ಸಚಿವ ಸ್ಥಾನಕ್ಕಾಗಿ ದಿಲ್ಲಿಯಲ್ಲಿ ಕೋಲಾರ ಜಿಲ್ಲೆಯ ಶಾಸಕರಿಂದ ಲಾಬಿ: ಇತ್ತ ಕ್ಷೇತ್ರದಲ್ಲಿ ಅಭಿಮಾನಿಗಳಿಂದ ಪೂಜೆ ಪುನಸ್ಕಾರ
ಜೂನ್ 3ರಂದು ಡಿಕೆ ಶಿವಕುಮಾರ್ ಸಿಎಂ ಆಗಿ ಪಟ್ಟಾಭಿಷೇಕ ನಡೆಯಲಿದೆ. ಡಿಕೆ ಶಿವಕುಮಾರ್ ಪಟ್ಟಾಭಿಷೇಕದ ಜೊತೆಗೆ ಸಚಿವರಾಗಿ ಯಾರೆಲ್ಲಾ ಪ್ರಮಾಣವಚನ ಸ್ವೀಕರಿಸ್ತಾರೆಂಬ ಕುತೂಹಲ ಗರಿಗೆದರಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ದೆಹಲಿ ತೆರಳಿದ್ದು ಲಾಬಿ ಜೋರಾಗಿದೆ. ಅತ್ತ ನಾಯಕರು ಸಚಿವ ಸಂಪುಟ ಸೇರಲು ಕೋಲಾರ ಜಿಲ್ಲೆಯ ಶಾಸಕರಿಂದ ಕಸರತ್ತು ನಡೆಸಿದ್ದರೆ, ಇತ್ತ ಅವರ ಬೆಂಬಲಿಗರಿಂದ ಪೂಜೆ ಪುನಸ್ಕಾರ ಮಾಡಲಾಗುತ್ತಿದೆ.

ಕೋಲಾರ, ಜೂನ್ 01: ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜೂನ್ 3ರಂದು ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಿಲಿದ್ದಾರೆ. ಈ ನಡುವೆ ಡಿಕೆ ಶಿವಕುಮಾರ್ (DK Shivakumar) ಸಚಿವ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆದಿದ್ದು, ಈಗಾಗಲೇ ಜಿಲ್ಲೆಯ ಶಾಸಕರು ದೆಹಲಿಗೆ ತೆರಳಿದ್ದಾರೆ. ಆದರೆ ಇತ್ತ ಅಭಿಮಾನಿಗಳು ಮತ್ತು ಬೆಂಬಲಿಗರು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ.
ಮುಖ್ಯಾಂಶಗಳು
- ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಜೋರಾದ ಲಾಬಿ
- ಇತ್ತ ಅಭಿಮಾನಿಗಳಿಂದ ನಾನಾ ಕಸರತ್ತು
- ದೇವಾಲಯದಲ್ಲಿ ವಿಶೇಷ ಪೂಜೆ, ಅರೆ ಬೆತ್ತಲೆ ಸೇವೆ
ಡಿಕೆ ಶಿವಕುಮಾರ್ ಸಿಎಂ ಆಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಈ ನಡುವೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನಕ್ಕೆ ಲಾಬಿ ಜೋರಾಗಿದೆ. ಅದರಲ್ಲೂ ಮೂರು ಬಾರಿ ಶಾಸಕರಾಗಿ ಜಿಲ್ಲೆಯ ಹಿರಿಯ ಶಾಸಕ ಹಾಗೂ ಎಸ್.ಸಿ ಬಗಲೈ ಸಮುದಾಯದ ಶಾಸಕ ಎಸ್.ಎನ್.ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡಬೇಕೆಂದು ಬಂಗಾರಪೇಟೆ ಕ್ಷೇತ್ರದ ಮುಖಂಡರು ಹಾಗೂ ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ.
ದೇವಾಲಯದಲ್ಲಿ ಅರೆ ಬೆತ್ತಲೆ ಸೇವೆ
ಇಂದು ಅವರ ಹುಟ್ಟುಹಬ್ಬ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗಲೆಂದು ಬಂಗಾರಪೇಟೆಯ ಶ್ರೀಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಲಾಗಿದೆ. ನಂತರ ದೇವಾಲಯ ಎದುರು ಅರೆ ಬೆತ್ತಲೆಯಾಗಿ ಮಂಡಿಯೂರಿ ಕುಳಿತು ದೇವಾಲಯದ ಮೆಟ್ಟಿಲುಗಳನ್ನು ಹತ್ತುವ ಸಚಿವ ಸ್ಥಾನ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ ದೇವಾಲಯದ ಆವರಣದಲ್ಲಿ ಉರುಳು ಸೇವೆ ಕೂಡ ಮಾಡಿದರು.
