545 ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ: ವಿಚಾರಣೆಗೆ ಹಾಜರಾದ ಅಶ್ವತ್ ನಾರಾಯಣ ಹೇಳಿದ್ದಿಷ್ಟು
ಕರ್ನಾಟಕದ 545 ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಡಾ. ಅಶ್ವತ್ಥ್ ನಾರಾಯಣರನ್ನು ವಿಶೇಷ ತನಿಖಾ ತಂಡ ವಿಚಾರಣೆ ನಡೆಸಿದೆ. ಮಾಗಡಿ ಮೂಲದ ಅಭ್ಯರ್ಥಿಗಳ ಹೆಚ್ಚಿನ ಆಯ್ಕೆ ಮತ್ತು ಸಂಬಂಧಿಕರ ಆಯ್ಕೆಯ ಆರೋಪಗಳಿವೆ. ಅಶ್ವತ್ಥ್ ನಾರಾಯಣ ರಾಜಕೀಯ ಪ್ರೇರಿತ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

ಬೆಂಗಳೂರು, ಫೆಬ್ರವರಿ 03: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ (PSI) ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ ಕ್ಷೇತ್ರದ ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣರನ್ನು (Ashwath Narayan) ವಿಶೇಷ ತನಿಖಾ ತಂಡ (SIT) ವಿಚಾರಣೆ ನಡೆಸಿದೆ. ನೇಮಕಾತಿ ಹಗರಣದಲ್ಲಿ ಮಾಗಡಿ ಮೂಲದವರು ಅತಿ ಹೆಚ್ಚಾಗಿ ಮತ್ತು ಸಂಬಂಧಿಕರು ಆಯ್ಕೆ ಆಗಿದ್ದಾರೆ. ಇದನ್ನೆಲ್ಲ ಅಶ್ವಥ್ ನಾರಾಯಣ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಪಿಎಸ್‌ಐ ಹಗರಣದ ಮರುತನಿಖೆಗೆ ಆದೇಶಿಸಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಶ್ವಥ್ ನಾರಾಯಣ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದೆ.
ರಾಜಕೀಯ ಪ್ರೇರಿತ ಎಂದ ಅಶ್ವತ್ ನಾರಾಯಣ
ವಿಚಾರಣೆಗೆ ಹಾಜರಾದ ಅಶ್ವಥ್ ನಾರಾಯಣ ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ, ಇದೊಂದು ರಾಜಕೀಯ ಪ್ರೇರಿತ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ ಹೇಳಿದ್ದಾರೆ.
ಏನಿದು 545 ಪಿಎಸ್ಐ ನೇಮಕಾತಿ ಹಗರಣ
545 ಪಿಎಸ್ಐ ಹುದ್ದೆಗಳ ಭರ್ತಿಗಾಗಿ 2021 ಅಕ್ಟೋಬರ್ 3 ರಂದು ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿನ 93 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಹುದ್ದೆಗಳನ್ನು ಅಕ್ರಮವಾಗಿ ಗಿಟ್ಟಿಸಿಕೊಳ್ಳಲು ಹಣ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಪರೀಕ್ಷಾ ಹಗರಣದಲ್ಲಿ ಹಣದ ಹೊಳೆಯೇ ಹರಿದಿರುವುದು ದೃಢವಾಗಿತ್ತು.
ಪ್ರಕರಣದ ಗಂಭೀರತೆಯನ್ನು ಅರಿತ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಹಿನ್ನೆಲೆ ಪಿಎಸ್ಐ ನೇಮಕಾತಿ ವಿಭಾಗದಲ್ಲಿ ಅಧಿಕಾರಿಗಳಿಗಿಂತ ಬ್ರೋಕರ್ಗಳಿಗೂ ಹಣದ ಹೊಳೆ ಹರಿದಿತ್ತು. ಬ್ರೋಕರ್ಗಳ ಹಂತದಲ್ಲಿಯೂ ಕನಿಷ್ಠ 10 ಲಕ್ಷ, ನೇಮಕಾತಿ ವಿಭಾಗದ ಅಧಿಕಾರಿಗೆ 30-35 ಲಕ್ಷ ತಲುಪುತ್ತಿತ್ತು ಎಂಬ ಅಂಶ ತಿಳಿದುಬಂದಿತ್ತು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ: ತಪ್ಪು ಪ್ರಶ್ನೆಗಳನ್ನು ನೀಡಿ ಅದರಿಂದಲೂ ಸಾವಿರಾರು ರೂ. ಸುಲಿಗೆಗೆ ಮುಂದಾದ ಕೆಇಎ
ಹಗರಣಕ್ಕೆ ಸಂಬಂಧಿಸಿದಂತೆ 110 ಜನರನ್ನು ಬಂಧಿಸಲಾಗಿತ್ತು. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಎಡಿಜಿಪಿ ಶ್ರೇಣಿಯ ಐಪಿಎಸ್ ಅಮೃತ್ ಪಾಲ್ರನ್ನು ಬಂಧಿಸಲಾಗಿತ್ತು.
ಮರು ಪರೀಕ್ಷೆಗೆ 2022 ಏಪ್ರಿಲ್ನಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಆದೇಶ ಪ್ರಶ್ನಿಸಿ ಅಭ್ಯರ್ಥಿಗಳು ಹೈಕೋರ್ಟ್ ಮೊರೆಹೋಗಿದ್ದರು. ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್ ಮರು ಪರೀಕ್ಷೆಗೆ ಸೂಚಿಸಿತ್ತು. ಬಳಿಕ 117 ಕೇಂದ್ರದಲ್ಲಿ 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.