ್ಷ ರೂ. ದಂಡ ಸಂಗ್ರಹ
ಡ್ರಂಕ್ & ಡ್ರೈವ್ ವಿರುದ್ಧ ಸಂಚಾರಿ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಜನವರಿ 27ರಿಂದ ಫೆ.2ರವರೆಗೆ ತಪಾಸಣೆಯಲ್ಲಿ 80 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಬೆಂಗಳೂರಿನ 50 ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ನಡೆದಿದೆ. ಕಳೆದ 1 ವಾರದಲ್ಲಿ 800 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಮಾಹಿತಿ ನೀಡಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 am, Mon, 3 February 25