ಇದನ್ನೂ ಓದಿ: ಸಂಪುಟ ಸೇರಲು ಕಸರತ್ತು: ಡಿಕೆ ಶಿವಕುಮಾರ್ ನಿವಾಸಕ್ಕೆ ಮಾಜಿ ಸಚಿವರು, ಶಾಸಕರ ಪರೇಡ್!
ಇನ್ನು ಜಿಲ್ಲೆಯಲ್ಲಿ ಒಟ್ಟು ನಾಲ್ಕು ಜನ ಕಾಂಗ್ರೆಸ್ ಶಾಸಕರಿದ್ದು, ಆ ಪೈಕಿ ಬಂಗಾರಪೇಟೆ ಶಾಸಕ ಎಸ್.ಎನ್, ನಾರಾಯಣಸ್ವಾಮಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳುರು ಗ್ರಾಮಾಂತರ ಜಿಲ್ಲೆಗಳ ಪೈಕಿ ಎಸ್.ಸಿ. ಬಲಗೈ ಸಮುದಾಯದ ಏಕೈಕ ಶಾಸಕ ಹಾಗೂ ಮೂರು ಬಾರಿ ಸತತವಾಗಿ ಬಂಗಾರಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇನ್ನು ಹಿರಿಯ ಶಾಸಕ ಅನ್ನೋ ಕಾರಣಕ್ಕೆ ಉಳಿದ ಶಾಸಕರಾದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ಕೊತ್ತೂರು ಮಂಜುನಾಥ್ ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರುಗಳಾದ ನಸೀರ್ ಅಹಮದ್ ಮತ್ತು ಅನಿಲ್ ಕುಮಾರ್ ಕೂಡ ಎಸ್.ಎನ್.ನಾರಾಯಣ ಸ್ವಾಮಿಗೆ ಸಚಿವ ಸ್ಥಾನ ಕೊಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.
ಮಹಿಳಾ ಕೋಟಾದಡಿ ಸಚಿವ ಸ್ಥಾನಕ್ಕೆ ಕೆಜಿಎಫ್ ಶಾಸಕಿ ರೂಪಕಲಾ ಮನವಿ
ಇತ್ತ ಕೆಜಿಎಫ್ ಶಾಸಕಿ ರೂಪಕಲಾ ಮಾತ್ರ ಮಹಿಳಾ ಕೋಟಾದಡಿ ತಮಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಅಲ್ಲದೆ ಮಗಳ ಪರವಾಗಿ ಸಚಿವ ಕೆಹೆಚ್ ಮುನಿಯಪ್ಪ ಕೂಡ ಬ್ಯಾಟಿಂಗ್ ಮಾಡುತ್ತಿದ್ದು, ತಮಗೆ ಇಲ್ಲ, ಮಗಳಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಬಂಗಾರಪೇಟೆಯ ಎಸ್ಸಿ ಬಲಗೈ ಸಮುದಾಯದ ಮುಖಂಡರು ಆಕ್ರೋಶ ಹೊರಹಾಕಿದ್ದು ಎಸ್.ಎನ್.ನಾರಾಯಣಸ್ವಾಮಿಗೆ ಸಚಿವ ಸ್ಥಾನ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಬಗಲೈ ಸಮುದಾಯ ಕಾಂಗ್ರೆಸ್ ವಿರುದ್ಧ ಕೆಲಸ ಮಾಡದ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಡಿಕೆಶಿ ಸಂಪುಟದಲ್ಲಿ ಯಾರ್ಯಾರು ಸಚಿವರಾಗುತ್ತಾರೆ?: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್ ಅಪ್ಡೇಡ್ ನೀಡಿದ ನಿಯೋಜಿತ ಸಿಎಂ
ಒಟ್ಟಾರೆ ರಾಜ್ಯದಲ್ಲಿ ನೂತನ ಸಿಎಂ ಹಾಗೂ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ವಿಚಾರದಲ್ಲಿ ಕೋಲಾರ ಜಿಲ್ಲೆಯ ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಎನ್ನುವುದು ಸಾಕಷ್ಟು ಕುತೂಹಲ ಮೂಡಿಸಿದ್ದು, ನಾಲ್ವರಲ್ಲಿ ಅವಕಾಶ ಯಾರಿಗೆ ಅನ್ನೋದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:25 pm, Mon, 1 June 26




